ಮಂಗಳೂರು: ಕೋವಿಡ್ ಸಂದಿಗ್ಧ ಕಾಲದಲ್ಲಿ ಜನಸೇವೆಯಲ್ಲಿ ತೊಡಗಿಸಿಕೊಂಡ ಆಸ್ಟ್ರೇಲಿಯದಲ್ಲಿ ಕಲಿಯುತ್ತಿರುವ ಮಂಗಳೂರು ಮೂಲದ ವಿದ್ಯಾರ್ಥಿಯನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಾರೆಯೋರ್ವರು ಅಭಿನಂದಿಸಿದ್ದಾರೆ. ಭಾರತೀಯ ವಿದ್ಯಾರ್ಥಿಯ ಸೇವೆ ಅಗಾಧವಾದದ್ದು ಎಂದು ಕ್ರಿಕೆಟಿಗ ಬಣ್ಣಿಸಿದ್ದಾರೆ. ಆಸ್ಟ್ರೇಲಿಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ, ಡೇವಿಡ್ ವಾರ್ನರ್ ಅವರೇ ವಿದ್ಯಾರ್ಥಿ ಶ್ರೇಯಸ್ ಶೇಟ್‌ಗೆ ಧನ್ಯವಾದ ಸಲ್ಲಿಸಿದ ಕ್ರಿಕೆಟ್ ತಾರೆ. ಮಂಗಳೂರು ದೇರೆಬೈಲ್ ನಿವಾಸಿ ಶ್ರೇಯಸ್ ಶೇಟ್ ಆಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡ್ ವಿ.ವಿ.ಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಎರಡನೇ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ. ಸಂಕಷ್ಟಕ್ಕೊಳಗಾದವರ ಸೇವೆಗೆ ಆ ದೇಶದ ವಿವಿಧ ವಿಶ್ವವಿದ್ಯಾನಿಲಯಗಳಿಂದ ಆಯ್ಕೆ ಯಾದ ಐವರು ಭಾರತೀಯ ವಿದ್ಯಾರ್ಥಿಗಳ ಪೈಕಿ ಶ್ರೇಯಸ್ ಕೂಡ ಒಬ್ಬರು. ಲಾಕ್‌ಡೌನ್ ನಡುವೆಯೂ ದಿನನಿತ್ಯ ಆಹಾರ ಒದಗಿಸುವಲ್ಲಿ ಸಕ್ರಿಯವಾಗಿ ಮತ್ತು ಶ್ರದ್ಧೆಯಿಂದ ತೊಡಗಿಸಿಕೊಂಡ ಶ್ರೇಯಸ್ ಶ್ರಮದ ಬಗ್ಗೆ ಮಾಹಿತಿ ಪಡೆದು ಕೊಂಡ ವಾರ್ನರ್ ವೀಡಿಯೋ ಸಂದೇಶದ ಮೂಲಕ ಶ್ರೇಯಸ್ ಶ್ರಮವನ್ನು ಅಭಿನಂದಿಸಿದ್ದಾರೆ. ಅಲ್ಲದೆ, ಭಾರತ ದೇಶಕ್ಕೆ ಮತ್ತು ಶ್ರೇಯಸ್ ಹೆತ್ತವರ ಪಾಲಿಗೆ ಆತ ಹೆಮ್ಮೆ ತಂದಿದ್ದಾನೆ ಎಂದು ಹೇಳಿದ್ದಾರೆ.
ವಾರ್ನರ್ ಹಾರೈಕೆ ಖುಷಿ ನೀಡಿದೆ
ಕೋವಿಡ್ ದಂತಹ ಸಂಕಷ್ಟ ಕಾಲದಲ್ಲಿ ಯುಕ್ಯೂ ಇಂಟರ್‌ನ್ಯಾಶನಲ್ ಸಂಸ್ಥೆಯ ಜತೆ ಸೇರಿ ಸಂಕಷ್ಟದಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಆಹಾರ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದೆ. ಸಕ್ರಿಯವಾಗಿ ಇದರಲ್ಲಿ ತೊಡಗಿಸಿಕೊಂಡಿರುವುದು ವಾರ್ನರ್ ಅವರ ಗಮನಕ್ಕೆ ಬಂದಿದ್ದು, ಅವರು ನನ್ನನ್ನು ಗುರುತಿಸಿರುವುದು ಖುಷಿಯಾಗಿದೆ. ಆದರೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಎಂದು ಶ್ರೇಯಸ್ ಹೇಳಿದ್ದಾರೆ. ಶ್ರೇಯಸ್ ಅವರು ರೋಟರಿ ಕ್ಲಬ್ ಮಂಗಳೂರಿನ ಮಾಜಿ ಅಧ್ಯಕ್ಷ ಸಂತೋಷ್ ಶೇಟ್ ಹಾಗೂ ಎಂಜಿನಿಯರ್ ಆರತಿ ಶೇಟ್ ಅವರ ಪುತ್ರ. ವಾಮಂಜೂರು ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮುಗಿಸಿದ ಬಳಿಕ ಕಳೆದೆರಡು ವರ್ಷಗಳಿಂದ ಆಸ್ಟ್ರೇಲಿಯದಲ್ಲಿದ್ದಾರೆ.