ಆಹಾರ ಇಲಾಖೆಯ ದತ್ತಾಂಶ ನಿರ್ವಹಣೆಗೆ ಬಳಸಲಾಗುತ್ತಿರುವ “ಆಹಾರ ತಂತ್ರಾಂಶ’ ಸುಮಾರು 10 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿತ್ತು. ಈಗ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಅದಕ್ಕೆ ತಕ್ಕಂತೆ ತಂತ್ರಾಂಶ ಸಹ ಅಭಿವೃದ್ಧಿಪಡಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಆಹಾರ ತಂತ್ರಾಂಶವನ್ನು ಉನ್ನತೀಕರಿಸಲು 2020-21ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಜೊತೆಗೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಉಸ್ತುವಾರಿಯನ್ನು ಬಿಗಿಗೊಳಿಸಲು ‘ಇ-ಮಾಪನ’ ತಂತ್ರಾಂಶ ಸಹ ಉನ್ನತೀಕರಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
2 ಲಕ್ಷ ಮನೆ ನಿರ್ಮಾಣಕ್ಕೆ 2500 ಕೋಟಿ ಅನುದಾನ: ಸರ್ವರಿಗೂ ಸೂರು ಕಲ್ಪಿಸಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಪೂರ್ಣ ಹಂತದಲ್ಲಿರುವ 2 ಲಕ್ಷ ಮನೆಗಳನ್ನು ಪೂರ್ಣಗೊಳಿಸಿ, ವಸತಿ ರಹಿತರಿಗೆ ಹಂಚಿಕೆ ಮಾಡಲು 2500 ಕೋಟಿ ರೂ. ಮೀಸಲಿಟ್ಟಿದ್ದಾರೆ. ಬಡವರಿಗೆ ಹಂಚಿಕೆಯಾಗಿರುವ ಸಾಕಷ್ಟು ಮನೆಗಳು ಇನ್ನೂ ಪೂರ್ಣಗೊಂಡಿಲ್ಲ.
ಅಪೂರ್ಣ ಹಂತದಲ್ಲಿರುವ ಮನೆಗಳನ್ನು ಪೂರ್ಣಗೊಳಿಸಿ, ವಸತಿ ರಹಿತರಿಗೆ ಹಂಚಿಕೆ ಮಾಡುವುದನ್ನು ಆದ್ಯತೆಯಾಗಿ ಪರಿಗಣಿಸಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹೆಚ್ಚುವರಿ ಅನುದಾನವನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ಹಲವಾರು ವರ್ಷಗಳಿಂದ ಲಕ್ಷಾಂತರ ಕುಟುಂಬಗಳಿಗೆ ವಿವಿಧ ವಸತಿ ಯೋಜನೆಗಳಡಿಯಲ್ಲಿ ಮನೆ ನಿರ್ಮಿಸಲು ಸಹಾಯಧನವನ್ನು ನೀಡುತ್ತಾ ಬಂದಿದ್ದು, ಫಲಾನುಭವಿಗಳು ತಮ್ಮ ನಿವೇಶನವನ್ನು ನಿಗಮಕ್ಕೆ 10 ವರ್ಷಗಳ ಕಾಲ ಅಡಮಾನ ಇಡಬೇಕಾಗಿತ್ತು.
10 ವರ್ಷ ಪೂರ್ಣಗೊಂಡರೂ ಹಲವಾರು ಪ್ರಕರಣಗಳಲ್ಲಿ ಅಡಮಾನವನ್ನು ಹಿಂಪಡೆಯಲು ಸಾಧ್ಯವಾಗುತ್ತಿಲ್ಲ, ಮನೆಗಳನ್ನು ನಿರ್ಮಿಸಿಕೊಂಡು 10 ವರ್ಷವಾಗಿದ್ದಲ್ಲಿ ಡೀಮ್ಡ್ ರಿಲೀಸ್ ಎಂದು ಪರಿಗಣಿಸಲು ಬಜೆಟ್‌ನಲ್ಲಿ ತಿಳಿಸಲಾಗಿದೆ. ಬೆಂಗಳೂರು ಸೇರಿ ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಅಧಿಸೂಚಿತವಲ್ಲದ ಹಲವಾರು ಕೊಳೆಗೇರಿ ಪ್ರದೇಶಗಳು ಇದ್ದು, ಈ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು 200 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ವಿವಿಧ ಯೋಜನೆಗಳಡಿ ವಸತಿ ಇಲಾಖೆಗೆ ಒಟ್ಟಾರೆ 2971 ಕೋಟಿ ರೂ. ಮೀಸಲಿಡಲಾಗಿದೆ.
ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಪತಿ ಕುಮಾರಸ್ವಾಮಿಯವರ ಮೇಲೆ ದ್ವೇಷ ಸಾಧಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಘೋಷಿಸಿದ್ದ ಬಡವರ ಬಂಧು, ಸಾಲಮನ್ನಾದ ವಿಚಾರ ಬಜೆಟ್‌ನಲ್ಲಿ ಪ್ರಸ್ತಾಪವೇ ಮಾಡಿಲ್ಲ. ಬಜೆಟ್‌ನಲ್ಲಿ ನನಗೆ ಯಾವುದೇ ಗುಡ್ ಅನ್ನಿಸುವ ಅಂಶ ಇಲ್ಲ. ಇದೊಂದು ನೀರಸ ಬಜೆಟ್.
-ಅನಿತಾ ಕುಮಾರಸ್ವಾಮಿ, ಜೆಡಿಎಸ್ ಶಾಸಕಿ
ಕರಾವಳಿ ಜಿಲ್ಲೆಯ ಮೀನುಗಾರಿಕೆಗೆ ಮತ್ತು ಬಂದರು ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಕೃಷಿ, ನೀರಾವರಿ, ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ಕೃಷಿ ಕ್ಷೇತ್ರಕ್ಕೂ ಕೂಡ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿರುವ ಬಜೆಟ್ ಜನಹಿತ ಬಜೆಟ್ ಆಗಿದೆ.
-ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ, ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಸಚಿವ
ರಾಜ್ಯದ ಎಲ್ಲ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲಾ ಕ್ಷೇತ್ರಗಳಿಗೂ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸುಸ್ತಿ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿದೆ. ಇದೊಂದು ರೈತ ಪರವಾದ ಬಜೆಟ್.
-ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ
ರೈತರ ಸಾಲಮನ್ನಾ ಗೊಂದಲ ನಿವಾರಣೆ ಬಗ್ಗೆ ಎಲ್ಲೆಯೂ ಉಲ್ಲೇಖವಿಲ್ಲ. ಶಾಸನಬದ್ಧ ಬೆಂಬಲ ಬೆಲೆ ನಿಗದಿ ಮಾಡುವ ಬಗ್ಗೆ ಪ್ರಸ್ತಾಪವಿಲ್ಲ. ಆದರೆ ಕೃಷಿ ಕ್ಷೇತ್ರಕ್ಕೆ 32,259 ಕೋಟಿ ರೂ.ಏತ ನೀರಾವರಿ ಯೋಜನೆಗಳಿಗೆ 5,000 ಕೋಟಿ ರೂ.ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ. ಹಾಗೂ ಮಹಾದಾಯಿ ಯೋಜನೆಗೆ 500 ಕೋಟಿ ರೂ.ಮೀಸಲಾಗಿರುವುದು ಸ್ವಾಗತಾರ್ಹ.
-ಕುರುಬೂರು ಶಾಂತಕುಮಾರ್, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ