Advertisement

ವಿಷಾಹಾರ ಸೇವನೆ: 95 ವಿದ್ಯಾರ್ಥಿಗಳು ಅಸ್ವಸ್ಥ

06:00 AM Dec 21, 2018 | Team Udayavani |

ಸಿರುಗುಪ್ಪ/ಕಮತಗಿ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಹಾಗನೂರು ಹಾಗೂ ಬಾಗಲ ಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕಮಾಗಿಯಲ್ಲಿ ಬಿಸಿಯೂಟ ಸೇವಿಸಿ ಒಟ್ಟು 95ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ಗುರುವಾರ ನಡೆದಿದೆ. ಈ ಪ್ರತ್ಯೇಕ ಘಟನೆಗಳಿಂದ ಎರಡೂ ಕಡೆ ಪೋಷಕರು ಕೆಲ ಕಾಲ ಕಂಗಾಲಾದ ಸ್ಥಿತಿ ನಿರ್ಮಾಣವಾಯಿತು.

Advertisement

ಚಾಮರಾಜನಗರದಲ್ಲಿ ನಡೆದ ಬೆಚ್ಚಿಬೀಳಿ ಸುವ “ವಿಷಪ್ರಸಾದ’ ಘಟನೆ ಬೆನ್ನಲ್ಲೇ ಮತ್ತೆ ಅಂಥ ದುರಂತ ನಡೆಯದಿರಲೆಂದು ಜನ ದೇವರಲ್ಲಿ ಪ್ರಾರ್ಥಿಸುವಂತಾಯಿತು. ಅದೃಷ್ಟವಶಾತ್‌ ಮಕ್ಕಳೆಲ್ಲರೂ ಪ್ರಾಣಾಪಾಯದಿಂದಪಾರಾಗಿ ದ್ದಾರೆ. ಅಸ್ವಸ್ಥರಾದ ಮಕ್ಕಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆತಂಕವೇನಿಲ್ಲ ಎಂದು ಉಭಯ ಜಿಲ್ಲೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಸಿರುಗುಪ್ಪದಲ್ಲಿ ಆಗಿದ್ದೇನು?: ಸಿರುಗುಪ್ಪದ ಹಾಗಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗುರುವಾರ ಕೆಟ್ಟಗಳಿಗೆಯೊಂದು ಕಾದಿತ್ತು. 290 ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಹಾಜರಾಗಿದ್ದರು. ಇವರಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದರು. ಊಟ ಮುಗಿಸಿದ ಕೆಲ ಕ್ಷಣಗಳಲ್ಲೇ ಕೆಲವರು ವಾಂತಿ ಮಾಡಲಾರಂಭಿಸಿದ್ದಾರೆ. ಇನ್ನು ಕೆಲ ವಿದ್ಯಾರ್ಥಿಗಳು ಹೊಟ್ಟೆನೋವು, ತಲೆನೋವಿನಿಂದ ಬಳಲಿದರು. ತಕ್ಷಣ ಶಿಕ್ಷಕರು ಸಮೀಪದ ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಇವರಲ್ಲಿ 19 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿದೆ.

ತಿಳಿಯದ ನಿಖರ ಕಾರಣ: ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಡುಗೆ ತಯಾರಿಸುವ ಬೇಳೆ-ಕಾಳು, ಅಕ್ಕಿ ಅಥವಾ ತರಕಾರಿಯಲ್ಲಿ ಏನಾದರೂ ವ್ಯತ್ಯಾಸ ವಾಗಿತ್ತೇ ಎಂಬುದು ತಿಳಿದಿಲ್ಲ. ಅಲ್ಲದೆ, ತಯಾರಿಸಿಟ್ಟ ಆಹಾರ ವಿಷಪೂರಿತವಾಗಿತ್ತೇ ಅಥವಾ ಸಾಂಬಾರ್‌ನಲ್ಲಿ ಹಲ್ಲಿ ಬಿದ್ದಿತ್ತೇ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ. ಆಹಾರವನ್ನು ಪರೀಕ್ಷೆಗೆ ಕಳುಹಿಸಲು ನಿರ್ಧರಿಸಲಾಗಿದ್ದು,  ಯೋಗಾಲಯದ ವರದಿ ನಂತರವೇ ನಿಖರ ಕಾರಣ ತಿಳಿಯಬೇಕಿದೆ. 

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಎಚ್‌ಒ ಡಾ| ಶಿವರಾಜ್‌ ಹೆಡೆ ಭೇಟಿ ನೀಡಿ, ವಿದ್ಯಾರ್ಥಿಗಳು, ಪೋಷಕರು
ಗಾಬರಿಯಾಗಬಾರದು. ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಮಕ್ಕಳಿಗೆ ಯಾವುದೇ ತೊಂದರೆಯಿಲ್ಲ. ಮುಂಜಾಗ್ರತೆಗಾಗಿ ಕೆಲವು
ವೈದ್ಯರನ್ನು ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ತಹಶೀಲ್ದಾರ್‌ ದಯಾನಂದ
ಪಾಟೀಲ್‌, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ.ಭಜಂತ್ರಿ ಆಸ್ಪತ್ರೆಗೆ ಭೇಟಿ ಮಕ್ಕಳ ಆರೋಗ್ಯ ವಿಚಾರಿಸಿದರು.

Advertisement

ತರಾಟೆ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಡವಾಗಿ ಆಗಮಿಸಿದ ತಾಲೂಕು ವೈದ್ಯಾಧಿಕಾರಿ ಸುರೇಶ್‌ಗೌಡ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ವಿಷಯ ತಿಳಿದು ಪೋಷಕರು, ಗ್ರಾಮದ ಸುತ್ತಮುತ್ತಲಿನ ನೂರಾರು ಜನ ಪ್ರಾಥಮಿಕ ಆರೋಗ್ಯ ಕೇಂದ್ರದತ್ತ ಜಮಾಯಿಸಿದರು. ಸ್ಥಳದಿಂದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ತಾಲೂಕು ವೈದ್ಯಾಧಿಕಾರಿ ಡಾ| ಸುರೇಶ್‌ ಗೌಡ, ನಗರದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಜಗನ್ನಾಥ್‌, ಕಂದಾಯ ಅಧಿಕಾರಿ ಶೇಷಗಿರಿ, ಪಿಎಸ್‌ಐ ವಿಜಯಕುಮಾರ್‌, ಜಿಪಂ ಸದಸ್ಯ ಎಂ.ಕೋಟೇಶ್ವರರೆಡ್ಡಿ, ತಾಪಂ ಉಪಾಧ್ಯಕ್ಷ ಶಾಂತನಗೌಡ, ಮುಖಂಡರಾದ ಮಾರೆಪ್ಪ, ಎಂ.ಎಸ್‌.ವೆಂಕಟಪ್ಪ ಇದ್ದರು.

ಬಿಸಿಯೂಟ ತಯಾರಿಸುವವರ ಮತ್ತು ಮುಖ್ಯ ಶಿಕ್ಷಕರ ನಿರ್ಲಕ್ಷದಿಂದ ಈ ಘಟನೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 
● ಪಿ.ಡಿ.ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ

ಅದೃಷ್ಟವಶಾತ್‌ ಈ ಘಟನೆಯಿಂದ ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ. ಮಕ್ಕಳು ಅಸ್ವಸ್ಥರಾಗಲು ಕಾರಣವಾದ ಬಿಸಿಯೂಟವನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ವರದಿ ಬಂದ ನಂತರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
● ದಯಾನಂದ ಪಾಟೀಲ್‌, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next