Advertisement

ಆಹಾರ ಮೇಳ: ಕೆಂಪಿರುವೆ ಚಟ್ನಿ, ಸೊನೆ ಬೇರು ಟೀ

11:32 AM Aug 19, 2017 | |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ದಸರಾ ಆಹಾರ ಮೇಳದಲ್ಲಿ ಸಾಮಾನ್ಯವಾಗಿ ದೊರೆಯುವ ಆಹಾರ ಪದಾರ್ಥಗಳ ಜತೆಗೆ ಸಾರ್ವಜನಿಕರಿಗೆ ಬುಡಕಟ್ಟು ಸಮುದಾಯದ ಆಹಾರ ಪದ್ಧತಿಯನ್ನು ಪರಿಚಯಿಸಲಾಗುವುದು ಎಂದು ದಸರಾ ಆಹಾರ ಮೇಳ ಉಪ ಸಮಿತಿ ಕಾರ್ಯಾಧ್ಯಕ್ಷ ಡಾ.ಕಾ.ರಾಮೇಶ್ವರಪ್ಪ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಆಹಾರ ಮೇಳದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಬಾರಿ ದಸರಾ ಆಹಾರ ಮೇಳವನ್ನು ವಿಶೇಷವಾಗಿ ನಡೆಸಲು ತೀರ್ಮಾನಿಸಿದ್ದು, ರಾಜ್ಯದ ವಿವಿಧ ಕಡೆಗಳಲ್ಲಿರುವ ಬುಡಕಟ್ಟು ಸಮುದಾಯದ ಆಹಾರ ಪದ್ಧತಿಗಳ ಬಗ್ಗೆ ಸಾರ್ವಜನಿಕರಿಗೆ ಪರಿಚಯಿಸಲಾಗುವುದು ಎಂದರು. 

ತರ ತರದ ತಿಂಡಿ: ಅದರಂತೆ ಈ ಬಾರಿಯ ಆಹಾರ ಮೇಳದಲ್ಲಿ ಸೋಲಿಗರ ಕೆಂಪಿರುವೆ ಚಟ್ನಿ, ಅವರೆ ಸೊನೆಯ ಬೇರು ಟೀ, ಏಡಿ ಸಾರು, ರಾಗಿ ಮುದ್ದೆ, ಬಿದಿರಕ್ಕಿ ಪಾಯಸ, ವೈವಿಧ್ಯಮಯ ಬಾಳೆಹಣ್ಣಿನ ಜತೆಗೆ ನೈಸರ್ಗಿಕ ತಿನಿಸುಗಳನ್ನು ಆಹಾರ ಮೇಳದಲ್ಲಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಮೂರು ಕಡೆ ಆಯೋಜನೆ: ಪ್ರತಿಬಾರಿಯೂ ಆಹಾರ ಮೇಳಕ್ಕೆ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದ್ದು, ಹೀಗಾಗಿ ಜನರ ಒತ್ತಡ ನಿಯಂತ್ರಿಸುವ ಮೂಲಕ ಪ್ರತಿಯೊಬ್ಬರು ಆಹಾರ ಮೇಳದ ಸವಿಯನ್ನು ಸವಿಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಬಾರಿ ನಗರದ ಮೂರು ಕಡೆಗಳಲ್ಲಿ ಆಹಾರ ಮೇಳ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಒಟ್ಟು 275 ಮಳಿಗೆಗಳು: ಎಂದಿನಂತೆ ನಗರದ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮೈದಾನದಲ್ಲಿ 100 ಮಳಿಗೆ, ಸಾತಗಳ್ಳಿ ಬಸ್‌ ಡಿಪೋ ನಿಲ್ದಾಣದ ಪಕ್ಕದ ಮೈದಾನದಲ್ಲಿ 100 ಮಳಿಗೆ ಮತ್ತು ಲಲಿತ್‌ ಮಹಲ್‌ ಸಮೀಪದ ತಿ.ನರಸೀಪುರ ಮುಖ್ಯರಸ್ತೆ ಪಕ್ಕದಲ್ಲಿ 75 ಮಳಿಗೆಗಳನ್ನು ತೆರೆಯಲಾಗುವುದು. ಈ ಬಾರಿಯ ದಸರಾ ಆಹಾರ ಮೇಳ ಸೆ.21 ರಿಂದ 28 ರವರೆಗೆ ನಡೆಯಲಿದ್ದು, ಜತೆಗೆ ಮೂರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

Advertisement

ರಾಜ್ಯ ಬುಡಕಟ್ಟು ಅಧ್ಯಯ ಸಂಸ್ಥೆ ನಿರ್ದೇಶಕ ಡಾ.ಬಸವನಗೌಡ ಮಾತನಾಡಿ, ಉತ್ತರ ಕನ್ನಡದ ಸಿದ್ದಿ ಬುಡಕಟ್ಟು ಸಮುದಾಯ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಹಾಸನ, ಶಿವಮೊಗ್ಗ ಸೇರಿದಂತೆ 8 ಜಿಲ್ಲೆಗಳ ಸಿದ್ಧಿ ಸಮುದಾಯ, ಹಕ್ಕಿ-ಪಿಕ್ಕಿ ಜನಾಂಗ ಹಾಗೂ ಕಾಡಂಚಿನ ನಿವಾಸಿಗಳ 15ಕ್ಕೂ ಹೆಚ್ಚಿನ ಸಮುದಾಯದ ಆಹಾರಗಳನ್ನು ಪರಿಚಯಿಸಲಾಗುತ್ತಿದೆ. ನೈಸರ್ಗಿಕ ಆಹಾರ ಪದ್ಧತಿಗಳನ್ನು ಆಹಾರ ಮೇಳದಲ್ಲಿ ಪರಿಚಯಿಸಲಾಗುವುದು.

ಆ ಮೂಲಕ ಎಲ್ಲಾ ಬುಡಕಟ್ಟು ಸಮುದಾಯಗಳನ್ನು ಒಂದೂಗೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು. ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಕೆ ರಾಮು, ಜಿಲ್ಲಾ ಗಿರಿಜನ ಕಲ್ಯಾಣ ಅಧಿಕಾರಿ ಶಿವಕುಮಾರ್‌, ಆಹಾರ ಸುರಕ್ಷತಾಧಿಕಾರಿ ದಾûಾಯಣಿ ಬಡಿಗೇರಾ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ ಮುಖಂಡ ಕಾವೇರಾ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next