ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆ ನಡೆಸಲು ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಕೆ.ಎನ್. ಕೃಷ್ಣಮೂರ್ತಿ ನೇತೃತ್ವದಲ್ಲಿ ಐದು ಮಂದಿ ಸದಸ್ಯರ ತಂಡ ಭೇಟಿ ನೀಡಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಚದಲುಪುರ, ಗವಿಗಾನಹಳ್ಳಿ ಅಂಗನವಾಡಿ ಕೇಂದ್ರ ಹಾಗೂ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿ ನೀಡಿದ ಅಂಗನವಾಡಿ ಕೇಂದ್ರಗಳಲ್ಲಿ ಒಂದಿಬ್ಬರು ಮಕ್ಜಳು ಮಾತ್ರ ಕಂಡು ಬಂದರು, ನ್ಯಾಯಬೆಲೆ ಅಂಗಡಿಗಳಲ್ಲಿ ಪೂರೈಸಿದ ಅಕ್ಕಿ, ರಾಗಿ ಮತ್ತಿತರ ಆಹಾರ ಪದಾರ್ಥಗಳನ್ನು ತೂಕ ಹಾಗೂ ವಿತರಣೆ, ದಾಸ್ತಾನುವಿನಲ್ಲಿ ವ್ಯತ್ಯಾಸ ಪತ್ತೆ ಮಾಡಿದ ತಂಡ ಕೆಲ ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸುವಂತೆ ಉಪ ನಿದೇರ್ಶಕರಿಗೆ ಸೂಚಿಸಿದರು.
ಅಂಗನವಾಡಿ ಕೇಂದ್ರದಲ್ಲಿ ಶೌಚಾಲಯ ಇಲ್ಲ
ಆಹಾರ ಆಯೋಗ ತಂಡ ಭೇಟಿ ನೀಡಿದ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ಸೌಲಭ್ಯ ಇಲ್ಲ, ಕನಿಷ್ಟ ಕುಡಿಯುವ ನೀರಿನ ಶುದ್ಧೀಕರಣ ಘಟಕ ಇಲ್ಲದ ಬಗ್ಗೆ ತಂಡದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಆಹಾರ ಆಯೋಗ ಸದಸ್ಯರ ತಂಡ, ಜಿಲ್ಲೆಯ ಗೌರಿಬಿದನೂರು, ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ, ಗುಡಿಬಂಡೆ ಮತ್ತಿತರ ತಾಲೂಕಿನಲ್ಲಿ ನ್ಯಾಯಬೆಲೆ ಅಂಗಡಿ, ಅಂಗನವಾಡಿ, ಸರ್ಕಾರಿ ಶಾಲೆ, ವಸತಿ ನಿಲಯ, ಸಾರ್ವಜನಿಕ ಆಸ್ಪತ್ರೆಗಳಿಗೆ ಬೇಟಿ ನೀಡಲಿದ್ದಾರೆ.
ಆಹಾರ ಆಯೋಗದ ಸದಸ್ಯರಾದ ಮಂಜುಳಾಬಾಯಿ, ಮಹಮ್ಮದ್ ಅಲಿ, ಅಸಬಿ, ಶಿವಶಂಕರ್ ಪಾಲ್ಗೊಂಡಿದ್ದಾರೆ.