Advertisement

ಆಹಾರ ಜಾಗೃತಿ: ಹಸಿವಿನ ಬಗ್ಗೆ ಅರಿವಿರಲಿ…

06:00 AM Jul 27, 2018 | Team Udayavani |

ಕಪಿಲ್‌ ಈ ಹಿಂದೆ “ಹಳ್ಳಿ ಸೊಗಡು’ ಎಂಬ ಸಿನಿಮಾ ನಿರ್ದೇಶಿಸಿದ್ದರು. ಆ ಚಿತ್ರ ಬಿಡುಗಡೆಯಾಗುತ್ತಿದ್ದಂತೆ ಹೊಸ ಸಿನಿಮಾ ಕೈಗೆತ್ತಿಕೊಂಡ ಕಪಿಲ್‌ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದಾರೆ. ಕಪಿಲ್‌ ಮಾಡಿರುವ ಹೊಸ ಸಿನಿಮಾ “ಹಸಿವು ಮತ್ತು ಅರಿವು’. ಚಿತ್ರದ ಶೀರ್ಷಿಕೆ ಕೇಳಿದಾಗ ನಿಮಗೆ ಇದೊಂದು ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾ ಎಂಬುದು ಸ್ಪಷ್ಟವಾಗುತ್ತದೆ. ಆಹಾರವನ್ನು ಯಾವತ್ತೂ ಬಿಸಾಕಬಾರದು, ಎಷ್ಟು ಬೇಕೋ ಅಷ್ಟೇ ತಿನ್ನಬೇಕು. ಅನೇಕರು ಆಹಾರವಿಲ್ಲದೇ ಹಸಿವಿನಿಂದಿದ್ದಾರೆ. ಅಂಥವರಿಗೆ ಸಹಾಯ ಮಾಡಬೇಕೆಂಬ ಕಾನ್ಸೆಪ್ಟ್ ಇಟ್ಟುಕೊಂಡು ಕಪಿಲ್‌ ಈ ಸಿನಿಮಾ ಮಾಡಿದ್ದಾರೆ. 

Advertisement

“ನನಗೆ ಈ ಕಥೆ ಐದು ನಿಮಿಷದಲ್ಲಿ ಹೊಳೆಯಿತು. ಅದೊಮ್ಮೆ ಊಟ ಮಾಡುವಾಗ ಬೇಡ ಎಂದರೂ ಹೆಚ್ಚು ಅನ್ನ ಬಡಿಸಿದರು. ಅದನ್ನು ಬಿಸಾಕಲು ಮನಸ್ಸಾಗದೇ ತಿಂದೆ. ಆ ನಂತರ ಹಸಿವು ಮತ್ತು ಆಹಾರವನ್ನಿಟ್ಟುಕೊಂಡು ಕತೆ ರೆಡಿಮಾಡಿಕೊಂಡೆ. ನನ್ನ ಕಥೆಗೆ ಡಾ.ರಾಜ್‌ಕುಮಾರ್‌ ಸ್ಫೂರ್ತಿ. ಅವರು ತಟ್ಟೆಯಲ್ಲಿ ಒಂದೇ ಒಂದು ಅನ್ನವನ್ನು ಬಿಡದೇ ಊಟ ಮಾಡುತ್ತಿದ್ದರು. ಅವರ ಸ್ಫೂರ್ತಿಯೊಂದಿಗೆ ಈ ಸಿನಿಮಾ ಮಾಡಿದ್ದೇನೆ’ ಎಂದು ಹೇಳಿಕೊಂಡರು ಕಪಿಲ್‌. ಈ ಚಿತ್ರ ಎಲ್ಲಾ ಭಾಷೆಗಳಿಗೂ ತಲುಪಬೇಕೆಂಬ ಕಾರಣಕ್ಕೆ ಬೇರೆ ಬೇರೆ ಭಾಷೆಗಳಿಗೆ ಡಬ್‌ ಮಾಡುವ ಆಲೋಚನೆಯೂ ಅವರಿಗಿದೆ. ನಿರ್ದೇಶನದ ಜೊತೆಗೆ ಚಿತ್ರವನ್ನು ಕಪಿಲ್‌ ನಿರ್ಮಿಸಿದ್ದಾರೆ. ನಿರ್ಮಾಣದಲ್ಲಿ ಇವರಿಗೆ ರಾಘವೇಂದ್ರ ಹಾಗೂ ಪ್ರಸನ್ನ ಸಾಥ್‌ ನೀಡಿದ್ದಾರೆ. ಅವರು ಕೂಡಾ ಚಿತ್ರದ ಬಗ್ಗೆ ಮಾತನಾಡಿದರು. ಕಪಿಲ್‌ ಮಾಡಿಕೊಂಡಿರುವ ಕಾನ್ಸೆಪ್ಟ್ ಇಷ್ಟವಾಗಿ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾಗಿ ಹೇಳಿಕೊಂಡರು.

ಚಿತ್ರದಲ್ಲಿ ಗುಬ್ಬಿ ನಟರಾಜ್‌ ಹಾಗೂ ಕೃಷ್ಣಮೂರ್ತಿ ತಳಾಲು ಪ್ರಮುಖ ಪಾತ್ರ ಮಾಡಿದ್ದಾರೆ. ಅವರಿಲ್ಲಿ ತಂದೆ-ಮಗನಾಗಿ ನಟಿಸಿದ್ದಾರೆ. ಅಂಗವಿಕಲ ಮಗನೊಬ್ಬ ಹೇಗೆ ಹಸಿವು ಹಾಗೂ ಆಹಾರದ ಬಗ್ಗೆ ಜಾಗೃತಿ ಮೂಡಿಸುತ್ತಾನೆಂಬ ಅಂಶದೊಂದಿಗೆ ಸಾಗುವ ಸಿನಿಮಾವನ್ನು ಕಪಿಲ್‌ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ಎನ್ನುತ್ತಾರೆ ಅವರು. ಚಿತ್ರಕ್ಕೆ ನರಸಿಂಹಮೂರ್ತಿಯವರ ಚಿತ್ರಕಥೆ- ಸಂಭಾಷಣೆ ಇದೆ. “ಕಪಿಲ್‌ ಅವರ ಕಾನ್ಸೆಪ್ಟ್ ಇಷ್ಟವಾಯಿತು. ಮನುಷ್ಯನ ಪ್ರತಿ ಅಪರಾಧಕ್ಕೂ ಶಿಕ್ಷೆ ಇದೆ. ಆದರೆ, ಅನ್ನವನ್ನು ಬಿಸಾಕೋದು ಕೂಡಾ ಒಂದು ಅಪರಾಧ. ಅದಕ್ಕೆ ಯಾವುದೇ ಶಿಕ್ಷೆಯಿಲ್ಲ. ಆ ಅಂಶವನ್ನು ಕೂಡಾ ಇಲ್ಲಿ ಹೈಲೈಟ್‌ ಮಾಡಿದ್ದೇವೆ’ ಎಂದರು ನರಸಿಂಹಮೂರ್ತಿ. ಚಿತ್ರದಲ್ಲಿ ನಟಿಸಿರುವ ಮೈಸೂರು ರಮಾನಂದ್‌ ಸೇರಿದಂತೆ ಇತರರು ತಮ್ಮ ಅನುಭವ ಹಂಚಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next