Advertisement
ಇದಲ್ಲದೆ ಇನ್ನೊಂದು ಅಪರೂಪದ ಗುಂಪು ಕೂಡ ಇದೆ. ಇವರು ಸಂತಸವನ್ನು ಅರಸಿ ಬಡಬಗ್ಗರ, ದೀನ ದಲಿತರ ಸೇವೆಯಲ್ಲಿ ತಮ್ಮ ಜೀವನದಲ್ಲಿ ಸಾರ್ಥಕ್ಯ ಕಾಣುತ್ತಾರೆ. ಆದರೆ ಈ ಕೊನೆಯ ವರ್ಗ ಮಾತ್ರ ಅಪರೂಪದ ಮತ್ತು ಅತೀ ಕಡಿಮೆ ಸಂಖ್ಯೆಯಲ್ಲಿರುವವರು. ಇವರಿಗೆ ಹಣಬಲ ಬೇಕೆಂದೇನೂ ಇಲ್ಲ. ಆದರೆ ತಮ್ಮೊಂದಿಗೆ ಸಹಕರಿಸುವ, ಸ್ಪಂದಿಸುವ ಜನಬಲವೇ ಇವರ ಆಸ್ತಿ.
ಆದರೆ ಇದಕ್ಕೆಲ್ಲ ವಿಪರೀತವಾಗಿ ನಾನು, ನನ್ನದು ಎಂದು ಬಗೆದು ಲೋಕ ಮುಳುಗಿದರೆ ನನಗೇನು ಎಂಬ ಭಾವ ಮೆರೆಯುವ ಸ್ವಕೇಂದ್ರಿತ, ಸ್ವಜನ ಹಿತ ಬಯಸುವ, ಸಮಾಜದ ಋಣ ನಾನೇಕೆ ತೀರಿಸಲಿ ಎಂದು ಅಹಂಕಾರದ ಮೂಟೆ ಹೊತ್ತು ಜೀವಿಸುವ ವರ್ಗ ಮಾತ್ರ ಅದೇನು ಸುಖದಿಂದ ಬಾಳುತ್ತದೋ ತಿಳಿಯದು. ಕೊನೆಗೆ ನಂದ ರಾಯನ ಬದುಕು ನರಿ, ನಾಯಿ ತಿಂದು ಹೋಯಿತು ಅಂದ ಹಾಗೆ ಇವರ ಬದುಕು. ನಮ್ಮ ಗಳಿಕೆ ಎಂಬುದು ಸಮಾಜ ಒದಗಿಸಿದ್ದು. ಕೆಲವೊಮ್ಮೆ ನಮ್ಮ ನಿರೀಕ್ಷೆಗೂ ಮೀರಿ ಧನ ಸಂಪತ್ತು ಲಭ್ಯವಾಗುವುದು ಸುಳ್ಳಲ್ಲ. ದೇವರು ಕೆಲವೊಂದು ಮಂದಿಗೆ ಅದೇಕೋ ಉದಾರತೆ ತೋರುತ್ತಾನೆ. ಆ ಸಂದರ್ಭದಲ್ಲಿ ವ್ಯಕ್ತಿ ಅಹಂಕಾರ ಮೆರೆಯುವುದು ಸರಿಯಲ್ಲ. ತನ್ನ ಆವಶ್ಯಕತೆಗೆ ತಕ್ಕಷ್ಟು ತನ್ನದು ಉಳಿದದ್ದು ಸಮಾಜಕ್ಕೆ ಸಲ್ಲ ಬೇಕಾದದ್ದು ಎಂಬ ಮನೋಧರ್ಮ ತನ್ನದಾಗಿಸಿಕೊಂಡರೆ ಆತನ ಸಂತಸದ ಕ್ಷಣಗಳು ಹೆಚ್ಚುತ್ತವೆ. ಬಾಯಾರಿದವನಿಗೆ ನೀರು, ಹಸಿದವನಿಗೆ ಒಂದು ಹಿಡಿ ಅನ್ನ, ರೋಗದಿಂದ ಬಳಲುವ ವ್ಯಕ್ತಿಗೆ ತಕ್ಕ ಚಿಕಿತ್ಸೆ ಇತ್ಯಾದಿ ಕರ್ಮಗಳನ್ನು ಮಾಡಿ ಅದರಲ್ಲಿ ತನ್ನ ಜೀವನದ ಸಾರ್ಥಕ್ಯ ಭಾವ ಮೆರೆಯುವ ಜನರು ನಿಜವಾಗಿಯೂ ಧನ್ಯರು. ತಮ್ಮ ಬದುಕು ತಮಗಾಗಿಯೇ ಅಲ್ಲ. ಸಹಜೀವಿಗಳಿಗೂ ಅದರಲ್ಲಿ ಹಕ್ಕು ಇದೆ ಎಂಬ ಮನಸ್ಸು ನಿಜ ಅರ್ಥದಲ್ಲಿ ಶ್ರೀಮಂತಿಕೆ. ಈ ತರದ ಸಮಾಜಮುಖೀ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಬಾಳುವ ಮಂದಿ ನಿಜವಾಗಿಯೂ ದೇವರಿಗೆ ಪೂಜೆ ಪುನಸ್ಕಾರ ಮಾಡದಿದ್ದರೂ “ಮಾನವ ಸೇವೆ ಮಾಧವ ಸೇವೆ’ ಎಂಬ ಧರ್ಮ ಅನುಸರಿಸುವ ಮಹಾನ್ ಚೇತನಗಳು. ಇವರೇನೂ ತಮ್ಮ ಸತ್ಕಾರ್ಯಗಳಿಗೆ ಪ್ರತಿಯಾಗಿ ಏನೇನೂ ಅಪೇಕ್ಷೆ ಇಟ್ಟುಕೊಳ್ಳುವ ಜಾಯಮಾನದವರಲ್ಲ. ತಮ್ಮ ಕಾಯಕ ನೆರವೇರಿಸಿ ಅದರಲ್ಲೇ ತೃಪ್ತಿ, ಸಂತಸ ಪಡುವ ಮನೋಧರ್ಮದ ಶ್ರೀಮಂತರು.
Related Articles
Advertisement
– ಬಿ. ನರಸಿಂಗ ರಾವ್, ಕಾಸರಗೋಡು