ಹುಣಸೂರು: ಸಾರಿಗೆ ಇಲಾಖೆ ನಿಯಮ ರೂಪಿಸಿದ್ದರೂ ಗೂಡ್ಸ್ ವಾಹನಗಳಲ್ಲಿ ಸಾರ್ವಜನಿಕರನ್ನು ಸಾಗಿಸುವುದು, ದಾಖಲಾತಿಗಳಿಲ್ಲದೆ ವಾಹನ ಚಲಾಯಿಸುವುದು ಅಪರಾಧವಾಗಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಕಾನೂನು ಕ್ರಮ ಎದುರಿಸಬೇಕಾದೀತೆಂದು ಗ್ರಾಮಾಂತರ ಠಾಣೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ದೊಡ್ಡೇಗೌಡ ಎಚ್ಚರಿಸಿದರು.
ತಾಲೂಕಿನ ಹನಗೋಡು ಗ್ರಾಮದ ಆಟೋ ನಿಲ್ದಾಣದಲ್ಲಿ ಗೂಡ್ಸ್ ಆಟೋ ಚಾಲಕರಿಗಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಾಲಕರು ಎಚ್ಚೆತ್ತುಕೊಳ್ಳಲಿ: ಇತ್ತೀಚೆಗೆ ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು ಹೊತ್ತೂಯ್ಯುವುದು ಹೆಚ್ಚಾಗಿದ್ದು ಅಪಘಾತದಲ್ಲಿ ಸಾವು ನೋವು ಸಂಭವಿಸುತ್ತಿದೆ. ವಾಹನಗಳ ತಪಾಸಣೆ ನಡೆಸಿದ ವೇಳೆ ಚಾಲನಾ ಪರವಾನಗಿ, ವಿಮೆ, ವಾಹನಗಳ ಮಾಲಿಕತ್ವದ ದಾಖಲಾತಿಗಳೇ ಇಲ್ಲದಿರುವ ವಾಹನಗಳು ಅಪಘಾತಕ್ಕೊಳಗಾಗುತ್ತಿದ್ದು, ಚಾಲಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಕಡ್ಡಾಯವಾಗಿ ಚಾಲನೆ ವಿಮೆ ಮಾಡಿಸಿ: ವಾಹನಗಳಲ್ಲಿ ಪ್ರಯಾಣಿಸುವ ವೇಳೆ ಅಪಘಾತವಾದಲ್ಲಿ ಯಾವುದೇ ಪರಿಹಾರ ಪಡೆಯಲು ತೊಂದರೆಯಾಗಲಿದೆ ಎಂಬುದನ್ನು ಪ್ರಯಾಣಿಕರು ಅರಿಯಬೇಕು. ವಾಹನಗಳನ್ನು ತಪಾಸಣೆ ನಡೆಸುವ ವೇಳೆ ಪೊಲೀಸರೊಂದಿಗೆ ವಾಹನ ಚಾಲಕರು ಸಹಕರಿಸಬೇಕು, ಕಡ್ಡಾಯವಾಗಿ ವಿಮೆ, ಚಾಲನಾ ಪರವಾನಗಿ ಹೊಂದಿರಬೇಕೆಂದು ಸೂಚಿಸಿದರು.