ಉಡುಪಿ: ನಮ್ಮಲ್ಲಿ ಬದಲಾವಣೆಯಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯ. ವಿಚಕ್ಷಣ ದಳದವರು ಬಂದು ಕಾನೂನಿನ ಇಕ್ಕಟ್ಟಿಗೆ ಸಿಲುಕಿಸಿದ ಅನಂತರ ಬದಲಾವಣೆಯಾಗುವ ಬದಲು ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡಿರುವುದನ್ನು ಸ್ವಯಂ ಅನುಸರಿಸಿ, ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗ ಬೇಕು ಎಂದು ಕರ್ನಾಟಕ ಲೋಕಾಯುಕ್ತರ ದ.ಕ. ಮತ್ತು ಉಡುಪಿ ಜಿಲ್ಲೆ ಪೊಲೀಸ್ ಅಧೀಕ್ಷಕ ಎ. ಕುಮಾರಸ್ವಾಮಿ ಹೇಳಿದರು.
ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಲೋಕಾಯುಕ್ತರಿಂದ ನಡೆದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ವಿಚಕ್ಷಣ ಆಯೋಗದ ವತಿಯಿಂದ ಪ್ರತಿ ವರ್ಷ ಅ. 26ರಿಂದ ನ. 1ರ ವರೆಗೆ ಭ್ರಷ್ಟಾಚಾರ ನಿರ್ಮೂಲನ ಜಾಗೃತಿ/ಅರಿವು ಸಪ್ತಾಹ ಆಚರಣೆ ನಡೆಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಪ್ರತಿ ಇಲಾಖೆಯಲ್ಲಿ ಕಾರ್ಯನಿರ್ವಹಿ ಸುವ ಕಚೇರಿ ಸಿಬಂದಿ, ಸಾರ್ವಜನಿಕರಿಗೆ ಅರಿವು ಮೂಡಿಸುವಂತಹದ್ದಾಗಿದೆ ಎಂದರು. ಸಾರಿಗೆ ಕಚೇರಿಯ ಅಧೀಕ್ಷಕ ಗೀತಾ ಸಾರಿಗೆ ವಿಭಾಗದ ಕಾರ್ಯಗಳ ಬಗ್ಗೆ, ಪಮಿತಾ ಸಾರಿಗೆಯೇತರ ವಿಭಾಗದ ಕಾರ್ಯ, ಸರಸ್ವತಿ ಡಿಎಲ್ ವಿಭಾಗ ಮತ್ತು ಇತರ ಕಾರ್ಯಗಳ ಬಗ್ಗೆ ಗೀತಾ ಮಾಹಿತಿ ನೀಡಿದರು.
ಕಾರ್ಮಿಕ ಅಧಿಕಾರಿ ಕುಮಾರ್ ಕಾರ್ಮಿಕ ಇಲಾಖೆ ಸೌಲಭ್ಯ, ಸುಗುಣಾ ಹಿಂದುಳಿದ ವರ್ಗಗಳ ಇಲಾಖೆ ಸೌಲಭ್ಯ, ಅನಿತಾ ಗಣಿ ಇಲಾಖೆಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಇದನ್ನೂ ಓದಿ:ಭಾರತದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆ! 2020ರ ಮಾಹಿತಿ ಹೊರ ಹಾಕಿದ ಕೇಂದ್ರ
ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಜಯರಾಮ ಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ ಮತ್ತು ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಮತ್ತು ಗಣಿ ಇಲಾಖೆಯ ಸಿಬಂದಿ, ಕಚೇರಿ ಸಿಬಂದಿ ಮತ್ತಿತರರು ಉಪಸ್ಥಿತರಿದ್ದರು.
ಮೋಟಾರು ವಾಹನ ನಿರೀಕ್ಷಕ ಎನ್. ವಿಶ್ವನಾಥ ನಾಯ್ಕ ಸ್ವಾಗತಿಸಿ, ವಂದಿಸಿದರು.