Advertisement

ಸಮಗ್ರ ಕೃಷಿ ಪದ್ಧತಿ ಅನುಸರಿಸಿ

02:39 PM Mar 15, 2022 | Team Udayavani |

ಚಿಕ್ಕೋಡಿ: ರೈತರು ಸಮಗ್ರ ಕೃಷಿ ನೀತಿ ಅಳವಡಿಸಿಕೊಂಡು ಕೃಷಿ ಮಾಡಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಅಸೆಯಂತೆ ರೈತರ ಆದಾಯ ದ್ವಿಗುಣವಾಗಲಿದೆ. ರೈತರು ಕೃಷಿ ಮಾಡಲು ಹಿಂದೇಟು ಹಾಕದೇ ಕೃಷಿಯಲ್ಲಿಯೇ ಉದ್ಯೋಗ ಕೊಡುವ ಕೃಷಿ ಉದ್ಯಮಿಯಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

Advertisement

ತಾಲೂಕಿನ ಅಂಕಲಿ ಗ್ರಾಮದಲ್ಲಿ ಬೆಂಗಳೂರಿನ ಐಸಿಎಆರ್‌ ಅಟಾರಿ, ಮತ್ತಿಕೊಪ್ಪದ ಕೆಎಲ್‌ಇ ಸಂಸ್ಥೆ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೋಯಾಬೀನ್‌ ಹಾಗೂ ಕಬ್ಬು ಬೆಳೆಯುವ ರೈತರ, ವಿಜ್ಞಾನಿಗಳ ಮತ್ತು ಉದ್ಯಮಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ನಗರ, ಪಟ್ಟಣ ಪ್ರದೇಶಗಳಲ್ಲಿ ನಡೆಯುವ ಕೃಷಿ ಸಮ್ಮೇಳನ ಗ್ರಾಮೀಣ ಪ್ರದೇಶದಲ್ಲಿ ನಡೆಯುವುದು ಅತೀ ಮುಖ್ಯವಾಗಿದೆ. ಕೃಷಿ ವಿಜ್ಞಾನಿಗಳ ಮೂಲಕ ರೈತರಿಗೆ ಕೃಷಿ ಕುರಿತು ಮಾರ್ಗದರ್ಶನ ನೀಡುವ ಕಾರ್ಯಕ್ರಮ ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ. ಈ ದೇಶ ಸದೃಢವಾಗಿ ಬೆಳೆಯಲು ರೈತರು ಬೆಳೆಯುವ ಆಹಾರ ಮುಖ್ಯವಾಗಿದೆ ಎಂದರು.

ಕೃಷಿ ಸಚಿವನಾದ ಮೇಲೆ ಕೃಷಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಇಲಾಖೆ ದೂರವಾಣಿಯಲ್ಲಿ ಹಲೋ ಬದಲು ಜೈಕಿಸಾನ್‌ ಎನ್ನುವ ಸಂದೇಶ ಅಳವಡಿಸಲಾಗಿದೆ. ರೈತರು ಸಂಕೋಚ ಪಡದೇ ಕೃಷಿಯತ್ತ ಮುನ್ನುಗ್ಗಬೇಕು. ಅನ್ನ ಕೊಡುವ ರೈತನ ತಾಕತ್ತು ಯಾವ ಉದ್ಯಮಿಗಳಿಗೂ ಸಾಧ್ಯವಿಲ್ಲ ಎಂದರು.

ಕಬ್ಬಿನ ಬೆಳೆಯ ಜೊತೆಗೆ ಸೋಯಾಬೀನ್‌ ಕೃಷಿ ಮಾಡುವುದು ಸೂಕ್ತವಾಗಿದೆ. ಎಣ್ಣೆ ಪದಾರ್ಥ ಬೆಳೆ ದೇಶಕ್ಕೆ ಹೆಚ್ಚಾಗಬೇಕಿದೆ. ದೇಶಕ್ಕೆ ಸುಮಾರು 75 ಸಾವಿರ ಕೋಟಿಯಷ್ಟು ಎಣ್ಣೆ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅದೇ ನಮ್ಮ ದೇಶದಲ್ಲಿ ಹೆಚ್ಚಿನ ಎಣ್ಣೆ ಪದಾರ್ಥ ಬೆಳೆ ಅವಶ್ಯಕ ಎಂದರು.

Advertisement

ರೈತರು ಒಂದೇ ಕೃಷಿಯತ್ತ ಮನಸ್ಸು ಮಾಡದೇ ಹತ್ತು ಬೆಳೆ ಬೆಳೆಯಲು ಮುಂದಾಗಬೇಕು. ಹವಾಮಾನ ಸೇರಿದಂತೆ ಇನ್ನಿತರ ಕಾರಣಗಳಿಂದ ಬೆಳೆ ಹಾನಿಯಾದರೆ ಒಂದು ಬೆಳೆಯಾದರೂ ರೈತನ ಕೈಹಿಡಿಯುತ್ತದೆ. ರೈತರು ತಂತ್ರಜ್ಞಾನ ಅಳವಡಿಸಿಕೊಂಡು ಸಮಗ್ರ ಕೃಷಿ ನೀತಿ ಅನುಸರಿಸಬೇಕು. ರಾಜ್ಯ ಸರ್ಕಾರ ರೈತರ ಮಕ್ಕಳಿಗೆ ವಿವಿಧ ಯೋಜನೆ ಜಾರಿ ಮಾಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಮಾತನಾಡಿ, ಸರ್ಕಾರಿ ನೌಕರಿಗೆ ಇರುವ ಮಾನ್ಯತೆ ಕೃಷಿಕರಿಗೂ ಬರಬೇಕು. ಕೃಷಿ ಉಳಿದರೆ ಮಾತ್ರ ದೇಶದ ಭವಿಷ್ಯ ಸುಭದ್ರವಾಗಿರುತ್ತದೆ. ಯುವಕರು ಕೃಷಿ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ವೇದಿಕೆ ಮೇಲೆ ಐಸಿಎಆರ್‌ ಅಟಾರಿ ನಿರ್ದೇಶಕ ಡಾ| ವಿ.ವೆಂಕಟಸುಬ್ರಮಣಿಯನ್‌, ಡಾ| ನೀತಾ ಖಾಂಡೇಕರ, ಭರತೇಶ ಬಣವನೆ, ಮಲ್ಲಿಕಾರ್ಜುನ ಕೋರೆ, ಡಾ| ಆರ್‌ .ಬಿ.ಖಂಡಗಾವಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಹೇಶ ಭಾತೆ, ಸುರೇಶ ಪಾಟೀಲ, ಡಾ| ಪ್ರಸಾದ ರಾಂಪೂರೆ ಮುಂತಾದವರು ಇದ್ದರು. ಬಿ.ಆರ್‌.ಪಾಟೀಲ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next