Advertisement

ಜನಪದರಲ್ಲಿದೆ ಬದ್ಧತೆ-ಮುಗ್ಧತೆ

11:36 AM Sep 28, 2018 | |

ಬೀದರ: ಜನಪದರಲ್ಲಿ ಶುದ್ಧತೆ, ಬದ್ಧತೆ, ಏಕತೆ, ಮುಗ್ಧತೆಯ ನಡೆಗಳು ಅಡಕವಾಗಿವೆ. ಆದರೆ ಆಧುನಿಕ ನಾಗರಿಕತೆಯ ಭರಾಟೆಯಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮರಳಾಗಿರುವ ಜನರಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ ಎಂದು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ ಹೇಳಿದರು.

Advertisement

ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ನಡೆದ ಜಾನಪದ ವೈವಿಧ್ಯತೆಗಳು, ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಉತ್ಸವ ಕಾರ್ಯಕ್ರಮದ ಪ್ರಥಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪದರಲ್ಲಿ ಶುದ್ಧತೆ, ಸ್ವಾತಿಕತೆ, ಪ್ರಾಮಾಣಿಕತೆ, ಯೋಗ್ಯತೆ, ಚಾರಿತ್ರ್ಯವನ್ನು ನೋಡಬಹುದು. ಆದರೆ ಇತ್ತೀಚಿನ ನಾಗರಿಕತೆಯಲ್ಲಿ ಜೀವನ ಮೌಲ್ಯಗಳು ಹಾಳಾಗಿ ಹೋಗಿವೆ ಎಂದರು. 

ಜನಪದ ಒಂದು ವಿಶಿಷ್ಟ ಪದವಾಗಿದೆ. ಪರಿಶಿಷ್ಟ ಜಾತಿ, ಬುಡಕಟ್ಟು, ರೈತರು, ಕೂಲಿ ಕಾರ್ಮಿಕರು, ಶ್ರಮಜೀವಿಗಳು
ಜನಪದ ಮೌಲ್ಯಗಳನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಮೌಲ್ಯಗಳು ಇಲ್ಲದ ಬದುಕು ಎಂದರೆ ಮೂಗು ಇಲ್ಲದ ಮುಖದಂತೆ. ಜೀವನದಲ್ಲಿ ಮೌಲ್ಯಗಳು ಇಲ್ಲದಿದ್ದರೆ ಬದುಕು ಕಹಿಯಾಗಿರುತ್ತದೆ. ಬದುಕು ಸುಂದರವಾಗಬೇಕಾದರೆ ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ನೀತಿ, ನಿಯಮ, ನಡೆ, ನುಡಿ, ಚಾರಿತ್ರ್ಯ ಉತ್ತಮವಾಗಿದ್ದರೆ, ಬದುಕು ಬಂಗಾರವಾಗುತ್ತದೆ ಎಂದರು. 

ಇಂದಿನ ಸತಿ ಹಾಗೂ ಪತಿಯ ಬದುಕು ಹೇಗೆದೆ ಎಂದರೆ, ಮುಂಜಾನೆ ಮದುವೆ, ಮಧ್ಯಾಹ ಹನಿಮೂನ್‌ ಸಂಜೆ ವಿಚ್ಚೇದನ ಎಂಬಂತಾಗಿದೆ ಎಂದು ಆಧುನಿಕ ದಾಂಪತ್ಯ ಕುರಿತು ವಿವರಿಸಿದರು.  ಡಾ| ಮಹಾದೇವಿ ಮಡಕಿ “ಜನಪದ ಸಂಸ್ಕೃತಿಯಲ್ಲಿ ಮಹಿಳೆ’ ಕುರಿತು ಮಾತನಾಡಿದರು. ಜಾನಪದ ಪರಿಷತ್ತು ಬಸವಕಲ್ಯಾಣ ತಾಲೂಕು ಘಟಕದ ಅಧ್ಯಕ್ಷ ಡಾ| ಬಸವರಾಜ ಸ್ವಾಮಿ “ಜನಪದ ವೈದ್ಯ’ ವಿಷಯ ಮಂಡಿಸಿದರು. ಭಾಲ್ಕಿ ತಾಲೂಕು ಘಟಕದ ಅಧ್ಯಕ್ಷ ಅಶೋಕ ಮೈನಾಳೆ ಆಶಯ ನುಡಿ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪಂಚಾಕ್ಷರಿ ಪುಣ್ಯಶೆಟ್ಟಿ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಲಕ್ಷ್ಮೀಬಾಯಿ ಕಮಠಾಣೆ, ವೈಜಿನಾಥ ಕಮಠಾಣೆ ಅವರನ್ನು ಸನ್ಮಾನಿಸಲಾಯಿತು. ಎಂ.ಜಿ. ದೇಶಪಾಂಡೆ, ಪಿ. ಸಂಗಪ್ಪ, ಎಸ್‌.ಬಿ. ಕುಚಬಾಳ, ಡಾ| ಜಗನ್ನಾಥ ಹೆಬ್ಟಾಳೆ, ಮಹಿಳಾ ಘಟಕದ ಅಧ್ಯಕ್ಷೆ ಧನಲಕ್ಷ್ಮೀ ಪಾಟೀಲ, ಮಲ್ಲಮ್ಮ ಸಂತಾಜಿ ಇದ್ದರು.

ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಕೇಂದ್ರ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು ನವ ದೆಹಲಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕರ್ನಾಟಕ ಸಾಹಿತ್ಯ ಸಂಘ, ಕರ್ನಾಟಕ ಜಾನಪದ ಪರಿಷತ್ತು
ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next