Advertisement

ಹಳ್ಳಿಗರ ಅನುಭಾವದ ಅಮೃತವೇ ಜಾನಪದ: ಇಬ್ರಾಹಿಂಪುರ

01:15 PM Mar 03, 2018 | |

ಸಿಂದಗಿ: ಸಾವಿರಾರು ವರ್ಷಗಳ ಹಿಂದೆ ಹಳ್ಳಿ ಜನರ ಬದುಕಿನ ಅನುಭಾವದಿಂದ ಹೊರಹೊಮ್ಮಿದ ಹಾಡುಗಳು ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತುತ್ತಿದ್ದವು ಎಂದು ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ, ಸ್ಥಳೀಯ ಸಿ.ಎಂ. ಮನಗೂಳಿ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕ ಬಿ.ಎನ್‌. ಪಾಟೀಲ ಇಬ್ರಾಹಿಂಪುರ ಹೇಳಿದರು.

Advertisement

ಪಟ್ಟಣದ ಸಾರಂಗಮಠದ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ಲಿಂ| ಚನ್ನವೀರ ಸ್ವಾಮೀಜಿ ಅವರ 25ನೇ ರಜತ ಪುಣ್ಯ ಸ್ಮರಣೋತ್ಸವದ ವರ್ಷಾಚರಣೆ ಹಾಗೂ 273ನೇ ಸದ್ವಿಚಾರ ಗೋಷ್ಠಿಯಲ್ಲಿ ಅವರು ಸನ್ಮಾನೋತ್ತರವಾಗಿ ಮಾತನಾಡಿದರು.

ಜಾನಪದರು ತಮ್ಮ ನಿತ್ಯ ಕಾಯಕದಲ್ಲಿ ದಣಿವನ್ನು ಕಳೆಯಲು ನುಡಿಯುವ ಮಾತುಗಳು ಹಾಡಾಗಿ ಹೊರ ಹೊಮ್ಮುತ್ತಿದ್ದವು. ಅವರು ಉಸಿರು ಜಾನಪದ ಆಗಿತ್ತು. ಅದಕ್ಕಾಗಿ ಅವರು ಕೈಯಲ್ಲಿ ಸತ್ಯ ಶುದ್ಧ ಕಾಯಕ, ಮನದಲ್ಲಿ ದೇವನ ನೆನವು ಮಾಡಿ ಜೀವನ ಸಾಗಿಸುತ್ತಿದ್ದರು. ಹಂತಿ, ಗೀಗೀ, ಬೀಸುವ, ಕುಟ್ಟುವ, ಸೋಬಾನೆ ಹಾಗೂ ಲಾವಣಿ ಹಾಡುಗಳು ಉತ್ತರ ಕರ್ನಾಟಕದಲ್ಲಿ ತುಂಬಾ ಪ್ರಸಿದ್ಧವಾದವುಗಳು. ನಮ್ಮ ರೈತರು ಮತ್ತು ರೈತ ಮಹಿಳೆಯರು ಇಂಥ ಹಾಡುಗಳನ್ನು ಕಟ್ಟಿ ಹಾಡುವ ಮೂಲಕ ಜಾನಪದ ಕಾವ್ಯ ಲೋಕವನ್ನೇ ಶ್ರೀಮಂತಗೊಳಿಸಿದರು. ಇಂಥ ಹಾಡುಗಳನ್ನು ಮಹಿಳೆಯರು ಹಾಡುವ ಮೂಲಕ ಉಳಿಸಿ ಬೆಳೆಸೋಣ ಎಂದರು.
ನಂತರ ಅವರು ಗೀಗೀ ಪದ, ಹಂತಿಪದ, ಹೋಳಿಹಾಡು, ಮದುವೆ, ಬಿಸುವ, ಕುಟ್ಟುವ, ಪೀಡೆ, ಸೋಬಾನೆ ಹಾಡುಗಳನ್ನು ಹಾಡಿ ಜನರನ್ನು ಜಾನಪದ ಲೋಕಕ್ಕೆ ಕರೆದುಕೊಂಡು ಹೋದರು.

ಬಾಗಲಕೋಟೆ ಜಿಲ್ಲೆಯ ರಬಕವಿಯ ಶ್ರೀಕಾಂತ ಗುರುರಾಜ ಕೆಂದೂಳಿ ಮಾತನಾಡಿ, ಜಾನಪದ ಸಾಹಿತ್ಯ ತನ್ನ ಪ್ರಭಾವದಿಂದ ಸಮಾಜವನ್ನು ಹಿಡಿತದಲ್ಲಿಟ್ಟುಕೊಂಡಿತ್ತು. ಹಿಂದೆ ಅಜ್ಜ-ಅಜ್ಜಿಯರು ಕಥೆ, ಹಾಡಿನ ಮೂಲಕ ಮಕ್ಕಳಲ್ಲಿ ಬದುಕಿನ ಮೌಲ್ಯ ಬೆಳೆಸುತ್ತಿದ್ದರು. ಆದರೆ ಇಂದಿನ ದುಸ್ಥಿತಿ ಎಂದರೆ ದೂರದರ್ಶನದ ಕಳಪೆ ಮತ್ತು ಯಾವುದೇ ನೈತಿಕತೆ ಇರುವ ಧಾರಾವಾಹಿಗಳ ಪ್ರಭಾವದಿಂದಾಗಿ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಆದ್ದರಿಂದ ಯುವ ಜನಾಂಗ ಇಂಥ ಹಾಡುಗಳನ್ನು ಹಾಡುವ ಮೂಲಕ ಜಾನಪದ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು ಎಂದರು. 

ಸಾನ್ನಿಧ್ಯ ವಹಿಸಿದ್ದ ಸಾರಂಗಮಠ-ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿ, ಜಾನಪದ ಸಾಹಿತ್ಯ ಸಮಾಜದ ಕಟ್ಟಳೆಗಳನ್ನು ಪ್ರತಿಬಿಂಬಿಸಿ ನೈತಿಕ ಮೌಲ್ಯಗಳನ್ನು ಬಿತ್ತರಿಸುವುದರ ಜೊತೆಗೆ ಸಾಮಾನ್ಯ ಜನರ ಬದುಕನ್ನು ಹಸನಗೊಳಿತ್ತಿದ್ದವು. ನಮ್ಮ ಸುಖಗಳಿಗೆ ಭೂಮಿ ತಾಯಿಯೇ ಕಾರಣ. ಭೂಮಿ ಬಂಜೆಯಾದರೇ ಎಲ್ಲ ಜೀವರಾಸಿಗಳು ನಾಶವಾಗುತ್ತವೆ. ಆದ್ದರಿಂದ ಜಾನಪದರು ಹಾಸಿಗೆಯಿಂದ ಏಳುವಾಗ ತಮ್ಮ ಹಾಡಿಲ ಮೂಲಕ ಭೂಮಿತಾಯಿಯನ್ನು ಸ್ಮರಿಸುತ್ತಾರೆ ಎಂದರು.

Advertisement

ವಿಜಯಪುರ ಜಿಲ್ಲೆ ಜಾನಪದ ಸಂಸ್ಕೃತಿಗೆ ತವರೂರಾಗಿದೆ. ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾ ಘಟಕಕ್ಕೆ ನೂತನವಾಗಿ  ಪ್ರಾಧ್ಯಾಪಕ ಬಿ.ಎನ್‌. ಪಾಟೀಲ ಅವರು ಆಯ್ಕೆಯಾಗಿದ್ದು ಜಾನಪದ ಪರಿಷತ್‌ಗೆ ಮೆರುಗು ತಂದಿದೆ. ಜಾನಪದ ಉಳಿಸಿ
ಬೆಳೆಸುವಲ್ಲಿ ಅವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿ. ಅವರ ಕಾರ್ಯಕ್ಕೆ ಸದಾ ನಮ್ಮ ಆಶೀರ್ವಾದವಿರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್‌ ನೂತನ ಜಿಲ್ಲಾಧ್ಯಕ್ಷ ಬಿ.ಎನ್‌. ಪಾಟೀಲ ಇಬ್ರಾಹಿಂಪುರ ಅವರಿಗೆ ಸಾರಂಗಮಠ-ಗಚ್ಚಿನಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಸನ್ಮಾನಿಸಿದರು. ಜಿಲ್ಲಾ ಘಟಕ ಕಾರ್ಯಾಧ್ಯಕ್ಷ ಮಹಾಂತೇಶ ನಾಗೋಜಿ,
ಪ್ರಧಾನ ಕಾರ್ಯದರ್ಶಿ ಶಂಕರ ಕಟ್ಟಿಮನಿ, ಖಜಾಂಚಿ ಈರಣಗೌಡ ಹಂದಿಗನೂರ, ಸದಸ್ಯ ಶಿವಕುಮಾರ ಶಿವಸಿಂಪಿ, ತಾಲೂಕಾಧ್ಯಕ್ಷ ರಮೇಶ ಪೂಜಾರ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಕುಂಬಾರ, ಹ.ಮ. ಪೂಜಾರ, ಸಿ.ಎಂ. ಪೂಜಾರ, ಎಂ.ಎಂ. ಹೂಗಾರ, ಪ್ರಾಚಾರ್ಯ ಐ.ಬಿ. ಬಿರಾದಾರ, ಪ್ರಾಚಾರ್ಯ ಶರಣು ಜೋಗುರ, ಮಹಾದೇವಪ್ಪ ಮುಂಡೇವಾಡಗಿ, ಆರ್‌.ಬಿ. ಬೂದಿಹಾಳ, ವಿ.ಡಿ. ವಸ್ತ್ರದ, ಅಶೋಕ ವಾರದ, ಎಸ್‌.ಜಿ. ಹಿರೇಮಠ, ಬಾಬು ಡೊಳ್ಳಿ, ಶರಣ ಸಾಹಿತ್ಯ ಪರಿಷತ್‌ ತಾಲೂಕಾಧ್ಯಕ್ಷ ಚನ್ನಪ್ಪ ಕತ್ತಿ, ಜಿ.ಜಿ. ಕತ್ತಿ, ಬಂಡೆಪ್ಪ ಲೋಣಿ, ಬಸವರಾಜ ಕಕ್ಕಳಮೇಲಿ, ಗುರುಶಾಂತಯ್ಯ ಜಂಗಿನಮಠ, ಕುಮಾರಸ್ವಾಮಿ ಜಹಾಗಿರದಾರ, ಶಕುಂತಲಾ
ಹಿರೇಮಠ, ಮುಕ್ತಾಯಕ್ಕ ಕಟ್ಟಿ, ಕಸ್ತೂರಿ ಪೂಜಾರಿ, ಜ್ಯೋತಿ ಪೂಜಾರ, ವರ್ಷಾ ಪೂಜಾರ, ಶೋಭಾ ಹೂಗಾರ, ವರ್ಷಾ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next