ಕನ್ನಡದ ಅನೇಕ ಚಿತ್ರಗಳಲ್ಲಿ ಅದೆಷ್ಟೋ ಹಳೆಯ ಪ್ರಸಿದ್ಧ ಚಿತ್ರಗೀತೆಗಳು, ಭಾವಗೀತೆಗಳು ಮತ್ತು ಜಾನಪದ ಗೀತೆಗಳನ್ನು ಬಳಸಿರುವುದುಂಟು. ಈಗ ಅಂಥದ್ದೇ ಜನಪ್ರಿಯ ಗೀತೆಯೊಂದನ್ನು ಚಿತ್ರವೊಂದರಲ್ಲಿ ಬಳಸಲಾಗಿದೆ. ಅದು, “ಬೊಳ್ಳೊಳ್ಳೆವ್ವ ಬೊಳ್ಳೊಳ್ಳಿ’ ಎಂಬ ಪ್ರಸಿದ್ಧ ಗೀತೆ. ಬಹುಶಃ ಈಗಿನ ತಲೆಮಾರಿನವರಿಗೂ ಈ ಹಾಡು ಗೊತ್ತಿಲ್ಲವಂತಲ್ಲ.
ಉತ್ತರ ಕರ್ನಾಟಕ ಭಾಷೆಯಲ್ಲಿ ಹೊರಬಂದಿರುವ ಈ ಹಾಡಿನ ಜನಪ್ರಿಯತೆ ಬಗ್ಗೆ ಹೇಳುವ ಅಗತ್ಯವಿಲ್ಲ. ಈ ಹಾಡನ್ನು ಈಗ “ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಹಾಡು ಕಥೆಗೆ ಪೂರಕವಾಗಿದ್ದರಿಂದಲೇ ಬಳಸಿಕೊಳ್ಳಲಾಗಿದೆ ಎಂಬುದು ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ಮಾತು.
ಹೌದು, ಅಶ್ವಿನಿ ರೆಕಾರ್ಡಿಂಗ್ ಕಂಪೆನಿಯೇ ಈ ಜನಪ್ರಿಯ ಜಾನಪದ ಗೀತೆಯನ್ನು ಬಿಡುಗಡೆ ಮಾಡಿತ್ತು. ಸುಮಾರು 20 ವರ್ಷಗಳ ಹಿಂದೆ ಆಡಿಯೋ ಕ್ಯಾಸೆಟ್ ಬಿಡುಗಡೆ ಮಾಡಿದ್ದ ಅಶ್ವಿನಿ ರೆಕಾರ್ಡಿಂಗ್ ಕಂಪೆನಿ, ಆ ದಿನಗಳಲ್ಲೇ ಸುಮಾರು 10 ಲಕ್ಷಕ್ಕೂ ಹೆಚ್ಚು ಕ್ಯಾಸೆಟ್‌ಗಳ ದಾಖಲೆ ಮಾರಾಟ ಮಾಡಿತ್ತು.
ಇಂದಿಗೂ ಅದೇ ಜನಪ್ರಿಯತೆ ಉಳಿಸಿಕೊಂಡಿರುವ ಆ ಗೀತೆಯನ್ನು ತಮ್ಮ ನಿರ್ಮಾಣದ ಚಿತ್ರದಲ್ಲಿ ಹೊಸ ಸಂಗೀತ ಸ್ಪರ್ಶ ಕೊಟ್ಟು ಬಳಸಿಕೊಂಡಿದ್ದಾರಂತೆ. ಇನ್ನು ಈ ಹಾಡನ್ನು ಗಾಯಕ ವಿಜಯ್ ಪ್ರಕಾಶ್ ಹಾಡಿರುವುದು ಇನ್ನೊಂದು ವಿಶೇಷ. ಒಂದೊಳ್ಳೆಯ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಇದೊಂದೇ ವಿಶೇಷತೆ ಇಲ್ಲ.
ನಾಗೇಂದ್ರ ಪ್ರಸಾದ್ ಬರೆದಿರುವ “ದಗಲ್ ಬಾಜಿ ದುನಿಯಾ’ ಎಂಬ ಗೀತೆಗೆ ಚಂದನ್ ಶೆಟ್ಟಿ ದನಿಯಾಗಿದ್ದು, ಅವರೇ ಅಭಿನಯಿಸಿದ್ದಾರೆ. ಬಾಲಿವುಡ್‌ನ ಝೀ “ಸಾರೆಗಮಪ’ ಗಾಯಕಿ ರೂಪಾಲಿ ಜಗ್ಗಾ ಅವರು “ಕಣ್ಣು ಹೊಡಿಬೇಡಿ’ ಎಂಬ ಐಟಂ ಗೀತೆಯನ್ನು ಹಾಡಿದ್ದಾರೆ. ನಾಗೇಂದ್ರಪ್ರಸಾದ್ ಈ ಗೀತೆ ಬರೆದಿದ್ದಾರೆ.
ಬಾಲಿವುಡ್‌ನ “ಝೀ ಸಾರೆಗಮಪ’ ಗಾಯಕರಾದ ಸಚಿನ್‌ಕುಮಾರ್ ಹಾಗೂ ಜ್ಯೋತಿಕಾ ತಾಂಡ್ರೆ “ಸದಾ ನೋಡುವೆ’ ಎಂಬ ಡ್ಯುಯೆಟ್ ಹಾಡಿಗೆ ದನಿಯಾಗಿದ್ದಾರೆ. ನಾಗೇಂದ್ರಪ್ರಸಾದ್ ಬರೆದ “ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಶೀರ್ಷಿಕೆ ಹಾಡಿಗೆ ವಿಜಯಪ್ರಕಾಶ್ ದನಿಯಾಗಿದ್ದಾರೆ.
ಈ ಚಿತ್ರದಲ್ಲಿ ರವಿಶಂಕರ್ ಗೌಡ ನಾಯಕರಾದರೆ, ಸಂಯುಕ್ತಾ ಹೊರನಾಡು ನಾಯಕಿ. ಉಳಿದಂತೆ ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ರಂಗಾಯಣ ರಘು, ರಾಜು ತಾಳಿಕೋಟೆ, ಆಶಿಷ್ ವಿದ್ಯಾರ್ಥಿ, ಜೈ ಜಗದೀಶ್, ಜಯಲಕ್ಷ್ಮೀ, ಸುಧಾಬೆಳವಾಡಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.