Advertisement

ಲೋಕವೇ ಮೆಚ್ಚಿದ “ಜಾನಪದ’

10:09 AM Feb 09, 2020 | mahesh |

ಜಾನಪದ ವಸ್ತು ಸಂಗ್ರಾಹಾಲಯ ತೆರೆದು, ಅದರಲ್ಲಿ ನಮ್ಮ ಪೂರ್ವಿಕರು ಬದುಕಿದ ರೀತಿಯನ್ನು ಪರಿಚಯಿಸಬೇಕು ಎಂಬುದು ಅಂದಿನ ಐಎಎಸ್‌ ಅಧಿಕಾರಿ, ಜಾನಪದ ತಜ್ಞ ಎಚ್‌.ಎಲ್‌. ನಾಗೇಗೌಡರ ಕನಸು. ನಿವೃತ್ತರಾದ ನಂತರ, ಆ ಕನಸಿನ ಹಿಂದೆ ಬಿದ್ದು, 1994ರಲ್ಲಿ “ಜಾನಪದ ಲೋಕ’ ಎಂಬ, ಹದಿನೈದು ಎಕರೆ ವಿಸ್ತೀರ್ಣದ ವಸ್ತು ಸಂಗ್ರಹಾಲಯವನ್ನು ರಾಮನಗರದಲ್ಲಿ ನಿರ್ಮಿಸಿದರು. ಈಗ ಆ ಕಲಾಸ್ವರ್ಗಕ್ಕೆ 25ನೇ ವಸಂತದ ಸಂಭ್ರಮ…

Advertisement

ಒಂದೆಡೆ ಹಸುವಿನ ಹಾಲು ಕರೆಯುತ್ತಿರುವ ಮಹಿಳೆ, ಮತ್ತೂಂದೆಡೆ ಕಟ್ಟಿಗೆ ಒಡೆಯುತ್ತಿರುವ ಗಂಡಸು. ಕೊಂಚ ದೂರದಲ್ಲೊಂದು ಸೋಗೆಯ ಮನೆ. ಅಂಗಳದಲ್ಲಿ ಕುರಿಗಾಹಿ ಯುವಕ ಹಾಗೂ ಅಡಿಕೆ ಸುಲಿಯುತ್ತಿರುವ ಹೆಂಗಸು. ಇನ್ನೊಂದು ಗುಡಿಸಲಿನ ಎದುರು, ಮೊರದಲ್ಲಿ ಭತ್ತ ತೂರುತ್ತಿರುವ ಮಹಿಳೆ, ಪಕ್ಕದ ಪಂಚಾಯತಿ ಕಟ್ಟೆ ಮೇಲೆ ನ್ಯಾಯ ಹೇಳಲು ಕುಳಿತಿರುವ ಸರಪಂಚರು, ಸ್ವಲ್ಪ ದೂರದಲ್ಲಿ ಬುಡುಬುಡಕಿ ದಾಸಯ್ಯ… ಈ ಸ್ಥಳಕ್ಕೆ ಬಂದವರಿಗೆ, “ಅರೆ, ಇದ್ಯಾವ ಹಳ್ಳಿಗೆ ಬಂದುಬಿಟ್ಟೆ’ ಅಂತ ಅರೆಕ್ಷಣ ಗೊಂದಲವಾಗುವುದಂತೂ ನಿಜ. ಹಿಂದಿನ ಕಾಲದಲ್ಲಿ ರಾಗಿಯನ್ನು ಕೈಯಲ್ಲೇ ಬೀಸುತ್ತಿದ್ದರಂತೆ, ಮಣ್ಣಿನ ಗೋಡೆಯ- ತೆಂಗು/ಅಡಕೆಯ ಸೋಗೆಯ ಚಾವಣಿಯ ಮನೆಯಲ್ಲಿ ವಾಸಿಸುತ್ತಿದ್ದರಂತೆ, ಒನಕೆಯಿಂದ ಭತ್ತ ಕುಟ್ಟುತ್ತಿದ್ದರಂತೆ, ಅಂತ ಕೇಳಿ ತಿಳಿದ ನಗರವಾಸಿಗಳಿಗೆ, ಅವೆಲ್ಲವನ್ನೂ ಕಣ್ಣಾರೆ ನೋಡುವ ಅವಕಾಶ ಇಲ್ಲಿದೆ. ಇಲ್ಲಿ, ಅಂದರೆ; ರಾಮನಗರದ “ಜಾನಪದ ಲೋಕ’ದಲ್ಲಿ.

ನಾಗೇಗೌಡರು ಕಂಡ ಕನಸು
ನಮ್ಮ ಜನಪದ ಸಂಸ್ಕೃತಿ ಅತಿ ಶ್ರೀಮಂತವಾದುದು. ಜನಪದರ ಒಗಟು, ಗಾದೆ, ಹಾಡುಗಳನ್ನು ಸಂಗ್ರಹಿಸುವುದು, ಮುಂದಿನ ಪೀಳಿಗೆಗೆ ಪರಿಚಯಿಸುವುದು ಎಷ್ಟು ಮಹತ್ವಧ್ದೋ, ಹಿಂದಿನವರ ಜೀವನಶೈಲಿಯನ್ನು, ಅವರು ಬಳಸುತ್ತಿದ್ದ ವಸ್ತುಗಳನ್ನು ದಾಖಲಿಸುವುದು ಕೂಡಾ ಅಷ್ಟೇ ಮಹತ್ವದ್ದು. ಹಾಗಂತ ನಂಬಿದ್ದವರು, ಜಾನಪದ ತಜ್ಞ ಎಚ್‌.ಎಲ್‌. ನಾಗೇಗೌಡರು. ಜಾನಪದ ವಸ್ತು ಸಂಗ್ರಹಾಲಯ ತೆರೆಯಬೇಕು. ಆ ಮೂಲಕ, ನಮ್ಮ ಪೂರ್ವಿಕರು ಬದುಕಿದ ರೀತಿಯನ್ನು ಇಂದಿನವರಿಗೆ ಪರಿಚಯಿಸಬೇಕು ಎಂಬುದು ಅವರ ಕನಸಾಗಿತ್ತು. ಐಎಎಸ್‌ ಅಧಿಕಾರಿಯಾಗಿ ನಿವೃತ್ತರಾದ ನಂತರ, ಆ ಕನಸಿನ ಹಿಂದೆ ಬಿದ್ದು, 1994ರಲ್ಲಿ “ಜಾನಪದ ಲೋಕ’ ಎಂಬ, ಹದಿನೈದು ಎಕರೆ ವಿಸ್ತೀರ್ಣದ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದರು.

ಹಳ್ಳಿ ಹಳ್ಳಿ ಸುತ್ತಾಡಿದರು
ಬಯಲುಸೀಮೆ, ಕರಾವಳಿ, ಮಲೆನಾಡು, ಬುಡಕಟ್ಟು ಜನಾಂಗ, ಆದಿವಾಸಿಗಳು… ಹೀಗೆ, ಕರ್ನಾಟಕದ ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ಜಾನಪದ ಸಂಸ್ಕೃತಿ ನೆಲೆಯೂರಿತ್ತು. ಅವರ ಭಾಷೆ, ಹಾಡು, ಆಹಾರ ಪದ್ಧತಿ, ಕೃಷಿ ವಿಧಾನ, ಸಲಕರಣೆಗಳು… ಎಲ್ಲವೂ ಭಿನ್ನ-ವಿಭಿನ್ನ. ಇವೆಲ್ಲವನ್ನೂ ಒಂದೆಡೆ ಕಲೆ ಹಾಕುವುದು ಸುಲಭದ ಕೆಲಸವಲ್ಲ. ಅದರಲ್ಲೂ, ಆಧುನಿಕತೆಯ ಗಾಳಿಗೆ ಅವೆಷ್ಟೋ ಜಾನಪದ ಕುರುಹುಗಳು ಅಳಿಸಿ ಹೋಗಿದ್ದವು. ಅವೆಲ್ಲವನ್ನೂ ಕ್ರೋಡೀಕರಿಸಿ, ಒಂದೆಡೆ ದಾಖಲಿಸಲು ನಾಗೇಗೌಡರು ಅದೆಷ್ಟೋ ಹಳ್ಳಿಗಳನ್ನು ಸುತ್ತಿದರು. ಮನೆ-ಮನೆಗೂ ಹೋಗಿ, ಅಲ್ಲಿ ಸಿಕ್ಕಿದ ಜಾನಪದ ವಸ್ತುಗಳನ್ನು ತಮ್ಮ ಸಂಗ್ರಹಕ್ಕೆ ಸೇರಿಸಿದರು. ಅದರ ಫ‌ಲವಾಗಿ, 5 ಸಾವಿರಕ್ಕೂ ಹೆಚ್ಚು ಜಾನಪದ ಕಲಾಕೃತಿಗಳನ್ನು ಒಂದೆಡೆ ನೋಡಬಹುದು.

ಮಲೆನಾಡ ಶೈಲಿಯ ಮನೆಗಳು
70-80ರ ದಶಕದ ಮಲೆನಾಡ ಶೈಲಿಯ ಜೀವನ ಶೈಲಿಯನ್ನು ಬಿಂಬಿಸುವ, ಮಣ್ಣಿನ ಗುಡಿಸಲುಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಗ್ರಾಮೀಣ ಜನರು ಬಳಸುತ್ತಿದ್ದ ಕೃಷಿ ಸಲಕರಣೆಗಳು, ಮಣ್ಣಿನ, ಮರದ ಪಾತ್ರೆಗಳು, ಹೈನುಗಾರಿಕೆಗೆ ಸಂಬಂಧಿಸಿದ ಹಳೆ ಕಾಲದ ವಸ್ತುಗಳು, ಬಿದಿರಿನ ಬುಟ್ಟಿ, ತೊಟ್ಟಿಲು, ಒನಕೆ, ಒರಳು ಕಲ್ಲು, ನೇಗಿಲು, ಮಣ್ಣಿನ ಪಾತ್ರೆಗಳು, ದೇವರ ಪಟಗಳು, ಮುಂತಾದ ನೂರಾರು ವಸ್ತುಗಳ ಸಂಗ್ರಹವೇ ಇಲ್ಲಿದೆ. ಜೊತೆಗೆ, ಆ ವಸ್ತುವನ್ನು ಎಲ್ಲಿ, ಯಾವಾಗ, ಯಾವ ಸಮುದಾಯದ ಜನರು ಬಳಸುತ್ತಿದ್ದರು ಮತ್ತು ಅದರ ವಿಶೇಷತೆ ಏನು ಎಂಬುದರ ಕುರಿತಾದ ಟಿಪ್ಪಣಿಯೂ ಇದೆ. ಎರಡಂತಸ್ತಿನ ಲೋಕ ಮಹಲ್‌ ಎಂಬ ಕಟ್ಟಡದಲ್ಲಿ, ಯಕ್ಷಗಾನ, ತೊಗಲು ಗೊಂಬೆಯಾಟ ಮುಂತಾದ ಜಾನಪದ ನೃತ್ಯ ಮತ್ತು ಸಂಗೀತಕ್ಕೆ ಸಂಬಂಧಿಸಿದ ವಸ್ತುಗಳನ್ನು, ವಾದ್ಯಗಳನ್ನು, ಪ್ರತಿಕೃತಿಗಳನ್ನು ನೋಡಬಹುದು.

Advertisement

ದೊಡ್ಡಮನೆ, ಕೆರೆ
ಸಾಂಪ್ರದಾಯಿಕ ಹಳ್ಳಿಮನೆಯಂತೆ ತೋರುವ “ದೊಡ್ಡಮನೆ’ ಇಲ್ಲಿದ್ದು, ರಂಗ ಶಿಬಿರ, ಜಾನಪದ ಕಾರ್ಯಾಗಾರ, ಸೆಮಿನಾರ್‌ ಮುಂತಾದ ಚಟುವಟಿಕೆಗಳನ್ನು ಆಯೋಜಿಸಲು ಬಾಡಿಗೆಗೆ ನೀಡಲಾಗುತ್ತದೆ. ಮಂತ್ರಮಾಂಗಲ್ಯ ಶೈಲಿಯ ಮದುವೆಗಳೂ ಇಲ್ಲಿ ನಡೆದಿವೆ. ಗಿಡ, ಮರಗಳನ್ನು ಒಳಗೊಂಡು, ಅರಣ್ಯದಂತೆಯೇ ತಂಪಾಗಿರುವ ಜಾನಪದ ಲೋಕದ ಹಿಂಭಾಗದಲ್ಲಿ ಕೆರೆ ಕೂಡಾ ಇದೆ. ಮಳೆಗಾಲದ ಸಮಯದಲ್ಲಿ ಬೋಟಿಂಗ್‌ ಕೂಡಾ ಹೋಗಬಹುದು. 80-100 ಜನರು ಕುಳಿತುಕೊಳ್ಳಬಹುದಾದ ಬಯಲು ರಂಗಮಂದಿರದಲ್ಲಿ, ಚಟುವಟಿಕೆಗಳನ್ನು ನಡೆಸಲು ಅವಕಾಶವಿದೆ.

ರಜತ ಮಹೋತ್ಸವ
1994ರಲ್ಲಿ ನಿರ್ಮಿಸಲ್ಪಟ್ಟ “ಜಾನಪದಲೋಕ’ವು, 25ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಕರ್ನಾಟಕದ ಜಾನಪದ ಪರಿಷತ್‌ನ ಅಧೀನದಲ್ಲಿರುವ ಈ ಸಂಸ್ಥೆಯು, ಜಾನಪದದ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಲಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಜೋಡಿ ಎತ್ತುಗಳ ಪ್ರದರ್ಶನ ಮತ್ತು ಸ್ಪರ್ಧೆ, ರಾಸುಗಳ ಕಿಚ್ಚು ಹಾಯಿಸುವಿಕೆ, ಮಾಸಿಕ ಜಾನಪದ ಕಾರ್ಯಕ್ರಮಗಳು, ರಾಜ್ಯಮಟ್ಟದ ಜಾನಪದ ಗೀತೆ ಗಾಯನ ಸ್ಪರ್ಧೆ, ಗ್ರಾಮೀಣ ಆಹಾರ ಮೇಳ, ಗಾಳಿಪಟ ಉತ್ಸವ… ಹೀಗೆ, ವರ್ಷಪೂರ್ತಿ ಇಲ್ಲಿ ಜಾನಪದದ ಕಲರವ ಕೇಳಿಸುತ್ತಿರುತ್ತದೆ. ರಾಜ್ಯದ ಹತ್ತು ಬುಡಕಟ್ಟು ಜನಾಂಗವನ್ನು ಗುರುತಿಸಿ, ಅವರ ಜೀವನಶೈಲಿಯ ಪ್ರತಿಕೃತಿ ಮತ್ತು ಮನೆಗಳನ್ನು ನಿರ್ಮಿಸುವ ಕೆಲಸ ಮುಂದಿನ ತಿಂಗಳಿನಿಂದ ಆರಂಭವಾಗಲಿದೆಯಂತೆ. ಕೆರೆಯ ಹಿಂಭಾಗದಲ್ಲಿ ಪ್ರಾಣಿಗಳ ಪ್ರತಿಕೃತಿಯನ್ನು ನಿರ್ಮಿಸುವ ಆಲೋಚನೆಯೂ ಇದೆ ಅಂತಾರೆ, ಜಾನಪದ ಲೋಕದ ಅಧ್ಯಕ್ಷ ಟಿ. ತಿಮ್ಮೇಗೌಡ.

“1985-86ರಲ್ಲಿ ನಾನು ಬೆಂಗಳೂರಿನ ವಿಶೇಷ ಜಿಲ್ಲಾಧಿಕಾರಿ ಆಗಿದ್ದಾಗ, ನಾಗೇಗೌಡರಿಗೆ ಈ ಜಾಗವನ್ನು ಮಂಜೂರು ಮಾಡಿದ್ದೆ. ಜಾನಪದ ಲೋಕ ನಿರ್ಮಿಸಲು ಭೂಮಿ ಬೇಕೆಂದು ಅವರು, ಅದಾಗಲೇ ಬಹಳಷ್ಟು ಅಲೆದಾಡಿದ್ದರು. ಕಾಡು-ಹಳ್ಳ, ದಿಣ್ಣೆಯಿಂದ ಕೂಡಿದ್ದ ಪ್ರದೇಶವನ್ನು ಈ ಮಟ್ಟಕ್ಕೆ ತಂದಿರುವುದು ಅವರ ಇಚ್ಛಾಶಕ್ತಿಗೆ ಸಾಕ್ಷಿ. ನಾಗೇಗೌಡರು ಮತ್ತು ಜಿ. ನಾರಾಯಣ್‌ರ ಪರಿಶ್ರಮದಿಂದ ಜಾನಪದ ಲೋಕ ಬಹಳಷ್ಟು ಬೆಳೆಯಿತು. ನಾನು ಅಧ್ಯಕ್ಷನಾದ ನಂತರ, ಹಾವೇರಿಯ ಕಲಾವಿದ ಸೊಲಬಕ್ಕನವರ್‌ ನೆರವಿನಿಂದ ಜಾನಪದ ಲೋಕಕ್ಕೆ ಹೊಸ ಸ್ಪರ್ಶ ಕೊಡಿಸಿದೆ. ಜಾನಪದ ಪ್ರತಿಕೃತಿ, ಪಾರಂಪರಿಕ ಕುಟೀರ, ಗ್ರಾಮೀಣ ಜೀವನವನ್ನು ಬಿಂಬಿಸುವ ಬೊಂಬೆಗಳನ್ನು ನಿರ್ಮಿಸೋಣವೆಂದು, ನಾಗೇಗೌಡರ ಕಾಲದಲ್ಲಿಯೇ ಸೊಲಬಕ್ಕನವರು ಕೇಳಿಕೊಂಡಿದ್ದರಂತೆ. ಆದರೆ, ಹಣದ ಕೊರತೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ.
– ಟಿ. ತಿಮ್ಮೇಗೌಡ, ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ


ಹೊಸ ವರ್ಷದಂದು ಹೊಸ ದಾಖಲೆ
ಕೇಂದ್ರ ಸಚಿವೆ ಮನೇಕಾ ಗಾಂಧಿ ಸೇರಿದಂತೆ, ಹಲವು ಗಣ್ಯರು ಕೂಡಾ ಇಲ್ಲಿಗೆ ಭೇಟಿ ನೀಡಿದ್ದಾರೆ. ವಿದೇಶಿಯರು ಕೂಡಾ ಸಂಶೋಧನೆ, ಪ್ರವಾಸದ ನೆಪದಲ್ಲಿ ಆಗಾಗ್ಗೆ ಬರುತ್ತಿರುತ್ತಾರೆ. ಆದರೆ, ಹೆಚ್ಚಾಗಿ ಬರುವವರು ಬೆಂಗಳೂರಿನ ಐಟಿ, ಬಿಟಿ ಜನರೇ ಅಂತೆ. ಅದಕ್ಕಾಗಿಯೇ, ವಾರಾಂತ್ಯದಲ್ಲಿ, ಸರ್ಕಾರಿ ರಜಾದಿನಗಳಲ್ಲಿ ಇಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿರುತ್ತದೆ. ತಿಂಗಳಿಗೆ, 4-5 ಲಕ್ಷ ರೂ. ಪ್ರವೇಶ ಶುಲ್ಕ ಸಂಗ್ರಹವಾಗುತ್ತದೆ. ಆದರೆ, ಈ ಬಾರಿ, ಜನವರಿ ಒಂದರಂದೇ, 1 ಲಕ್ಷ 6 ಸಾವಿರ ರೂ. ಸಂಗ್ರಹವಾಗಿ, ದಾಖಲೆ ಸೃಷ್ಟಿಸಿದೆ ಅಂತಾರೆ, ಮುಖ್ಯ ಆಡಳಿತಾಧಿಕಾರಿ ಸಿ.ಎನ್‌. ರುದ್ರಪ್ಪ.

ಸ್ವಾಮಿಗಳ ಅಭಯ ಹಸ್ತ
ಆರಂಭದ ದಿನಗಳಲ್ಲಿ, ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಜಾನಪದ ಲೋಕವನ್ನು ಮುಚ್ಚುವ ಪರಿಸ್ಥಿ ಬಂದಿತ್ತು. ನಾಲ್ಕೈದು ತಿಂಗಳು, ಜಾನಪದ ಲೋಕದ ಕೆಲಸಗಾರರಿಗೆ ಸಂಬಳ ಕೊಡಲೂ ಹಣವಿರಲಿಲ್ಲ. ಸರ್ಕಾರದಿಂದ ಸೂಕ್ತ ಅನುದಾನ, ಸಹಾಯವೂ ದೊರೆಯಲಿಲ್ಲ. ಆಗ, ನಾಗೇಗೌಡದ ಬೆನ್ನಿಗೆ ನಿಂತವರು, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು. ನಾವಿದ್ದೇವೆ, ನೀವು ಮುಂದುವರಿಸಿಕೊಂಡು ಹೋಗಿ ಅಂತ ಧೈರ್ಯ ಹೇಳಿ, ಧನ ಸಹಾಯವನ್ನು ಮಾಡಿದರಂತೆ ಸ್ವಾಮೀಜಿಗಳು. ಈಗ, ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳು ಪ್ರಧಾನ ಪೋಷಕರಾಗಿ, “ಜಾನಪದ ಲೋಕ’ದ ಪ್ರೇರಣಾ ಶಕ್ತಿಯಾಗಿದ್ದಾರೆ.

ಜಾನಪದ ಲೋಕದ ಬೆಳ್ಳಿ ಹಬ್ಬ ಸಮಾರಂಭವನ್ನು ಫೆ.16ರಂದು ರವೀಂದ್ರ ಕಲಾಕ್ಷೇತ್ರದಲ್ಲಿ, 17-18ರಂದು ಜಾನಪದ ಲೋಕದ ಆವರಣದಲ್ಲಿ ಆಚರಿಸಲಾಗುವುದು.ಈ ಸಂದರ್ಭದಲ್ಲಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಜಾನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಲಾಕ್ಷೇತ್ರದ ಆವರಣವನ್ನು ಗ್ರಾಮೀಣ ಮಾದರಿಯಲ್ಲಿ ಸಿಂಗರಿಸಿ, ಒಂದು ದಿನದ ಮಟ್ಟಿಗೆ ಬೆಂಗಳೂರಿನಲ್ಲಿ “ಜಾನಪದ ಲೋಕ’ವನ್ನು ನಿರ್ಮಿಸಲಾಗುತ್ತಿದೆ.

ಕುಂಬಾರಿಕೆ ಕೈ ಚಳಕ
ಮಣ್ಣಿನಿಂದ ಮಡಕೆ ಮಾಡುವುದೊಂದು ಅದ್ಭುತ ಕಲೆ. ಮಣ್ಣನ್ನು ಹದವಾಗಿ ಕಲೆಸಿ, ಚಕ್ರ ತಿರುಗಿಸುತ್ತಾ ಬೇಕಾದ ಆಕಾರದ ಮಡಕೆ/ಹೂಜಿ/ ಪಾತ್ರೆ ತಯಾರಿಸಿ, ಅದಕ್ಕೆ ಚಂದದ ಡಿಸೈನ್‌ ಮಾಡಿ, ಬಿರುಕು ಬಿಡದಂತೆ ಜೋಪಾನವಾಗಿ ಒಣಗಿಸಿ, ಬಣ್ಣ ಹಚ್ಚುವ ಸಂಪೂರ್ಣ ಪ್ರಕ್ರಿಯೆಯನ್ನು ಜಾನಪದ ಲೋಕದಲ್ಲಿ ಪ್ರತ್ಯಕ್ಷವಾಗಿ ನೋಡಬಹುದು. ದಶಕಗಳಿಂದ ಇಲ್ಲಿ ಮಡಕೆ ಮಾಡುತ್ತಿರುವ ರಾಮನಗರದ ಅನುಸೂಯಮ್ಮ, ಕುಂಬಾರಿಕೆಯ ಕೈಚಳಕವನ್ನು ಪ್ರದರ್ಶಿಸಲು ಸದಾ ಸಿದ್ಧ. (( ಐಎಲ್‌ಬಿಗೆ ಮಾತ್ರ….ಅವರ ಕೈಯಲ್ಲಿ ಅರಳಿದ ಮಣ್ಣಿನ ಗೊಂಬೆ, ಪಾತ್ರೆ ಹಾಗೂ ಇತರೆ ಅಲಂಕಾರಿಕ ವಸ್ತುಗಳನ್ನು ಬೆಂಗಳೂರು ಎಂಜಿ ರಸ್ತೆಯ ಕಾವೇರಿ ಎಂಪೋರಿಯಂ ಮಳಿಗೆಯಲ್ಲಿ ಆರ್ಡರ್‌ ಕೊಟ್ಟು ಖರೀದಿಸಬಹುದು)))

ಎಲ್ಲಿದೆ: ರಾಮನಗರ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 53 ಕಿ.ಮೀ. ದೂರ
ಸಮಯ: ಬೆಳಗ್ಗೆ 9.30-5.30 (ಮಂಗಳವಾರ ರಜಾದಿನ)
ಪ್ರವೇಶ ದರ: 40 ರೂ.

ಪ್ರಿಯಾಂಕ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next