Advertisement

ಸರ್ಕಾರಿ ಕಾಲೇಜಲ್ಲಿ ಜಾನಪದ ಜಾತ್ರೆ 

07:16 AM Mar 08, 2019 | |

ಮಂಡ್ಯ: ಇದೇ ಮೊದಲ ಬಾರಿಗೆ ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ನಡೆದ ಜಾನಪದ ಜಾತ್ರೆಯಿಂದ ಗ್ರಾಮೀಣ ಸೊಗಡು ತುಂಬಿಕೊಂಡಿತ್ತು. ಜಾತ್ರೆ ಸಂಭ್ರಮದಲ್ಲಿ ವಿದ್ಯಾಥಿಗಳು ಸಂತಸದಿಂದ ಪಾಲ್ಗೊಂಡು ವಿಶೇಷ ಮೆರುಗು ತುಂಬಿದರು.

Advertisement

ಜಾನಪದ ಜಾತೆ ಹಾಗೂ ಕನ್ನಡ ರಾಜ್ಯೋತ್ಸವಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲು ಕಾಲೇಜಿನ ವಿದ್ಯಾರ್ಥಿಗಳು ಹಿರಿಯ ಜಾನಪದ ಕಲಾವಿದರ ಮಾರ್ಗದರ್ಶನದಲ್ಲಿ ಜಾನಪದ ಕಲಾ ಪ್ರಕಾರಗಳ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಗುರುವಾರ ನಡೆದ ಜಾನಪದ ಜಾತ್ರೆ ಸಮಯದಲ್ಲಿ ಧ್ವಜ ಕುಣಿತ, ಪಟ ಕುಣಿತ, ವೀರಗಾಸೆ, ಪೂಜಾ ಕುಣಿತ, ಬೀಸು-ಕಂಸಾಳೆ ಸೇರಿದಂತೆ ಹಲವು ಜನಪದ ಕಲಾತಂಡಗಳೊಂದಿಗೆ ಕಾಲೇಜಿನ ಮುಖ್ಯದ್ವಾರದಿಂದ ಮೆರವಣಿಗೆ ನಡೆಸಿ ಗಮನ ಸೆಳೆದರು. 

ವೇದಿಕೆ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಾಗವಹಿಸಿ ದೇಶೀಯ ಸಂಸ್ಕೃತಿ ಸೊಗಡನ್ನು ಪಸರಿಸಿದರಲ್ಲದೆ, ತಮ್ಮೊಳಗಿನ ಕಲಾ ಪ್ರತಿಭೆಯನ್ನು  ವಿಶೇಷ ರೀತಿಯಲ್ಲಿ ಅನಾವರಣಗೊಳಿಸಿದರು.

ದೇಸಿ ಸಂಭ್ರಮ: ವಿಭಿನ್ನ ವಿನ್ಯಾಸದ ಜನಪದ ಉಡುಗೆ-ತೊಡಗೆಗಳಲ್ಲಿ ಕಂಗೊಳಿಸಿದ ವಿದ್ಯಾರ್ಥಿಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದರು. ಕ್ಯಾಂಪನ್‌ ತುಂಬೆಲ್ಲಾ ಓಡಾಡುತ್ತಿದ್ದ ಯುವತಿಯರು ಆಕರ್ಷಕ ಉಡುಗೆಗಳೊಂದಿಗೆ ಎಲ್ಲರ ಗಮನ ಸೆಳೆದರೆ, ತಮಟೆ ಸದ್ದಿಗೆ ಸಾಮೂಹಿಕವಾಗಿ ಸ್ಟೆಪ್‌ ಹಾಕಿದ ಯುವಕರು ಜಾತ್ರೆಗೆ ಮತ್ತಷ್ಟು ರಂಗು ತಂದರು. ನಿತ್ಯವೂ ತರಗತಿ, ಪಾಠ-ಪ್ರವಚನಗಳಲ್ಲಿ ತೊಡಗುತ್ತಿದ್ದ ವಿದ್ಯಾರ್ಥಿಗಳಿಗೆ ದೇಸಿ ಸಂಭ್ರಮ ಹೆಚ್ಚು ಖುಷಿ ನೀಡಿತು. ಈ ವೈಭವವನ್ನು ಸೆಲ್ಫಿ ಮೂಲಕ ಸೆರೆಹಿಡಿದ ವಿದ್ಯಾರ್ಥಿಗಳು ಮೊಬೈಲ್‌ಗ‌ಳಲ್ಲಿ ಮಾತ್ರವಲ್ಲದೆ, ತಮ್ಮ ಸ್ಮೃತಿ ಪಠಲದಲ್ಲೂ ಉಳಿಸಿಕೊಂಡರು.

ಒಂದು ತಿಂಗಳ ತಯಾರಿ ನಡೆಸಿ ಜಾನಪದ ಕಲೆಗಳನ್ನು ವೇದಿಕೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಕಾಲೇಜಿನ ವಿದ್ಯಾರ್ಥಿಗಳು, ಎಲ್ಲರಿಂದ ಸೈ ಎನಿಸಿಕೊಂಡರು. ಧ್ವಜ ಕುಣಿತ, ಪಟ ಕುಣಿತ, ವೀರಾಗಾಸೆ ಕಲಾವಿದರ ಗೈರತ್ತು, ಪೂಜಾ ಕುಣಿತ ತಂಡಗಳು ನೀಡಿ ದೃಷ್ಟಾಂತ ಬರಪೂರ ಸಿಳ್ಳೆ, ಚಪ್ಪಾಳೆಗಳನ್ನು ಪಡೆದವು. ಕೊರಳಲ್ಲಿ ರಾರಾಜಿಸುತ್ತಿದ್ದ ಕನ್ನಡ ಭಾವುಟ ಹಾಕಿದ್ದ ಇತರೆ ವಿದ್ಯಾರ್ಥಿಗಳು ಜಾತ್ರೆಯ ವಿಶೇಷ ಹೆಚ್ಚಿಸಿದರು.

Advertisement

ಪಠ್ಯದ ವಿಷಯವಾಗಲಿ: ಜಾನಪದ ಕಲೆ ಮತ್ತು ಸಂಸ್ಕೃತಿಯನ್ನ ಶಾಲೆ ಮತ್ತು ಕಾಲೇಜಿನ ಪಠ್ಯಪುಸ್ತಕದಲ್ಲಿ ಅಳಡಿಸಿ ನಮ್ಮ ಸ್ವಾಭಿಮಾನದ ಸಂಕೇತವಾಗಿರುವ ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದರು. 

ಕನ್ನಡ ರಾಜ್ಯೋತ್ಸವ ಮತ್ತು ಜಾನಪದ ಜಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಜಾನಪದ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಬೇಕಾಗಿದೆ. ನಮ್ಮ ಹೆಣ್ಣುಮಕ್ಕಳು ಜಾನಪದ ಸಂಸ್ಕೃತಿಯನ್ನು ಮುಂದಕ್ಕೆ ಕೊಂಡೊಯ್ಯುವ ರಾಯಭಾರಿಗಳಾಗಿದ್ದಾರೆ. ಹಬ್ಬದ ದಿನಗಳಲ್ಲಿ ಶಾಸ್ತ್ರ , ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅವರು, ಹಿಂದಿನ ಆಚಾರಗಳನ್ನು ಮುಂದುವರೆಸುತ್ತಿದ್ದಾರೆ. ಇನ್ನು ಯುವಕರು ಸಂಸ್ಕೃತಿಯ ರಕ್ಷಕರಾಗಿದ್ದಾರೆ ಎಂದು ಬಣ್ಣಿಸಿದರು.

ಮೈಸೂರಿನ ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ಪ್ರಾಧ್ಯಾಪಕ ಎಂ.ಮಹಾಲಿಂಗು ಪ್ರಧಾನ ಭಾಷಣ ಮಾಡಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಮಹಾಲಿಂಗು ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಎನ್‌.ಎಸ್‌.ಶಂಕರೇಗೌಡ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿ.ಕೆ.ರವಿಕುಮಾರ್‌ ಚಾಮಲಾಪುರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next