ಕುಷ್ಟಗಿ: ಮೂಲ ಜಾನಪದ ಸಂಸ್ಕೃತಿ ಮತ್ತು ಪರಂಪರೆ ಗ್ರಾಮೀಣ ಜನರ ಜೀವನಾಡಿಯಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ ಹೇಳಿದರು.
ಇಲ್ಲಿನ ಬಸವ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ| ಬಿ.ಆರ್. ಅಂಬೇಡ್ಕರ್ ಸಾಂಸ್ಕೃತಿಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಪರಿಶಿಷ್ಟ ಜಾತಿ, ಸಾಮಾನ್ಯ ಯೋಜನೆ ಅಡಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆ ಹಾಗೂ ಭಾಷೆಯ ಉಳಿವಿಗೆ ಹೆಚ್ಚು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರ ಸದುಪಯೋಗ ಪಡೆದು ಜನರಲ್ಲಿ ಮತ್ತಷ್ಟು ಆಸಕ್ತಿ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿರಬೇಕು. ಹಿಂದೆ ಹಳ್ಳಿಗಳಲ್ಲಿ ಹಬ್ಬ, ಮದುವೆ, ಶುಭ ಕಾರ್ಯಗಳಲ್ಲಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಹಾಡುವ ಪದಗಳು ಜಾನಪದಗಳಾಗಿ ಪ್ರಸ್ತುವಾಗಿವೆ. ಆಧುನಿಕತೆ ಪ್ರಭಾವ ಜಾನಪದ ಸಂಸ್ಕೃತಿ ಕಡಿಮೆಯಾಗಿದೆ. ಜಾಗತೀಕರಣದ ಪ್ರಭಾವದಲ್ಲೂ ಜನಪದ ಜನರಲ್ಲಿ ಉಳಿದಿದೆ. ಅದನ್ನು ಬೆಳೆಸಿಕೊಂಡು ಹೋಗುವ ಗುರಿ ಯುವ ಸಮುದಾಯದ ಮೇಲಿದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಸಮಿತಿ ಸದಸ್ಯ ರವೀಂದ್ರ ಬಾಕಳೆ ಮಾತನಾಡಿ, ಆಧುನಿಕತೆ ಭರಾಟೆ ನಡುವೆಯೂ ಜನಪದ ಹಳ್ಳಿಗರಿಂದಲೇ ಜೀವಂತವಾಗಿದೆ. ನಾಡಿನ ಕನ್ನಡ ಜನಪದ ಸಂಸ್ಕೃತಿ ಉಳಿಸಲು ರಾಜ್ಯದೆಲ್ಲೆಡೆ ಕಾರ್ಯಕ್ರಮ ನೀಡಲು ಇನ್ನಷ್ಟು ಅನುದಾನ ಹೆಚ್ಚಿಸಬೇಕಿದೆ. ಕಲಾವಿದರ ಪರಿಕರಕ್ಕೆ ಸಹಾಯಧನ ನೀಡಬೇಕು, ಜಾನಪದ ಜಾತ್ರೆ ಪುನಃ ಆರಂಭಿಸಬೇಕು ಎಂದರು.
ಜಾನಪದ ಕಲಾವಿದ ಜೀವನಸಾಬ್ ಬಿನ್ನಾಳ ಮಾತನಾಡಿ, ಭವಿಷ್ಯದ ದಿನಗಳಲ್ಲಿ ಜಾನಪದ ಹಾಡುವವರು ನೇಪಥ್ಯಕ್ಕೆ ಸರಿಯುವ ಕಾಲಘಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರನ್ನು ಗುರುತಿಸಿ, ಅನುದಾನ ನೀಡಿ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ ಹಿರೇಮಠ, ದೊಡ್ಡಾಟ ಕಲಾವಿದ ಶರಣಪ್ಪ ಬನ್ನಿಗೋಳ, ಮೋಹನಲಾಲ್ ಜೈನ್, ರಾಮಣ್ಣ ಗೊಲ್ಲರ, ಹನುಮಂತ ಕುಮಾರ, ದೇವೇಂದ್ರಪ್ಪ ಕ್ಯಾದಗುಂಪಿ, ಬಸವ ಸಮಿತಿ ಅಧ್ಯಕ್ಷ ಶಂಕ್ರಗೌಡ ಪಾಟೀಲ ಇದ್ದರು. ಬಸವರಾಜ ಉಪ್ಪಲದಿನ್ನಿ ನಿರೂಪಿಸಿದರು ಸುಕಮುನಿ ಗುಮಗೇರಿ ವಂದಿಸಿದರು. ನಂತರ ಜಾನಪದ ಕಲಾವಿದೆ ಮುದುಕವ್ವ ಗಂಜಿಹಾಳ ಸಂಗಡಿಗರಿಂದ ಗೀಗೀ ಪದ, ತತ್ವಪದಕಾರ ಖಾಜಾಹುಸೇನ್ ಅತ್ತಾರ ಅವರು ತತ್ವಪದ ಹಾಡುವ ಮೂಲಕ ರಂಜಿಸಿದರು.