ಚಾಮರಾಜನಗರ: ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಜಿಲ್ಲಾಡಳಿತ ವತಿಯಿಂದ ಇದೇ ಮೊಟ್ಟ ಮೊದಲ ಬಾರಿಗೆ ಚಾಮರಾಜನಗರದಲ್ಲಿ 2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ರಾಜ್ಯ ಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಹಾಗೂ 2018-19ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭವನ್ನು ಫೆ.7ರಂದು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಮಾತಾ ಬಿ ಮಂಜಮ್ಮ ಜೋಗತಿ ಹಾಗೂ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮ ಕುರಿತು ವಿವರಿಸಿದರು. ಫೆ.7ರಂದು ಬೆಳಗ್ಗೆ 11 ಕ್ಕೆ ನಗರದ ಕರಿನಂಜನಪುರ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸಮಾರಂಭ ನಡೆಯಲಿದೆ. ಇದಕ್ಕೂ ಮೊದಲು ಅಂದರೆ ಬೆಳಗ್ಗೆ 9 ಕ್ಕೆ ಜಿಲ್ಲಾಡಳಿತ ಭವನದ ಆವರಣದಿಂದ ಪ್ರಶಸ್ತಿ ಪುರಸ್ಕತರನ್ನು ಅಲಂಕೃತ ಎತ್ತಿನಗಾಡಿಗಳ ಮೂಲಕ ಕಲಾ ತಂಡಗಳ ಪ್ರದರ್ಶನದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುವ ಅಂಬೇಡ್ಕರ್ ಭವನಕ್ಕೆ ಗೌರವ ಪೂರ್ವಕವಾಗಿ ಕರೆದೊಯ್ಯಲಾಗುತ್ತದೆ.
ಮೆರವಣಿಗೆಯಲ್ಲಿ ಕಂಸಾಳೆ, ಗೊರವರ ಕುಣಿತ, ನಗಾರಿ,ತಮಟೆ, ಮರಗಾಲು ಕುಣಿತ, ಕಂಡಾಯ ಸೇರಿದಂತೆ ಜಿಲ್ಲೆಯ ದೇಸಿ ಸಂಸ್ಕೃತಿಯ ವೈಭವ ಬಿಂಬಿತವಾಗಲಿದೆ ಎಂದರು. ಪೂರ್ಣಕುಂಭಗಳೊಂದಿಗೆ ಪ್ರಶಸ್ತಿ ಪುರಸ್ಕತರನ್ನು ಸ್ವಾಗತಿಸಲಾಗುತ್ತದೆ. ಬೆಳಗ್ಗೆ 11 ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಡುವ ಜಾನಪದ ರತ್ನ ಪುಸ್ತಕವನ್ನು ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ :250 ಕೋಟಿ ರೂ. ಮೀಸಲಿಡಲು ಮನವಿ
ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ದೇಸಿ ಸಂಸ್ಕೃತಿ ಚಿಂತಕರು ಪ್ರಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಡಾ. ಹಂಸಲೇಖ ಅಭಿನಂದನಾ ನುಡಿಗಳನ್ನಾಡುವರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ. ಬಿ ಮಂಜಮ್ಮ ಜೋಗತಿ ಪ್ರಾಸ್ತಾವಿಕ ನುಡಿಗಳನ್ನಾಡುವರು. ಜಿಪಂ ಅಧ್ಯಕ್ಷೆ ಎಂ.ಅಶ್ವಿನಿ, ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕರಾದ ಸಿ.ಎಸ್. ನಿರಂಜನ್ ಕುಮಾರ್, ಆರ್. ನರೇಂದ್ರ, ಎನ್. ಮಹೇಶ್, ವಿಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ. ಶಾಂತಮೂರ್ತಿ ಕುಲಗಾಣ, ನಗರಸಭೆ ಅಧ್ಯಕ್ಷೆ ಸಿ.ಎಂ. ಆಶಾ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಎಚ್. ಎಸ್. ಶೋಭಾ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ರಾಜ್ಯದ 30 ಜಿಲ್ಲೆಗಳಿಂದ ಆಯ್ಕೆಯಾಗಿರುವ ಪ್ರಶಸ್ತಿ ಪುರಸ್ಕೃತರು, ಇಬ್ಬರು ತಜ್ಞ ಪ್ರಶಸ್ತಿ ಪುರಸ್ಕೃತರು, ಇಬ್ಬರು ಪುಸ್ತಕ ಬಹುಮಾನಿತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿ ಪುರಸ್ಕೃತರಿಗೆ 25 ಸಾವಿರ ರೂ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಸನ್ಮಾನಿಸಲಾಗುತ್ತದೆ ಎಂದು ಮಾತಾ ಬಿ ಮಂಜಮ್ಮ ಜೋಗತಿ ತಿಳಿಸಿದರು.