ಮಂಡ್ಯ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಮುಂದುವರೆದಿದೆ. ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಆಲೆಮನೆಯಲ್ಲಿ ಭ್ರೂಣ ಪತ್ತೆ ಘಟನೆ ಮಾಸುವ ಮುನ್ನವೇ ಪಾಂಡವಪುರ ತಾಲೂಕಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಪಾಂಡವಪುರ ಪಟ್ಟಣ ಆರೋಗ್ಯ ಇಲಾಖೆಯ ವಸತಿ ಗೃಹದಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ನಡೆಯುತ್ತಿದ್ದ ಘಟನೆ ಸೋಮವಾರ ನಡೆದಿದೆ.
ಹೆಣ್ಣು ಭ್ರೂಣಪತ್ತೆ ಹಾಗೂ ಹತ್ಯೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಗ್ಯ ಇಲಾಖೆಯ ಹೊರಗುತ್ತಿಗೆ ಡಿ ಗ್ರೂಪ್ ನೌಕರೆ ಅಶ್ವಿನಿ, ಈಕೆಯ ಪತಿ ಚಾಲಕ ಆನಂದ್, ಈಕೆಯ ತಾಯಿ ಸತ್ಯಮ್ಮ, ಖಾಸಗಿ ಆಸ್ಪತ್ರೆಯ ಶುಶ್ರೂಷಕಿ ಗಿರಿಜಾಂಬ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಮೈಸೂರು ಜಿಲ್ಲೆ ಸೇರಿದಂತೆ ವಿವಿಧೆಡೆಗಳಿಂದ ಕರೆತಂದು ಭ್ರೂಣ ಪತ್ತೆ ಮಾಡಿ ಹಾಗೂ ಹತ್ಯೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿ ಆನಂದ್ ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ಈತನಿಗೆ ಆರೋಗ್ಯ ಇಲಾಖೆಯಿಂದ ನೀಡಿದ್ದ ವಸತಿ ಗೃಹದಲ್ಲಿಯೇ ಭ್ರೂಣಪತ್ತೆ ಕಾರ್ಯ ನಡೆಸುತ್ತಿದ್ದರು.
ಮಾಹಿತಿ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ್ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಕ್ವಾರ್ಟಸ್ ಮೇಲೆ ದಾಳಿ ನಡೆಸಿ ಹೆಣ್ಣು ಭ್ರೂಣಪತ್ತೆಗೆ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ನಾಲ್ವರನ್ನು ಬಂಧಿಸಲಾಗಿದೆ.