Advertisement

ಲಾಲುಗೆ ಮತ್ತೆ 14 ವರ್ಷ ಜೈಲು

06:00 AM Mar 25, 2018 | |

ರಾಂಚಿ: ಬಹುಕೋಟಿ ಮೌಲ್ಯದ ಮೇವು ಹಗರಣದ ನಾಲ್ಕನೇ ಪ್ರಕರಣದಲ್ಲಿಯೂ ಬಿಹಾರದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಲಾಲು ಪ್ರಸಾದ್‌ ಯಾದವ್‌ ದೋಷಿಯೆಂಬುದು ಸಾಬೀತಾಗಿದ್ದು, ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಅವರಿಗೆ 14 ವರ್ಷ ಜೈಲು ಶಿಕ್ಷೆ ಹಾಗೂ 60 ಲಕ್ಷ ರೂ. ದಂಡ ವಿಧಿಸಿದೆ. 

Advertisement

90ರ ದಶಕದಲ್ಲಿ ಡುಮ್ಕಾ ಖಜಾನೆಯಿಂದ ಅಕ್ರಮವಾಗಿ 3.13 ಕೋಟಿ ರೂ. ಪಡೆದ ಹಿನ್ನೆಲೆಯಲ್ಲಿ, ಸಿಬಿಐ ನ್ಯಾಯಾಧೀಶ ನ್ಯಾ. ಶಿವಪಾಲ್‌ ಸಿಂಗ್‌, ಭಾರತೀಯ ದಂಡ ಸಂಹಿಂತೆ (ಐಪಿಸಿ) ಅಡಿಯಲ್ಲಿ 7 ವರ್ಷ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಗಳ ಅಡಿಯಲ್ಲಿ ಮತ್ತೆ 7 ವರ್ಷ ಶಿಕ್ಷೆ ಪ್ರಕಟಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಈ ಎರಡೂ ಶಿಕ್ಷೆಯ ಅವಧಿಯಲ್ಲಿ ಒಂದೊಂದು ವರ್ಷ ಹೆಚ್ಚಾಗಲಿದೆ.

ಮಾ. 19ರಂದು ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ, ಪ್ರಕರಣದ ಸಹ ಆರೋಪಿ, ಬಿಹಾರದ ಮಾಜಿ ಸಿಎಂ ಜಗನ್ನಾಥ್‌ ಮಿಶ್ರಾ ಹಾಗೂ 12 ಆರೋಪಿಗಳನ್ನು ಖುಲಾಸೆಗೊಳಿಸಿತ್ತಲ್ಲದೆ, ಶಿಕ್ಷೆಯ ಪ್ರಮಾಣ ಪ್ರಕಟಣೆಯನ್ನು ಮಾ.24ಕ್ಕೆ ಮುಂದೂಡಿತ್ತು. ಈಗಾಗಲೇ ಎರಡನೇ ಪ್ರಕರಣದಲ್ಲಿ ಮೂರೂವರೆ ವರ್ಷ ಶಿಕ್ಷೆಗೊಳಗಾಗಿರುವ ಲಾಲು, 2017ರ ಡಿ. 27ರಿಂದಲೇ ಬಿರ್ಸಾ ಮುಂಡಾ ಜೈಲಿನಲ್ಲಿದ್ದಾರೆ. 

ಈಗ ತೀರ್ಪು ಹೊರಬಿದ್ದಿರುವ ಪ್ರಕರಣದಲ್ಲಿ, ಭ್ರಷ್ಟಾಚಾರ ಆರೋಪ ಹೊತ್ತಿದ್ದ ಬಿಹಾರದ ಪಶು ಸಂಗೋಪನೆಯ ಮಾಜಿ ಪ್ರಾಂತೀಯ ನಿರ್ದೇಶಕ ಒ.ಪಿ.ಡಿ. ದಿನಕರ್‌ ಅವರಿಗೆ ಲಾಲು ಅವರಿಗೆ ನೀಡಿದ ಶಿಕ್ಷೆಯನ್ನೇ ವಿಧಿಸಲಾಗಿದ್ದು, ಮತ್ತಿತರ ಆರೋಪಿಗಳಾದ ಮಾಜಿ ಐಎಎಸ್‌ ಅಧಿಕಾರಿ ಪೂಲ್‌ಚಾಂದ್‌ ಸಿಂಗ್‌ಗೆ 7 ವರ್ಷ ಜೈಲು ಮತ್ತು 30 ಲಕ್ಷ ರೂ. ದಂಡ, ಏಳು ಮೇವು ಸರಬರಾಜುದಾರರಿಗೆ ತಲಾ ಮೂರೂವರೆ ವರ್ಷ ಜೈಲು ಹಾಗೂ 15 ಲಕ್ಷ ರೂ. ದಂಡ ವಿಧಿಸಲಾಗಿದೆ.

ಇನ್ನೊಂದು ಪ್ರಕರಣ ಬಾಕಿ: ಮೇವು ಹಗರಣದ ಐದನೇ ಹಾಗೂ ಅಂತಿಮ ಪ್ರಕರಣವೊಂದು ಬಾಕಿಯಿದ್ದು, ಈ ಪ್ರಕರಣದಲ್ಲಿ, ಡೊರಾಂಡಾ ಖಜಾನೆಯಿಂದ 139 ಕೋಟಿ ರೂ.ಗಳನ್ನು ಅಕ್ರಮವಾಗಿ ಪಡೆದ ಆರೋಪವನ್ನು ಲಾಲೂ ಎದುರಿಸುತ್ತಿದ್ದಾರೆ.

Advertisement

ಅಪ್ಪಾಜಿ ಪ್ರಾಣಕ್ಕೆ ಕಂಟಕ: ತೇಜಸ್ವಿ
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಬಿಹಾರ ವಿರೋಧ ಪಕ್ಷದ ನಾಯಕ ಹಾಗೂ ಲಾಲು ಪ್ರಸಾದ್‌ ಪುತ್ರ ತೇಜಸ್ವಿ ಯಾದವ್‌, “”ನನ್ನ ತಂದೆಯ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸಿದೆ. ಹಾಗಾಗಿ ಅವರ ಪ್ರಾಣಕ್ಕೆ ಕಂಟಕ ಬಂದಿದೆೆ” ಎಂದು ಆರೋಪಿಸಿದ್ದಾರೆ.  “”ನನ್ನ ತಂದೆ ಮುಗ್ಧ. ಅವರಿಗೆ ಉನ್ನತ ಕೋರ್ಟ್‌ಗಳಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ. ಹಾಗಾಗಿ, ಈ ತೀರ್ಪನ್ನು ಹೈಕೋರ್ಟ್‌ ನಲ್ಲಿ ಪ್ರಶ್ನಿಸುತ್ತೇವೆ” ಎಂದಿದ್ದಾರೆ.

ಬಿಜೆಪಿ ಪ್ರತಿಕ್ರಿಯೆ
ತೀರ್ಪಿಗೆ ಪ್ರತಿಕ್ರಿಯಿಸಿರುವ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ, “”ಮೇವು ಹಗರಣದ ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪು ಇದೇ ಮೊದಲೇನಲ್ಲ. ಹಾಗಾಗಿ, ಕೋರ್ಟಿನ ತೀರ್ಪಿಗೆ ನಾವೆಲ್ಲರೂ ತಲೆಬಾಗಲೇಬೇಕು. ಲಾಲುಗೆ ಅಷ್ಟೊಂದು ಜೀವ ಭಯ ಇದ್ದರೆ ಕೋರ್ಟ್‌ಗೆ ಹೋಗಲಿ” ಎಂದಿದ್ದಾರೆ.

ಈವರೆಗೆ ಲಾಲು “ಮೇವಿಗೆ’ ಸಿಕ್ಕ “ಕಾವು’
1 ಚೈಬಾಸಾ ಖಜಾನೆಯಿಂದ 37.7 ಕೋಟಿ ರೂ. ಅಕ್ರಮವಾಗಿ ಪಡೆದಿರುವುದು 5 ವರ್ಷ
2 ದಿಯೋಗಢ ಖಜಾನೆಯಿಂದ 89.2 ಲಕ್ಷ ರೂ. ಅಕ್ರಮವಾಗಿ ಪಡೆದಿರುವುದು 3  ವರ್ಷ
3 ಚೈಬಾಸಾ ಖಜಾನೆಯಿಂದ 37.62 ಕೋಟಿ ರೂ. ಅಕ್ರಮವಾಗಿ ಪಡೆದಿರುವುದು 5  ವರ್ಷ
4 ಡುಮ್ಕಾ ಖಜಾನೆಯಿಂದ 3.13 ಕೋಟಿ ರೂ. ಅಕ್ರಮವಾಗಿ ಪಡೆದಿರುವುದು 14 ವರ್ಷ
5 ಡೊರಾಂಡಾ ಖಜಾನೆಯಿಂದ 139 ಕೋಟಿ ರೂ. ಅಕ್ರಮವಾಗಿ ಪಡೆದಿರುವುದು ವಿಚಾರಣೆ ಹಂತದಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next