ಹಳಿಯಾಳ: ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರ ಪ್ರಯತ್ನದಿಂದ ಬೆಂಗಳೂರಿನ ಅವರ ಸ್ನೇಹಿತರಿಂದ ಹಳಿಯಾಳದ ಪ್ರವಾಹ ಪಿಡಿತ ಪ್ರದೇಶಗಳ ಜಾನುವಾರುಗಳಿಗೆ ಮೇವಿನ ನೆರವು ದೊರತಿದ್ದು 2 ಲೋಡ್‌ಗಳಷ್ಟು ಮೇವು ಪಟ್ಟಣ ತಲುಪಿದೆ.
ಸಂಸದರು ಮೊನ್ನೆಯಷ್ಟೇ ಹಳಿಯಾಳದ ನೆರೆ ಪಿಡಿತ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದರು ಅಲ್ಲದೇ ಹಳಿಯಾಳ- ದಾಂಡೇಲಿ- ಜೋಯಿಡಾ 3 ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿ ಸಂತ್ರಸ್ತರು ಸೇರಿದಂತೆ ಜಾನುವಾರುಗಳಿಗೂ ಸಮಸ್ಯೆಯಾಗದಂತೆ ಕ್ರಮ ವಹಿಸುವಂತೆ ಸೂಚಿಸಿದ್ದರು.
ಆಗ ಪಶು ಸಂಗೋಪನಾ ಹಾಗೂ ಪಶು ವೈದ್ಯ ಇಲಾಖೆಯ ಡಾ| ನದಾಫ ಜಾನುವಾರುಗಳಿಗೆ ಮೇವಿನ ಕೊರತೆ ಇದ್ದು ಮೇವು ಪೂರೈಸುವಂತೆ ಮನವಿ ಮಾಡಿದ್ದರು.
ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಸಂದರಲ್ಲಿ ಈ ಕುರಿತು ಆಗ್ರಹಿಸಿದ್ದರು. ಇದಕ್ಕೆ 2 ದಿನಗಳಲ್ಲೇ ಸ್ಪಂದಿಸಿರುವ ಸಂಸದರು ಅವರ ಬೆಂಗಳೂರಿನ ಸ್ನೇಹಿತರಿಂದ ಹಳಿಯಾಳಕ್ಕೆ ಮೇವನ್ನು ರವಾನಿಸಿದ್ದಾರೆ.
ಸಂಸದರ ಮನವಿಗೆ ಸ್ಪಂದಿಸಿರುವ ಬೆಂಗಳೂರಿನ ನಾಯ್ಡು ಫಾರ್ಮನ ಗೋಪಾಲ ನಾಯ್ಡು, ಕಾಂತಿ ಸ್ವೀಟ್ಸ್‌ನ ಶೈಲೇಶ್ ಶರ್ಮಾ, ಹಾಲಿನ ವ್ಯಾಪಾರಸ್ಥರಾದ ಆರ್.ಸುರೇಶ ಬಾಬು, ನಾಗೇಂದ್ರಕುಮಾರ, ರಮೇಶ, ಚಂದ್ರಪ್ಪಾ ಸ್ವಂತ ಹಣದಿಂದ ನೆರೆ ಪ್ರದೇಶದ ಜಾನುವಾರುಗಳಿಗೆ ರಾಗಿ ಹುಲ್ಲು(ಒಣ ಮೇವು) 5 ಟನ್, ಮುಸುಕಿನ ಜೋಳದ ಹಸಿ ಕಡ್ಡಿಗಳು-12 ಟನ್ ಹಾಗೂ ಬೂಸಾ(ತೌಡು) 100 ಬ್ಯಾಗ್‌ಗಳನ್ನು ಬೆಂಗಳೂರು ಸುತ್ತಮುತ್ತಲ ಪ್ರದೇಶದಿಂದ ಖರೀದಿಸಿ 3 ವಾಹನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಬೂಸಾವನ್ನು ನೀಡಿ ಬಳಿಕ ಸಂಸದ ಅನಂತಕುಮಾರ ಅವರ ಮನವಿ ಮೇರೆಗೆ ಹಳಿಯಾಳಕ್ಕೆ 1 ಟ್ರಕ್ ಮುಸುಕಿನ ಜೋಳ ಹಸಿ ಕಡ್ಡಿ ಹಾಗೂ 1 ಲಾರಿ ರಾಗಿ ಹುಲ್ಲಿನ ಮೇವನ್ನು ನೀಡಿದ್ದಾರೆ.
ಹಳಿಯಾಳದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಇವುಗಳನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹಾಗೂ ಪಶು ಇಲಾಖೆ ಅಧಿಕಾರಿ ಡಾ| ನದಾಫ ಅವರಿಗೆ ಹಸ್ತಾಂತರಿಸಿದರು.
ಮೇವಿನ ನೆರವು ನೀಡಿದ ಗೋಪಾಲ ನಾಯ್ಡು, ಸಂಸದ ಅನಂತಕುಮಾರ ಹೆಗಡೆ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮತ್ತೆ ಮೇವಿನ ನೆರವು ಬೇಕಾಗಿದೆ. ಅಲ್ಲದೇ ನಿರಾಶ್ರಿತರಿಗೂ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ ಎಂದ ನಾಯ್ಡು ಬೆಂಗಳೂರಿನ ತಮ್ಮ ಸ್ನೇಹಿತರೊಂದಿಗೆ ಮತ್ತೆ ನೆರವು ನೀಡಲು ತಾವು ಸಿದ್ಧವಿರುವುದಾಗಿ ಹೇಳಿದರು.
ಬಿಜೆಪಿಯ ಪುರಸಭೆ ಸದಸ್ಯರಾದ ಉದಯ ಹೂಲಿ, ಸಂತೋಷ ಘಟಕಾಂಬಳೆ, ಚಂದ್ರಕಾಂತ ಕಮ್ಮಾರ, ಬಿಜೆಪಿ ಪ್ರಮುಖರಾದ ವಿಜಯ ಬೋಬಾಟಿ, ಯಲ್ಲಪ್ಪಾ ಹೊನ್ನೊಜಿ, ಹನುಮಂತ ಚಲವಾದಿ, ಅಜೋಬಾ ಕರಂಜೆಕರ, ಸಿದ್ದು ಶೇಟ್ಟಿ ಮೊದಲಾದವರು ಇದ್ದರು.