Advertisement

ರಾಸುಗಳಿಗಾಗಿ ಮೇವು ಬ್ಯಾಂಕ್‌ ಆರಂಭ

05:29 PM May 15, 2019 | Suhan S |

ಹುಳಿಯಾರು: ರೈತರ ರಾಸುಗಳಿಗೆ ಮೇವು ವಿತರಿಸಲು ಎಪಿಎಂಸಿ ಆವರಣದಲ್ಲಿ ತಹಶೀಲ್ದಾರ್‌ ತೇಜಸ್ವಿನಿ ಮೇವು ಬ್ಯಾಂಕ್‌ ಆರಂಭಿಸಿದರು.

Advertisement

ಈ ವೇಳೆಯಲ್ಲಿ ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈಗಾಗಲೇ ಕಸಬ ಮತ್ತು ಶೆಟ್ಟಿಕೆರೆಯಲ್ಲಿ ಮೇವು ಬ್ಯಾಂಕ್‌ ತೆರೆಯಲಾಗಿದೆ. ಹುಳಿಯಾರು, ಹಂದನಕೆರೆ, ಕಂದಿಕೆರೆಯಲ್ಲಿ ಮೇವು ಬ್ಯಾಂಕ್‌ ಆರಂಭಿಸುವುದಾಗಿ ತಿಳಿಸಿದರು.

ಪ್ರತಿ ರಾಸುಗೆ ದಿನಕ್ಕೆ 5 ಕೆ.ಜಿ ಮೇವು: ಈಗಾಗಲೇ ಪಶು ಆಸ್ಪತ್ರೆ, ಹಾಲಿನ ಡೇರಿಗಳಲ್ಲಿ ನೋಂದಣಿ ಮಾಡಿಕೊಂಡವರಿಗೆ ಮೇವು ವಿತರಿಸಲಾಗುತ್ತಿದೆ.

ಪ್ರತಿ ಕೆ.ಜಿ ಮೇವಿಗೆ 2 ರೂ.ನಂತೆ ಮೇವು ಮಾರಾಟ ಮಾಡಲಾಗುತ್ತಿದೆ. ಪ್ರತಿ ರಾಸುಗೆ ದಿನಕ್ಕೆ 5 ಕೆ.ಜಿಯಂತೆ 15 ದಿನಕ್ಕಾಗುವಷ್ಟು ಮೊದಲ ಹಂತದಲ್ಲಿ ಮೇವು ವಿತರಿಸಲಾಗುವುದು. ನಂತರ ಎರಡನೇ ಹಂತದಲ್ಲಿ ಪುನಃ 15 ದಿನಕ್ಕಾಗುವಷ್ಟು ಮೇವು ವಿತರಿಸಲಾ ಗುವುದು ಎಂದು ತಿಳಿಸಿದರು.

ಗಡಿ ಗ್ರಾಮದಲ್ಲಿ ಮೇವು ವಿತರಣೆಗೆ ಚಿಂತನೆ: ತಾಲೂಕಿನ ಗಡಿ ಪ್ರದೇಶಗಳಾದ ಬೊಮ್ಮೇನಹಳ್ಳಿ, ನಡುವನಹಳ್ಳಿ, ದಸೂಡಿ, ದಬ್ಬಗುಂಟೆ, ರಾಮನಗರ ಸೇರಿದಂತೆ ಅನೇಕ ಹಳ್ಳಿಗಳ ರೈತರು ಹೋಬಳಿ ಕೇಂದ್ರಕ್ಕೆ ಬಂದು ಮೇವು ಪಡೆಯುವುದು ದುತ್ಸರವಾಗುತ್ತದೆ.

Advertisement

ಹಾಗಾಗಿ ಮೇವು ಲಭ್ಯತೆ ನೋಡಿಕೊಂಡು ಗಡಿ ಗ್ರಾಮಗಳಿಗೆ ಮೇವಿನ ಲಾರಿ ಕಳುಹಿಸಿ ರೈತರಿಗೆ ಅಲ್ಲೇ ವಿತರಿಸುವ ಚಿಂತನೆ ಮಾಡ ಲಾಗಿದೆ ಎಂದು ಹೇಳಿದರು.

15 ಸಾವಿರ ರೈತರು ನೋಂದಣಿ: ಪಶು ಇಲಾಖೆಯ ಸಹಾಯಕ ನಿರ್ದೆಶಕ ಡಾ.ಪುಟ್ಟರಾಜು ಮಾತನಾಡಿ, ತಾಲೂಕಿನಲ್ಲಿ ಮೇವಿಗಾಗಿ ಈಗಾಗಲೇ 15 ಸಾವಿರ ರೈತರು ನೋಂದಣಿ ಮಾಡಿಸಿದ್ದು, ತಾಲೂಕಿನ 5 ಮೇವು ಕೇಂದ್ರದಲ್ಲೂ ದಿನಕ್ಕೆ 30 ಕಾರ್ಡ್‌ ನಂತೆ 8ರಿಂದ 10 ಟನ್‌ ಮೇವು ವಿತರಿಸಲಾಗುತ್ತಿದೆ.

ಬಳ್ಳಾರಿಯಿಂದ ನಿತ್ಯ 10 ಟನ್‌ ಮೇವು ಬರುತ್ತಿದೆ. ಕೆಲ ದಿನಗಳಲ್ಲಿ ನೋಂದಣಿ ಮಾಡಿಸಿರುವ ಎಲ್ಲಾ ರೈತರಿಗೂ ಮೊದಲ ಹಂತದ 15 ದಿನಕ್ಕಾಗುವಷ್ಟು ಮೇವು ವಿತರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್‌ ಮಲ್ಲಿಕಾರ್ಜುನಯ್ಯ, ಕಂದಾಯ ತನಿಖಾಧಿಕಾರಿ ಮಂಜುನಾಥ್‌, ಗ್ರಾಮ ಲೆಕ್ಕಿಗ ಎಸ್‌.ಲಕ್ಷ್ಮೀಪತಿ, ಹುಳಿಯಾರು ಪಶು ವೈದ್ಯ ಡಾ.ಮಂಜುನಾಥ್‌, ಯಳನಾಡು ಪಶುವೈದ್ಯೆ ಸಂಧ್ಯಾರಾಣಿ, ಗಾಣಧಾಳು ಪಶು ಆಸ್ಪತ್ರೆಯ ಪಶು ಪರಿವೀಕ್ಷಕ ಜಿ.ವೆಂಕಟಪ್ಪ, ಹೊಯ್ಸಲ ಕಟ್ಟೆಯ ಭವ್ಯ ರಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮೇವು ಬ್ಯಾಂಕಿಗೆ ಮಧುಗಿರಿ ಕ್ಷೇತ್ರ ಮಾದರಿ:

ಮಧುಗಿರಿ: ರಾಜ್ಯದಲ್ಲಿ ಬರಗಾಲವಿದ್ದು, ಅಧಿಕಾರಿಗಳ ಸಹಕಾರದಿಂದ ಮೇವು ಬ್ಯಾಂಕಿನ ನಿರ್ವಹಣೆಯಲ್ಲಿ ಮಧುಗಿರಿ ರಾಜ್ಯಕ್ಕೆ ಮಾದರಿ ಕ್ಷೇತ್ರವಾಗಿದೆ ಎಂದು ತಾಲೂಕು ಜೆಡಿಎಸ್‌ ಕಿಸಾನ್‌ ಅಧ್ಯಕ್ಷ ನೀರಕಲ್ಲು ರಾಮಕೃಷ್ಣಪ್ಪ ತಿಳಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ 31441 ಜಾನುವಾರುಗಳಿಗೆ ನಿತ್ಯ 5 ಕೆ.ಜಿ.ಯಂತೆ 15 ದಿನಕ್ಕೆ 75 ಕೆ.ಜಿ.ಯಂತೆ ಇಲ್ಲಿಯವರೆಗೂ 3381 ಟನ್‌ ಮೇವು ವಿತರಿಸಲಾಗಿದೆ. ರೈತರಿಗೆ ಯಾವುದೇ ಸಮಸ್ಯೆಯಿಲ್ಲದೆ ಸಾಧನೆ ಮಾಡಲಾಗಿದೆ. ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲೇ ಹೆಚ್ಚು ಕೊಳವೆಬಾವಿ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು.

ಪ್ರತಿ ಮನೆ ಮನೆಗೆ ಮೇವು ಪೂರೈಕೆ: ಪುರಸಭೆ ಸದಸ್ಯ ಎಂ.ಆರ್‌.ಜಗನ್ನಾಥ್‌ ಮಾತನಾಡಿ, ಹಿಂದಿನ ಶಾಸಕರು ಹೋಬಳಿ ಮಟ್ಟದಲ್ಲಿ ಗೋಶಾಲೆ ಅರಂಭಿಸಿದ್ದು, ರೈತರಿಗೆ ಅನಾನುಕೂಲವಾಗಿತ್ತು. ಇದರಿಂದ ರೈತರು ಗೋವನ್ನು ಗೋ ಶಾಲೆಗೆ ಕರೆದೊಯ್ಯಬೇಕಿತ್ತು. ಮೇವು-ನೀರಿಗೆ ಗೋ ಶಾಲೆಯನ್ನ ಅವಲಂಬಿಸಿ, ಹಸುಗಳ ಅಲೆದಾಟದಿಂದ ಹಾಲು ಕಡಿಮೆಯಾಗುತ್ತಿದ್ದು, ರೈತರಿಗೆ ನಷ್ಟವಾಗುತ್ತಿತ್ತು. ಆದರೆ, ಇಂದಿನ ಶಾಸಕರು ಮೇವು ಬ್ಯಾಂಕ್‌ನ್ನು ಪ್ರತಿ ಪಂಚಾಯ್ತಿಗೆ ಆರಂಭಿಸಿದ್ದಾರೆ. ಇದರಿಂದ ಪ್ರತಿ ಮನೆ ಮನೆಗೆ ಮೇವು ಪೂರೈಕೆ ಮಾಡುತ್ತಿದ್ದು, ರೈತರಿಗೆ ಹಾಗೂ ಜಾನುವಾರುಗಳಿಗೆ ಅಲೆದಾಟ ತಪ್ಪಿದೆ ಎಂದು ಹೇಳಿದರು.

ಯಾವುದೇ ಅವ್ಯವಹಾರ ನಡೆದಿಲ್ಲ: ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಎಂ.ಎಲ್.ಗಂಗರಾಜು ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಪಟ್ಟಣಕ್ಕೆ ಹೇಮಾವತಿ ನೀರು ಹರಿದಿದೆ. ಹಿಂದೆ ಮಳೆಯ ನೀರು ಜೊತೆಯಾಗಿದ್ದು, ಈ ಬಾರಿ ಮಳೆಯು ನಮಗೆ ಕೈಕೊಟ್ಟಿದೆ. ಪಡಿತರ ಧಾನ್ಯದ ವಿತರಣೆಯಂತೆ ಪ್ರತಿ ರೈತರ ಮನೆಗೆ ಮೇವು ಸರಬರಾಜು ಆಗುತ್ತಿದೆ. ಯಾವುದೇ ಅವ್ಯವಹಾರ ನಡೆಯದೆ ಸಮರ್ಪಕವಾಗಿ ರೈತರ ವಿಶ್ವಾಸಗಳಿಸಲಾಗುತ್ತಿದೆ ಎಂದರು.

ಮಧುಗಿರಿಯಲ್ಲಿ ಮೈತ್ರಿ ಧರ್ಮ ಪಾಲನೆ: ರಾಜ್ಯದಲ್ಲಿ ಇದ್ದಂತೆ ಮಧುಗಿರಿಯಲ್ಲೂ ಮೈತ್ರಿಧರ್ಮ ಪಾಲನೆಯಾಗುತ್ತಿದೆ. ಶಾಸಕರ ಕ್ರಮವನ್ನು ವಿರೋಧಿಸುವವರು ಅವಿವೇಕಿಗಳು. ಪಟ್ಟಣದ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳ ಪುನಶ್ಚೇತನಕ್ಕೆ 25 ಲಕ್ಷ ಹಾಗೂ ಕಲ್ಯಾಣಿ ಹಾಗೂ ಕಟ್ಟೆಗಳ ಅಭಿವೃದ್ಧಿಗಾಗಿ 1.05 ಕೋಟಿ ಅನುದಾನ ಹೆಚ್ಚುವರಿಯಾಗಿ ನೀಡಿದ್ದು, ಶಾಸಕರು ಜನಪರ ಕಾರ್ಯ ಮಾಡುತ್ತಿದ್ದಾರೆ ಎಂದರು.

ಮುಖಂಡ ಮಿಡಿಗೇಶಿ ಸುರೇಶ್‌, ಜೆಡಿಎಸ್‌ ಕಾರ್ಯಾಧ್ಯಕ್ಷ ಡಾ.ಶಿವಕುಮಾರ್‌, ಎಸ್‌ಸಿ ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ಪುರಸಭೆ ಸದಸ್ಯ ಎಂ.ಎಸ್‌.ಚಂದ್ರಶೇಖರ್‌ಬಾಬು, ಕಾರ್ಯದರ್ಶಿ ಶ್ರೀನಿವಾಸ್‌, ತಾಪಂ ಸದಸ್ಯ ನಾಗಭೂಷಣ್‌, ಮಾಜಿ ಸದಸ್ಯ ನಾಗರಾಜು, ದೆಬ್ಬೇಗಟ್ಟ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ಮುಖಂಡರಾದ ಗೋವಿಂದ ರಾಜು, ತಿಮ್ಮಣ್ಣ, ರಾಜ ಗೋಪಾಲ್, ನಾಗಭೂಷಣ್‌, ದೇವರಾಜು, ಸಿದ್ದಗಂಗಪ್ಪ, ಗಣೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next