ಚಿತ್ರದುರ್ಗ: ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಬ್ಯಾಂಕ್ ಆರಂಭಿಸಲು ನಿರ್ಧರಿಸಲಾಗಿದ್ದು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿ ಕೂಡಲೇ ಸ್ಥಳ ಗುರುತಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ಬರ ಎದುರಾಗಿದೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗುವ ಸಾಧ್ಯತೆ ಇದ್ದು, ಮೇವಿನ ಕೊರತೆಯಿಂದ ತೊಂದರೆಯಾಗದ ರೀತಿಯಲ್ಲಿ ನಿರ್ವಹಿಸಲು ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕಿದೆ. ಜಿಲ್ಲೆಯಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ಟೆಂಡರ್ ಪಡೆದ ಸಂಸ್ಥೆಯವರು ಕಾರ್ಯಾದೇಶ ನೀಡಿದ ಕೂಡಲೇ ಮೇವು ಪೂರೈಕೆ ಮಾಡಲು ಸಿದ್ಧರಿದ್ದಾರೆ. ಸದ್ಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕಿನಲ್ಲಿ ಮೇವು ಬ್ಯಾಂಕ್ ತೆರೆಯಲಾಗುವುದು. ಈ ಮೇವು ಬ್ಯಾಂಕ್‌ನಿಂದ ಸುತ್ತಮುತ್ತಲಿನ ಕನಿಷ್ಠ 5 ಕಿಮೀ ಪ್ರದೇಶದ ರೈತರ ಜಾನುವಾರುಗಳಿಗೆ ಮೇವು ಲಭ್ಯವಾಗಬೇಕು. ಹಾಗಾಗಿ ಈ ಎರಡೂ ತಾಲೂಕುಗಳ ತಹಶೀಲ್ದಾರರು ಪಶುಸಂಗೋಪನೆ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಿ ಮೇವು ಬ್ಯಾಂಕ್ ಆರಂಭಿಸಲು ಸ್ಥಳ ಗುರುತಿಸಬೇಕೆಂದರು.
ಟ್ಯಾಂಕರ್ ನೀರು ಪೂರೈಕೆ ಮಾಡುವುದು ತುರ್ತು ಹಾಗೂ ತಾತ್ಕಾಲಿಕ ಕ್ರಮ. ದೀರ್ಘಾವಧಿಗೆ ಟ್ಯಾಂಕರ್ ನೀರು ಪೂರೈಕೆಗೆ ಅವಕಾಶವಿಲ್ಲ. ಶಾಶ್ವತ ಪರಿಹಾರಕ್ಕಾಗಿ ಅಧಿಕಾರಿಗಳು ಸಭೆಯಲ್ಲಿ ಚರ್ಚೆ ನಡೆಸಬೇಕು. ಖಾಸಗಿ ಕೊಳವೆಬಾವಿಯನ್ನು ಬಾಡಿಗೆಗೆ ಪಡೆಯುವುದು ಅಥವಾ ಇತರೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಹೊಸ ಕೊಳವೆಬಾವಿ ಕೊರೆಸಲು ಜಿಪಿಎಸ್ ಕಡ್ಡಾಯ ಮಾಡಲಾಗಿದ್ದು, ವಿಫಲವಾದ ಕೊಳವೆಬಾವಿಗಳ ಮೋಟಾರ್‌ಗಳನ್ನು ಹೊಸ ಬೋರ್‌ವೆಲ್‌ಗಳಿಗೆ ಬಳಸಬೇಕು. ತಹಶೀಲ್ದಾರರು ಕುಡಿಯುವ ನೀರಿನ ತುರ್ತು ಕಾಮಗಾರಿಗಳ ಕುರಿತು ಮೇಲ್ವಿಚಾರಣೆ ನಡೆಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಬರ ಇರುವುದರಿಂದ ನರೇಗಾದಡಿ ಹೆಚ್ಚೆಚ್ಚು ಕೂಲಿ ಆಧಾರಿತ ಕೆಲಸ ನೀಡಲು ಆದ್ಯತೆ ನೀಡಲಾಗುತ್ತಿದೆ. ಕೆರೆ, ಗೋಕಟ್ಟೆ, ಕಲ್ಯಾಣಿಗಳ ಹೂಳೆತ್ತುವುದು, ಕೆರೆ ಏರಿ ದುರಸ್ತಿ ಕಾಮಗಾರಿ ಸೇರಿದಂತೆ ನೀರು ಮತ್ತು ಮಣ್ಣಿನ ಸಂರಕ್ಷಣೆ ಕಾಮಗಾರಿಗೆ ಸಾಮೂಹಿಕವಾಗಿ ಜನರನ್ನು ತೊಡಗಿಸಿಕೊಳ್ಳುವುದರಿಂದ ಜನರಿಗೆ ಉದ್ಯೋಗ ನೀಡಿದಂತಾಗುತ್ತದೆ. ಇದರಿಂದ ಹೆಚ್ಚಿನ ಮಾನವ ದಿನಗಳನ್ನು ಸೃಜಿಸಲು ಅವಕಾಶವಿದ್ದು, ಬರ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಅನುಕೂಲವಾಗಲಿದೆ. ಪ್ರತಿ ಗ್ರಾಪಂನಲ್ಲಿ ಕನಿಷ್ಠ ಇಂತಹ ಮೂರು ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಪ್ರತಿ ಕಾಮಗಾರಿಯಲ್ಲಿ 150 ಜನ ಕೂಲಿಕಾರರು ತೊಡಗಿಸಿಕೊಳ್ಳಬೇಕು. ಈ ದಿಸೆಯಲ್ಲಿ ತಹಶೀಲ್ದಾರರು ತಾಲೂಕು ಮಟ್ಟದಲ್ಲಿ ಮೇಲ್ವಿಚಾರಣೆ ಕೈಗೊಂಡು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಬಹುದಾಗಿದೆ ಎಂದು ಜಿಪಂ ಸಿಇಒ ಪಿ.ಎನ್. ರವೀಂದ್ರ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಡಿ ನಿರ್ವಹಿಸಲಾಗುವ ವಸತಿ ನಿಲಯಗಳ ಕಟ್ಟಡಗಳಿಗೆ, ಅಂಗನವಾಡಿ ಕಟ್ಟಡಗಳಿಗೆ ಹಾಗೂ ನಾನಾ ಇಲಾಖೆಗಳಿಗೆ ಅಗತ್ಯವಿರುವ ನಿವೇಶನ, ಜಮೀನು ಗುರುತಿಸಲು ತಹಶೀಲ್ದಾರರಿಗೆ ಸೂಚನೆ ನೀಡಲಾಯಿತು. ಜಿಲ್ಲೆಯಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕೆ ಕಾರ್ಮಿಕ ಇಲಾಖೆಯಿಂದ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಎಲ್ಲ ತಾಲೂಕುಗಳ ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಕುಡಿಯುವ ನೀರಿಗೆ 50 ಲಕ್ಷ ರೂ. ಬಿಡುಗಡೆ
ಕುಡಿಯುವ ನೀರಿನ ತುರ್ತು ನಿರ್ವಹಣೆ ಕಾಮಗಾರಿಗಳಿಗಾಗಿ ಸರ್ಕಾರ ಪ್ರತಿ ತಾಲೂಕಿಗೆ ತಲಾ ಒಂದು ಕೋಟಿ ರೂ. ನೀಡುವುದಾಗಿ ಘೋಷಿಸಿದ್ದು, 50 ಲಕ್ಷ ರೂ. ಗಳನ್ನು ಟಾಸ್ಕ್ಪೋರ್ಸ್‌ಗೆ ಬಿಡುಗಡೆ ಮಾಡಿದೆ. ಶಾಸಕರುಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್ ಸಭೆ ಮಾಡಬೇಕು. ತುರ್ತು ಕುಡಿಯುವ ನೀರು ಕಾಮಗಾರಿಗಳಿಗೆ ನಿಯಮಾನುಸಾರ ಹಣ ಬಳಕೆ ಮಾಡಬೇಕು. ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿದ ನಂತರ ಉಳಿದ 50 ಲಕ್ಷ ರೂ. ಗಳನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಅವಿಶ್ವಾಸ ನಿರ್ಣಯ ಮಂಡನೆಗೆ ಮುಹೂರ್ತ ಫಿಕ್ಸ್
ಚಿತ್ರದುರ್ಗ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿಶೇಷ ಸಭೆ ಕರೆಯುವಂತೆ ಜಿಪಂನ ಒಂದಿಬ್ಬರು ಸದಸ್ಯರು ಸೋಮವಾರ ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಜಿಪಂನ ಬಹುತೇಕ ಸದಸ್ಯರು ಗೋವಾ ಪ್ರವಾಸದಲ್ಲಿದ್ದಾರೆ. ಪ್ರವಾಸದಿಂದ ದೂರ ಉಳಿದಿರುವ ಕಾಂಗ್ರೆಸ್ ಸದಸ್ಯ ಕೃಷ್ಣಮೂರ್ತಿ ಮತ್ತಿತರರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಜಿಪಂ ಉಪಾಧ್ಯಕ್ಷೆ ಸುಶೀಲಮ್ಮ, ತಕ್ಷಣ ವಿಶೇಷ ಸಭೆ ಕರೆಯುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದ್ದಾರೆ. ಜಿಪಂ ಸಿಇಒ ಪಿ.ಎನ್. ರವೀಂದ್ರ ಅವರು ಉಪಾಧ್ಯಕ್ಷರ ಸೂಚನೆ ಮೇರೆಗೆ ಫೆ. 7 ರಂದು ಅವಿಶ್ವಾಸ ನಿರ್ಣಯ ಮಂಡಿಸಲು ವಿಶೇಷ ಸಭೆ ಕರೆದಿದ್ದಾರೆ. ಎಲ್ಲಾ ಸದಸ್ಯರಿಗೆ ವಿಶೇಷ ಸಭೆಗೆ ಆಗಮಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.