Advertisement

ಪಾರ್ಕಿಂಗ್‌ ಅವ್ಯವಸ್ಥೆ ಸರಿಪಡಿಸುವತ್ತ ಗಮನ ಇರಲಿ

12:30 AM Mar 09, 2023 | Team Udayavani |

ಪ್ರೊ| ಎಂ.ಎನ್‌. ಶ್ರೀಹರಿ, ಸಂಚಾರ ತಜ್ಞ
ಬೆಂಗಳೂರು: ದಿನೇದಿನೆ ಶರವೇಗದಲ್ಲಿ ಬೆಳೆಯುತ್ತಿರುವ ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಸಂಚಾರ ದಟ್ಟಣೆಯೇ ದೊಡ್ಡ ಸವಾಲಾಗಿದೆ. ಮೆಟ್ರೋ, ಸರ್ಬನ್‌ ರೈಲುಗಳ ಸಂಚಾರ, ಸಾರ್ವಜನಿಕ ಸಾರಿಗೆ ಹೆಚ್ಚಳವಾಗಿದ್ದರೂ ಟ್ರಾಫಿಕ್‌ ಸಮಸ್ಯೆಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.

Advertisement

ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಈ ಬಾರಿಯ ಚುನಾವಣ ಪ್ರಣಾಳಿಕೆಯಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆ ಪರಿಹಾರದ ಬಗ್ಗೆಯೇ ಹೆಚ್ಚು ಆದ್ಯತೆ ನೀಡಬೇಕು.

ಬೆಂಗಳೂರು ಸಂಚಾರ ದಟ್ಟಣೆಯಲ್ಲಿ ವಿಶ್ವದ ಹತ್ತು ನಗರಗಳ ಪಟ್ಟಿಯಲ್ಲಿದೆ. ಹೀಗಾಗಿ ಸಂಚಾರ ನಿರ್ವಹಣೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೈಜೋಡಿಸಿ ಒಟ್ಟಿಗೆ ಕೆಲಸ ಮಾಡಬೇಕಿದೆ. ನಗರದ ರಸ್ತೆಗಳ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಅದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗುತ್ತದೆ. ಆದರಿಂದ ಸಂಚಾರ ಪೊಲೀಸರು ಎರಡು ಕಡೆ ನೋ-ಪಾರ್ಕಿಂಗ್‌ ಬೋರ್ಡ್‌ ಹಾಕಬಹುದು. ಸಾಧ್ಯವಾದರೆ ದಂಡ ಕೂಡ ವಿಧಿಸಬಹುದು. ಆದರೆ ಅದು ಆಗುತ್ತಿಲ್ಲ.

ಮತ್ತೊಂದೆಡೆ ಬಿಬಿಎಂಪಿ ಅಧಿಕಾರಿಗಳು ನಗರದ ಪ್ರತೀ ವಾರ್ಡ್‌ನಲ್ಲಿ ನಾಲ್ಕೈದು ಸ್ಥಳಗಳನ್ನು ಗುರುತಿಸಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿದರೆ ಸಾಧ್ಯವಾದಷ್ಟು ಪಾರ್ಕಿಂಗ್‌ ಸಮಸ್ಯೆ ಬಗೆಹರಿಸಬಹುದು. ಈ ಹಿಂದೆ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿಕೊಳ್ಳದ ಕಟ್ಟಡ ಅಥವಾ ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂಬ ನಿಯಮ ಇತ್ತು. ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಇಚ್ಛಾಶಕ್ತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ.

ಇನ್ನೂ ಮೆಟ್ರೋ ರೈಲುಗಳ ಸಂಚಾರದಿಂದ ಕೆಲವೆಡೆ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿದ್ದರೂ ಮೆಟ್ರೋ ನಿಲ್ದಾಣದ ಆಸು-ಪಾಸಿನಲ್ಲಿ ವಾಹನಗಳ ನಿಲುಗಡೆ ಹಾವಳಿ ಹೆಚ್ಚಾಗಿದೆ. ಒಂದೆರಡು ಮೆಟ್ರೋ ನಿಲ್ದಾಣಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡಿದರೂ ಬಹುತೇಕ ನಿಲ್ದಾಣಗಳ ಸುತ್ತ-ಮುತ್ತ ಸುಮಾರು ಅರ್ಧ ಕಿ.ಮೀಟರ್‌ ವ್ಯಾಪ್ತಿಯ ರಸ್ತೆ ಇಕ್ಕೆಲಗಳಲ್ಲೇ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ಜತೆಗೆ ಮೆಟ್ರೋ ಔಟರ್‌ರಿಂಗ್‌ ಮಾರ್ಗ ಕಲ್ಪಿಸುವುದರಿಂದ ನಗರದಲ್ಲಿ ಕೊಂಚ ವಾಹನ ದಟ್ಟಣೆ ಕಡಿಮೆ ಆಗುವ ಸಾಧ್ಯತೆಯಿದೆ. ಅಲ್ಲದೆ ಗ್ರೀನ್‌ ಕಾರಿಡಾರ್‌ ಮೂಲಕವೇ ಸಂಚಾರ ದಟ್ಟಣೆ ನಿಯಂತ್ರಿಸಲು ಸಾಧ್ಯವಿದೆ. ಈ ಅಂಶಗಳನ್ನು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖೀಸಬೇಕು.

Advertisement

ಸದ್ಯ 55 ಕಿ.ಮೀಟರ್‌ ವ್ಯಾಪ್ತಿಯಲ್ಲಿರುವ ಮೆಟ್ರೋ ಮಾರ್ಗವನ್ನು 300 ಕಿ.ಮೀಟರ್‌ಗೆ ಹೆಚ್ಚಿಸಬೇಕು.

ಮುಂಬಯಿ ಮಾದರಿಯಲ್ಲಿ ಮೆಟ್ರೋ, ಸರ್ಬನ್‌ ರೈಲು ಮಾರ್ಗಗಳ ಅಭಿವೃದ್ಧಿ ಮಾಡಬೇಕು.

ಪಾರ್ಕಿಂಗ್‌ಗೆ ಜಾಗಕ್ಕೆ ಅವಕಾಶ ಕೊಡದ ಮನೆ, ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೊಡಬಾರದು.

ಗ್ರೀನ್‌ ಕಾರಿಡಾರ್‌ ಮಾಡಬಹುದು.

ಏರಿಯಾ ಟ್ರಾಫಿಕ್‌ ಕಂಟ್ರೋಲ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌(ಎಟಿಸಿ) ಮೂಲಕ ಅಧ್ಯಯನ ನಡೆಸಬೇಕು.

ಹೊರ ಮತ್ತು ಒಳ ವರ್ತುಲ ರಸ್ತೆಗಳ ಮಾದರಿಯಲ್ಲಿ ಮೆಟ್ರೋ ಔಟರ್‌ ರಿಂಗ್‌ ಮಾರ್ಗ ಸ್ಥಾಪಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next