Advertisement

ಕೃಷಿ ಚಟುವಟಿಕೆ ಸಿದ್ಧತೆಗೆ ಗಮನಕೊಡಿ

03:04 PM Apr 06, 2020 | Suhan S |

ಬೀದರ: ಜಿಲ್ಲೆಯ ರೈತರ ಬೇಡಿಕೆಯನುಸಾರ ಅವಶ್ಯಕ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜಗಳ ವಿತರಣೆಗೆ ಅನುಕೂಲವಾಗುವಂತೆ ಎಲ್ಲ ಸಿದ್ಧತೆ ಬಗ್ಗೆ ಈಗಿನಿಂದಲೇ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಹೆಚ್‌. ಆರ್‌. ಮಹಾದೇವ್‌ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾಗಿ ಉಳುಮೆ, ಇತರೆ ಕೃಷಿ ಸಂಬಂಧಿತ ಚಟುವಟಿಕೆ ಚುರುಕುಗೊಂಡಿದ್ದು ರೈತರಿಗೆ ಕೃಷಿ ಯಂತ್ರೋಪಕರಣಗಳ ಸಾಗಾಣಿಕೆ ಮತ್ತು ಕೃಷಿ ಯಂತ್ರಗಳ ದುರಸ್ತಿ ಆಗಬೇಕಿದೆ. ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಜಿಲ್ಲೆಯ ರೈತರು ಕೋರಿದ್ದಾರೆ. ಲಾಕ್‌ಡೌನ್‌ ಆದೇಶ ಪಾಲನೆ ಹಿನ್ನೆಲೆಯಲ್ಲಿ ಇದು ಕಷ್ಟ ಎನ್ನಿಸಿದರೂ ನಿಯಮಾನುಸಾರ ಸಾಕಷ್ಟು ಅಂತರ ಮತ್ತು ಸುರಕ್ಷತಾ ವಿಧಾನ ಅನುಸರಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ತೋಟಗಾರಿಕೆ ಬೆಳೆಗಳಿವೆ. ತೋಟಗಾರಿಕಾ ಫಸಲಿನ ಮಾರಾಟಕ್ಕೆ ಅನುಕೂಲ ಕಲ್ಪಿಸಬೇಕಿದೆ. ಹೀಗಾಗಿ ಅಂತಹ ತೋಟಗಾರಿಕಾ ಬೆಳೆಗಾರರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಇತರೆಡೆಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಬೆಳೆದ ರೈತರ ಮಾಹಿತಿ ಪಡೆದು, ಆ ಹಣ್ಣು ಬೇರೆಡೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ತೋಟಗಾರಿಕಾ ಉಪ ನಿರ್ದೇಶಕರಿಗೆ ತಿಳಿಸಿದರು.

ಮುಂಜಾಗ್ರತೆ ವಹಿಸಿ: ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಕಾರ್ಯನಿರತವಾಗಿರುವ ಆರೋಗ್ಯ, ಪೊಲೀಸ್‌ ಸೇರಿದಂತೆ ಇನ್ನಿತರ ಇಲಾಖೆಗಳ ಸಿಬ್ಬಂದಿ ಸುರಕ್ಷತಾ ಕ್ರಮ ಅನುಸರಿಸಬೇಕು ಎಂದು ಜಿಲ್ಲಾ ಧಿಕಾರಿಗಳು ಸಲಹೆ ನೀಡಿದರು. ಕೃಷಿ ಜಂಟಿ ನಿರ್ದೇಶಕ ಸಿ. ವಿದ್ಯಾನಂದ, ತೋಟಗಾರಿಕಾ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವುಗೆ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next