Advertisement

ವರ್ತೂರು ಕೆರೆಯಲ್ಲಿ ಮತ್ತೆ ನೊರೆ

06:20 AM Mar 06, 2019 | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಗತ್ಯ ಕ್ರಮದ ನಂತರವೂ ವರ್ತೂರು ಕೆರೆಯಲ್ಲಿ ಮತ್ತೆ ನೊರೆ ಸಮಸ್ಯೆ ಮರುಕಳಿಸಿದ್ದು, ರಸ್ತೆ ಮೇಲೆ ಹಾರುತ್ತಿರುವ ನೊರೆಯಿಂದ ಪರಿಸರ ಕಲುಷಿತವಾಗಿದೆ. ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ವರ್ತೂರು ಕೆರೆಯಲ್ಲಿ ರಾಸಾಯನಿಕ ಅಂಶ ಹೆಚ್ಚಾಗಿರುವ ಕಾರಣ ನೊರೆ ಉಂಟಾಗುತ್ತಿದೆ.

Advertisement

ಶುಕ್ರವಾರ ಸಂಜೆ ವೇಳೆ ಒಂದಿಷ್ಟು ಪ್ರಮಾಣದಲ್ಲಿ ಕಾಣಿಸಿಕೊಂಡ ನೊರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ, ಮಂಗಳವಾರ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿ ರಾಜ್ಯ ಹೆದ್ದಾರಿ 35ರ ಮೇಲೆ ಕಂಡುಬಂದಿದೆ. ಇದರಿಂದ ಕೆಲಕಾಲ ಸಂಚಾರ ದಟ್ಟಣೆಯೂ ಉಂಟಾಯಿತು. ನೊರೆಯಿಂದ ದುರ್ವಾಸನೆ ಬರುತ್ತಿದ್ದು ಮೂಗು ಹಿಡಿದು ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿ ಎನ್ನುತ್ತಾರೆ ಸ್ಥಳೀಯರು.

ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಕಾಣಿಸಿಕೊಳ್ಳುವ ನೊರೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸ್ಥಳಿಯ ಸಂಬಂಧಪಟ್ಟ ಸಂಸ್ಥೆಗಳಿಗೆ ಹಸಿರು ನ್ಯಾಯಪೀಠ ಸೂಚಿಸಿತ್ತು. ಹೀಗಾಗಿ, ಬಿಡಿಎ ಕಳೆದ ವರ್ಷ ಡಿಸೆಂಬರ್‌ನಲ್ಲಿ “ಸೂಸ್‌ ಗೇಟ್‌ ಮ್ಯಾಕಾನಿಸಂ’ ತಂತ್ರಜ್ಞಾನವನ್ನು ಕೆರೆಗಳಿಗೆ ಅಳವಡಿಸುವ ಕಾಮಗಾರಿ ಕೈಗೊಂಡು, ಕಳೆದ ಡಿಸೆಂಬರ್‌ನಲ್ಲಿ ತಂತ್ರಜ್ಞಾನ ಅಳವಡಿಸಿತ್ತು. ಆದರೂ, ಕೆರೆಯಲ್ಲಿ ಮತ್ತೆ ನೊರೆಗೆ ಕಾಣಿಸಿಕೊಂಡಿದೆ.

ನೊರೆ ಪರಿಹಾರಕ್ಕೆ ಕಾಮಗಾರಿ: ಹಸಿರು ನ್ಯಾಯಪೀಠದಿಂದ ಛೀಮಾರಿ ಹಾಕಿಸಿಕೊಂಡ ಬಳಿಕ ಬಿಡಿಎ ವರ್ತೂರು, ಬೆಳ್ಳಂದೂರು ಹಾಗೂ ಯಮಲೂರು ಕೆರೆಗಳಿಗೆ ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಂಡು ನೊರೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮುಂದಾಯಿತು. ಮೊದಲು ಈ ಮೂರು ಕೆರೆಗಳಿಗೆ ಕೋಡಿ ಕಟ್ಟುವುದು ಆನಂತರ ಕೆರೆಗೆ ಹರಿಯುವ ನೀರಿನ ವೇಗವನ್ನು ಕಡಿಮೆ ಮಾಡಲು “ಸೂಸ್‌ ಗೇಟ್‌ ಮ್ಯಾಕಾನಿಸಂ’ ಬಳಸುವ ಕಾಮಗಾರಿ ಕೈಗೊಂಡಿತ್ತು.

ಈ ಕಾಮಗಾರಿ ಬೆಳ್ಳಂದೂರು ಹಾಗೂ ವರ್ತೂರು ಕೆರೆಯಲ್ಲಿ ಡಿಸೆಂಬರ್‌ನಲ್ಲಿ ಪೂರ್ಣಗೊಂಡಿತ್ತು. ಆ ನಂತರ ಕೆರೆಯಲ್ಲಿ ನೊರೆ ಕಾಣಿಸಿಕೊಂಡಿರಲಿಲ್ಲ. ಜತೆಗೆ ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾದಾಗ ಮತ್ತೆ ನೊರೆ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಕಾಮಗಾರಿ ಮುಗಿದು ಎರಡು ತಿಂಗಳಲ್ಲಿಯೇ ನೊರೆ ಕಾಣಿಸಿಕೊಂಡಿದ್ದು, ಸ್ಥಳೀಯರು ಕಾಮಗಾರಿ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಬಿಡಿಎ ಸಮಜಾಯಿಷಿ: ವರ್ತೂರು ಕೆರೆ ಮತ್ತೆ ನೊರೆ ಕಾಣಿಸಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಬಿಡಿಎ ಇಂಜಿನಿಯರ್‌ ಶಿವಾನಂದ್‌ ಅವರು, ಕೆರೆಯ ಪಕ್ಕದಲ್ಲಿ ಬಿಬಿಎಂಪಿ ಕಾಮಗಾರಿಯೊಂದು ನಡೆಯುತ್ತಿದ್ದು, ಅದರಿಂದ ನೊರೆ ಕಾಣಿಸಿಕೊಂಡಿರಬಹುದು. ಕಾಮಗಾರಿ ಮುಗಿದ ನಂತರ ಸರಿಹೋಗುತ್ತದೆ ಎಂದು ಸಮಜಾಯಿಷಿ ನೀಡುತ್ತಾರೆ.

ಒಳ ಚರಂಡಿ ನೀರಿನಿಂದ ನೊರೆ?: ಕೆರೆಗೆ ಜಲಮಂಡಳಿಯ ತ್ಯಾಜ್ಯ ಸಂಸ್ಕರಣಾ ಘಟಕಗಳ ನೀರು ಬರುತ್ತಿದ್ದು, ಜಲಮಂಡಳಿ ಅಲ್ಲಿ ಸೂಕ್ತವಾಗಿ ನೀರನ್ನು ಸಂಸ್ಕರಣೆ ಮಾಡದೇ ಕೆರೆಗೆ ಹರಿಸಲಾಗುತ್ತಿದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಜಲಮಂಡಳಿ ಅಧಿಕಾರಿಗಳು, ವರ್ತೂರು ಕೆರೆಯಲ್ಲಿ ನಮ್ಮ ಸಂಸ್ಕರಣಾ ಘಟಕದಿಂದ ಕೇವಲ 15ರಿಂದ 20 ಎಂಎಲ್‌ಡಿ ನೀರು ಹರಿಯುತ್ತಿದೆ. ಜತೆಗೆ ಆ ನೀರನ್ನು ಉನ್ನತ ಮಟ್ಟದಲ್ಲಿ ಶುದ್ಧೀಕರಿಸಿ ಬಿಡಲಾಗುತ್ತಿದೆ. ಬದಲಿಗೆ ಅಕ್ಕ ಪಕ್ಕದಿಂದ ಹರಿಯುತ್ತಿರುವ ಒಳಚರಂಡಿ ನೀರಿನ ರಾಸಾಯನಿಕ ಅಂಶದಿಂದ ನೊರೆ ಕಾಣಿಸಿಕೊಂಡಿರಬಹುದು ಎನ್ನುತ್ತಾರೆ.

ನೊರೆ ಸಮಸ್ಯೆ ಮುಕ್ತಿ ನೀಡಲು ಬಿಡಿಎ ಕೋಟ್ಯಂತರ ರೂ. ಖರ್ಚು ಮಾಡಿ ಕಾಮಗಾರಿ ಕೈಗೊಂಡಿತ್ತು. ಆದರೆ, ಮತ್ತೆ ನೊರೆ ಕಾಣಿಸಿಕೊಂಡು ಕಾಮಗಾರಿ ಕುರಿತು ಅನುಮಾನ ಮೂಡಿಸುತ್ತಿದೆ. ನೊರೆ ಕುರಿತು ಬಿಡಿಎ ಹಾಗೂ ಜಲಮಂಡಳಿ ಒಬ್ಬರಿಗೊಬ್ಬರು ಆರೋಪಿಸುತ್ತಾರೆ ಹೊರತು ನೊರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿಲ್ಲ.
-ಜಗದೀಶ್‌ ರೆಡ್ಡಿ, ಸಾಮಾಜಿಕ ಕಾರ್ಯಕರ್ತ

ಜಲಮಂಡಳಿಯಿಂದ ವರ್ತೂರು ಕೆರೆಗೆ ಬಿಡುತ್ತಿರುವ ನೀರನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ವಿವಿಧ ಹಂತಗಳಲ್ಲಿ ಶುದ್ಧೀಕರಿಸಲಾಗುತ್ತಿದೆ. ಶುದ್ಧೀಕರಣ ಕುರಿತು ಅನುಮಾನವಿದ್ದವರು ಖುದ್ದು ಭೇಟಿ ನೀಡಿ ಪರೀಕ್ಷಿಸಬಹುದು. ಕೆರೆಗೆ ಅಕ್ಕಪಕ್ಕದ ಒಳಚರಂಡಿ ನೀರು ಹರಿಯುತ್ತಿದ್ದು, ಇದರಿಂದ ನೊರೆ ಕಾಣಿಸಿಕೊಳ್ಳುತ್ತಿರಬಹುದು.
-ನಿತ್ಯಾನಂದಕುಮಾರ್‌, ಜಲಮಂಡಳಿ ಇಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next