ಕುಂದಾಪುರ: ಪಡುಬಿದ್ರಿ ಸೇತುವೆ ಜನವರಿಯಲ್ಲಿ, ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯ ಫ್ಲೈಓವರ್ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸದಿದ್ದರೆ ಎಪ್ರಿಲ್‌ನಿಂದ ಸಾಸ್ತಾನ ಟೋಲ್‌ಗೇಟ್‌ನಲ್ಲಿ ಸುಂಕ ವಸೂಲಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಅವರು ಸೋಮವಾರ ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಹೆದ್ದಾರಿ ಸಮಸ್ಯೆ ಕುರಿತು ನಡೆಸಿದ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದವರಿಗೆ ಎಚ್ಚರಿಕೆ ನೀಡಿದರು.
ಕುಂದಾಪುರದಿಂದ ಶಿರೂರು ತನಕ ಹೆದ್ದಾರಿಯಲ್ಲಿ ಸಂಚಾರ ಅವ್ಯವಸ್ಥೆಯಿಂದ ಕೂಡಿದೆ. ಏಕಮುಖ ಸಂಚಾರವೂ ಸರಿಯಾಗಿಲ್ಲ. ಇದನ್ನು ಸರಿಪಡಿಸಬೇಕು ಎಂದು ಐಆರ್‌ಬಿಯವರಿಗೆ ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ತನ್ನ ಅವಧಿಯಲ್ಲಿ ಮಂಜೂರಾಗದ, ಪೂರ್ಣವಾಗದ ಕಾಮಗಾರಿಗಾಗಿ ಜನರಿಂದ ಆಕ್ರೋಶ ಎದುರಿಸಬೇಕಾಗಿ ಬಂದಿದೆ. ನವಯುಗ ಸಂಸ್ಥೆಯವರನ್ನು ದೇಶದಲ್ಲೆಡೆ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಬೆಂಗಳೂರಿನಲ್ಲಿ ಹೆದ್ದಾರಿ ಅಭಿವೃದ್ಧಿ ಬಗ್ಗೆ ಪ್ರಾಧಿಕಾರದ ರಾಜ್ಯ ನಿರ್ದೇಶಕರು, ಕೇಂದ್ರ ನಿರ್ದೇಶಕರು, ಲೋಕೋಪಯೋಗಿ ಸಚಿವರು, ಲೋಕೋಪಯೋಗಿ ಇಲಾಖಾ ಕಾರ್ಯದರ್ಶಿ, ಶಾಸಕರು, ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಸಭೆ ಕರೆಯಲಾಗುವುದು ಎಂದರು.
ಹೆದ್ದಾರಿ ಪ್ರಾಧಿಕಾರದವರು ಮಾಹಿತಿ ನೀಡಿ, 2010ರಲ್ಲಿ ಆರಂಭವಾದ ಕಾಮಗಾರಿ 2013ರಲ್ಲಿ ಮುಗಿಯಬೇಕಿತ್ತು. ಸುರತ್ಕಲ್‌ನಿಂದ ಕುಂದಾಪುರವರೆಗೆ ಶೇ. 97ರಷ್ಟು ಕೆಲಸ ಆಗಿದೆ. ಉಳಿದ ಶೇ. 7ರಷ್ಟನ್ನು ಹೊಸದಾಗಿ ಟೆಂಡರ್ ಕರೆದು ಪೂರೈಸಲಾಗುವುದು. 2020 ಜನವರಿಯಲ್ಲಿ ಪಡುದ್ರಿ ಸೇತುವೆ, ಮಾರ್ಚ್ ವೇಳೆಗೆ ಫ್ಲೈಓವರ್, ಮತ್ತೆ ಮೂರು ತಿಂಗಳಲ್ಲಿ ಬಸ್ರೂರು ಮೂರುಕೈ ಅಂಡರ್‌ಪಾಸ್ ಕಾಮಗಾರಿ ಮುಗಿಸಲಾಗುವುದು ಎಂದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಹೊಸದಾಗಿ ಟೆಂಡರ್ ನೀಡುವಾಗ ಸಾರ್ವಜನಿಕರಿಗೆ ಉಪಯೋಗ ವಾಗುವ ರೀತಿಯಲ್ಲಿ ಕಾಮಗಾರಿಯ ಯೋಜನೆ ಇರಲಿ ಎಂದರು. ಸಹಾಯಕ ಕಮಿಷನರ್ ಕೆ. ರಾಜು ಉಪಸ್ಥಿತರಿದ್ದರು.