Advertisement

ಕಲ್ಲಡ್ಕದಲ್ಲಿ ಫ್ಲೆಓವರ್‌ ತೀರ್ಮಾನ; ಭೂಮೌಲ್ಯ ನಿಗದಿಗೆ ಆಕ್ಷೇಪ

11:27 AM Aug 03, 2019 | keerthan |

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಬಿ.ಸಿ. ರೋಡ್‌-ಅಡ್ಡಹೊಳೆ ನಡುವಣ ಹೆದ್ದಾರಿ ಅಗಲ ಕಾಮಗಾರಿ ಆರಂಭಗೊಂಡು ಸಾಕಷ್ಟು ಕಾಲ ಕಳೆದರೂ ಕಲ್ಲಡ್ಕ ಪೇಟೆಯಲ್ಲಿ ಏನು ವ್ಯವಸ್ಥೆ ಎಂಬುದು ಇದುವರೆಗೆ ಯಕ್ಷಪ್ರಶ್ನೆಯಾಗಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದ್ದು, ಹೆದ್ದಾರಿ ಪ್ರಾಧಿಕಾರವು ಫ್ಲೆಓವರ್‌ ನಿರ್ಮಿಸುವ ನಿರ್ಧಾರಕ್ಕೆ ಬಂದಿದೆ.

Advertisement

ಆದರೆ ಈ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ಹೆಚ್ಚುವರಿ ಜಮೀನನ್ನು ಸ್ವಾಧೀನ ಪಡಿಸಲು ಆದೇಶ ಹೊರಡಿಸಿ, ನಿಗದಿ ಪಡಿಸಿರುವ ಮೌಲ್ಯಕ್ಕೆ ಆಕ್ಷೇಪ ಕೇಳಿಬರುತ್ತಿದೆ. ಮೌಲ್ಯ ನಿಗದಿಯಲ್ಲಿ ತಾರತಮ್ಯ ಆಗಿದೆ ಎಂಬುದು ಪ್ರಮುಖ ಆರೋಪ. ಮೌಲ್ಯ ನಿಗದಿಗೆ ಮಾನದಂಡ ಏನು ಎಂಬುದನ್ನು ಬಹಿರಂಗ ಪಡಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.

ಹೆಚ್ಚುವರಿ ಭೂಸ್ವಾಧೀನಕ್ಕೆ ನೋಟಿಸ್‌
ಹಾಸನ ಎನ್‌ಎಚ್‌ಎಐನ ಬಿ.ಸಿ. ರೋಡ್‌ ವಿಭಾಗದ ವಿಶೇಷ ಭೂ ಸ್ವಾಧೀನಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದಿಂದ ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಕಳೆದ ಮಾರ್ಚ್‌ನಲ್ಲಿ ಸಂಬಂಧಪಟ್ಟ ಗ್ರಾ.ಪಂ.ಗಳ ನಾಮಫಲಕಗಳಲ್ಲಿ ಅಳವಡಿಸುವುದಕ್ಕೆ ಜಾಗದ ಸರ್ವೆ ನಂ.ಗಳನ್ನೊಳಗೊಂಡ ನೋಟಿಸ್‌ ನೀಡಲಾಗಿದೆ. ಜತೆಗೆ ಸರ್ವೆ ನಂ. ನಮೂದಿಸಿರುವ ಜಮೀನುಗಳಲ್ಲಿ ಕಟ್ಟಡ ರಚನೆಗೆ ಲೈಸನ್ಸ್‌ ನೀಡದಂತೆ ತಿಳಿಸಲಾಗಿದೆ. ಗೋಳ್ತಮಜಲು ಗ್ರಾ.ಪಂ.ನ ಒಟ್ಟು 6 ಮತ್ತು ಬಾಳ್ತಿಲ ಗ್ರಾ.ಪಂ.ನ 16 ಸರ್ವೆ ನಂ.ಗಳನ್ನು ಗುರುತಿಸಲಾಗಿದೆ.

ಅಂತಿಮ ಹಂತದಲ್ಲಿ ಡಿಪಿಆರ್‌
ಕಲ್ಲಡ್ಕ ಫ್ಲೆಓವರ್‌ನ ಡಿಪಿಆರ್‌ ಅಂತಿಮ ಹಂತದಲ್ಲಿದ್ದು, ಏಳೆಂಟು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳುವ ಸಾಧ್ಯತೆ ಇದೆ. ಹೆದ್ದಾರಿ ಕಾಮಗಾರಿ ಗುತ್ತಿಗೆಗೂ ಫ್ಲೆಓವರ್‌ ಕಾಮಗಾರಿಗೂ ಸಂಬಂಧವಿಲ್ಲ. ಇದನ್ನು ಬೇರೆಯೇ ನಿರ್ಮಾಣ ಸಂಸ್ಥೆ ನಿರ್ವಹಿಸಲಿದೆ. ಪ್ರಸ್ತುತ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಜಾಗದ ಮೌಲ್ಯವನ್ನು ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಸ್ತುತ ಕಲ್ಲಡ್ಕದಲ್ಲಿ ಮಾತ್ರ; ಮುಂದೆ ಅಗತ್ಯವಿದ್ದರೆ ಇತರೆಡೆಯೂ ಫ್ಲೆಓವರ್‌ ನಿರ್ಮಿಸುವ ಸಾಧ್ಯತೆ ಇದೆ ಎಂದು ಹಾಸನ ಎನ್‌ಎಚ್‌ಎಐನ ಬಿ.ಸಿ. ರೋಡ್‌ ವಿಭಾಗದ ಮೂಲಗಳು ತಿಳಿಸಿವೆ.

ಫ್ಲೆಓವರ್‌ ಆರಂಭ- ಅಂತ್ಯ
ಫ್ಲೆಓವರ್‌ನ ಮಾರ್ಕಿಂಗ್‌ ಕಾರ್ಯ ಪೂರ್ಣಗೊಂಡಿದೆ. ಮಾಣಿ ಭಾಗದಿಂದ ಕಲ್ಲಡ್ಕಕ್ಕೆ ಆಗಮಿಸುವಾಗ ಕುದ್ರೆಬೆಟ್ಟಿನ ಸಮೀಪ ಫ್ಲೆ$çಓವರ್‌ ಆರಂಭ; ಕರಿಂಗಾನ ಕ್ರಾಸ್‌ ರಸ್ತೆಯ ಸಮೀಪ ಅಂತ್ಯ ಎಂದು ಮಾರ್ಕಿಂಗ್‌ ಮಾಡಲಾಗಿದೆ. ಅದಕ್ಕೂ ಸ್ವಲ್ಪ ದೂರದಲ್ಲಿ ಎಪ್ರೋಚ್‌ ರೋಡ್‌ ಸ್ಟಾರ್ಟ್‌-ಎಂಡ್‌ ಎಂದು ಮಾರ್ಕಿಂಗ್‌ ಮಾಡಲಾಗಿದೆ.

Advertisement

ಮರುಪರಿಶೀಲನೆ ಬಯಸಿದರೆ ಲಭ್ಯ
ಕೆಲವು ಕಟ್ಟಡ ಸರಕಾರಿ ಭೂಮಿಯಲ್ಲಿದ್ದಾಗ ಪರಿಹಾರ ಸಿಗುವುದಿಲ್ಲ. ಕಲ್ಲಡ್ಕದ 1.2 ಕಿ.ಮೀ.ಗೆ ಒಟ್ಟು 28 ಕೋ.ರೂ.ಗಳ ಪರಿಹಾರ ಮೌಲ್ಯವನ್ನು ನಿಗದಿ ಪಡಿಸಲಾಗಿದೆ. ಇದು ಗ್ರಾ.ಪಂ. ವ್ಯಾಪ್ತಿಯಲ್ಲಿರುವುದರಿಂದ ಮೌಲ್ಯ ಕಡಿಮೆ ಇರುತ್ತದೆ. ತೆಂಗು, ಅಡಿಕೆ ಮರಗಳು ಇದ್ದರೆ ಹೆಚ್ಚಿನ ಪರಿಹಾರ ಲಭಿಸಿ, ತೆರಿಗೆಯೂ ಇರುವುದಿಲ್ಲ. ಮೌಲ್ಯ ಪಡೆದುಕೊಂಡು ಮರುಪರಿಶೀಲನೆ ಬಯಸಿದರೆ ಮಾಡಿಕೊಡಲಾಗುತ್ತದೆ. ಸುಮಾರು 70 ಗ್ರಾಮಗಳಲ್ಲಿ ಇದೇ ಕೊನೆಯ ಗ್ರಾಮವಾಗಿದ್ದು, ಯಾವುದೇ ಗೊಂದಲಗಳಿಲ್ಲ ಎಂದು ಎನ್‌ಎಚ್‌ಎಐ ಮೂಲಗಳು ತಿಳಿಸಿವೆ.

ಮರುಮೌಲ್ಯಮಾಪನಕ್ಕೆ ಅವಕಾಶ
ಕಲ್ಲಡ್ಕದಲ್ಲಿ ಫ್ಲೆಓವರ್‌ ಬರುತ್ತಿರುವುದರಿಂದ 2.5 ಮೀ. ಭೂಸ್ವಾಧೀನ ಕಡಿಮೆಯಾಗಿ ಕೆಲವು ಕಟ್ಟಡಗಳು ಸೇಫ್‌ ಝೋನ್‌ಗೆ ಬಂದಿವೆ. ಹೀಗಾಗಿ ಭೂ ಸ್ವಾಧೀನದ ಮೌಲ್ಯದ ಮೊತ್ತ ಕಡಿಮೆಯಾಗಿದೆ. ಮೌಲ್ಯವನ್ನು ಎನ್‌ಎಚ್‌ಎಐಯ ತಾಂತ್ರಿಕ ವಿಭಾಗದ ಮೌಲ್ಯಮಾಪಕರು ನಿರ್ಧರಿಸುತ್ತಿದ್ದು, ವ್ಯತ್ಯಾಸಗಳಿದ್ದರೆ ಮೌಲ್ಯದ ಮರು ಪರಿಶೀಲನೆಗೆ ಅವಕಾಶವಿದೆ. ಅವರು ಹೆಚ್ಚುವರಿ ಪರಿಹಾರಕ್ಕೆ ಸೂಚಿಸಿದರೆ ನೀಡಲಾಗುತ್ತದೆ.
ಮಂಜುನಾಥ್‌, ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ, ಎನ್‌ಎಚ್‌ಎಐ, ಹಾಸನ, ಬಿಸಿ. ರೋಡ್‌ ವಿಭಾಗ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next