Advertisement

ಹಾರುವ ಕಾರು

09:58 AM Jan 03, 2020 | mahesh |

1949ರಲ್ಲಿ ಅಮೆರಿಕದ ಖ್ಯಾತ ಅನ್ವೇಷಕ ಮೋಲ್ಟನ್‌ ಟೇಲರ್‌ ಒಂದು ವಿಮಾನವಾಗಿ ಪರಿವರ್ತಿಸಬಹುದಾದ ಕಾರನ್ನು ತಯಾರು ಮಾಡಿದ. ಅದರ ಬೆಲೆ ಎಷ್ಟು ಗೊತ್ತೇ? 8.86 ಕೋಟಿ ರೂಪಾಯಿಗಳು. ಅದರ ಬೆಲೆ ಆ ಕಾಲದಲ್ಲಿ ತುಂಬಾ ಜಾಸ್ತಿ ಆಗಿದ್ದಿದ್ದರಿಂದ ಅದು ಜನಪ್ರಿಯವಾಗಲಿಲ್ಲ. ಕಾರಿನ ಗರಿಷ್ಠ ವೇಗ 117 ಕಿಲೋ ಮೀಟರ್‌ ಆಗಿತ್ತು. ಆ ಕಾಲದಲ್ಲಿ 117 ಕಿಲೋಮೀಟರ್‌ ವೇಗವೆಂದರೆ ತುಂಬಾ ಹೆಚ್ಚಿನ ವೇಗವೇ ಆಗಿತ್ತು. ಅದೇ ಟೇಲರ್‌ ಏರೋಕಾರ್‌. ಅದು ನೆಲದ ಮೇಲೆ ಚಲಿಸುವಾಗ ಅದರ ರೆಕ್ಕೆಗಳನ್ನು ಕಾರಿನಿಂದ ಬೇರ್ಪಡಿಸಿ ಇನ್ನೊಂದು ಪ್ರತ್ಯೇಕ ಗಾಡಿಯಲ್ಲಿ ಇಟ್ಟು ಅದನ್ನು ಕಾರಿನ ಹಿಂಭಾಗಕ್ಕೆ ಕಟ್ಟಬೇಕಾಗಿದ್ದಿತು. ಕಾರು ಆ ಗಾಡಿಯನ್ನು ಎಳೆದೊಯ್ಯುವ ಹಾಗೆ ಅದನ್ನು ರೂಪಿಸಲಾಗಿತ್ತು. 1953ರ ಸಮಯದವರೆಗೆ ಒಂದು ಏರೋಕಾರ್‌ 40 ಸಾವಿರಕ್ಕಿಂತ ಹೆಚ್ಚು ಕಿಲೋಮೀಟರ್‌ ದೂರ ಹಾರಿತ್ತು. ಅದರಲ್ಲಿ ಒಬ್ಬರೇ ಕೂರಬಹುದಿತ್ತು.

Advertisement

ಕೆಲವೇ ಮಾದರಿಗಳು
2011ರಲ್ಲಿ ಇಬ್ಬರು ಕುಳಿತುಕೊಳ್ಳಬಹುದಾದ 1954 ಟೇಲರ್‌ ಎರೋಕಾರ್‌ ಎನ್‌-101ಡಿ ಅನ್ನು ವಿಮಾನ ಸಂಗ್ರಹಕಾರ ಗ್ರೆಗ್‌ ಹೆರ್ರಿಕ್‌ ಮಾರಾಟ ಮಾಡಿದ. ಅದರ ಬೆಲೆ 7 ಕೋಟಿ ರೂಪಾಯಿಗಳು. ಅವನು ಆ ಕಾರನ್ನು 90ರ ದಶಕದಲ್ಲಿ ಯಾರೋ ಒಬ್ಬರಿಂದ ಕೊಂಡಿದ್ದನಂತೆ. ಏರೋಕಾರುಗಳು ಉತ್ಪಾದನೆಯಾಗಿದ್ದು ಕೇವಲ 6 ಮಾದರಿಗಳು ಮಾತ್ರ. ಇದು ಯಾವಾಗಲೂ ಹೆಚ್ಚು ಉತ್ಪಾದನೆ ಆಗಲೇ ಇಲ್ಲ. ಎರೋಕಾರ್‌ ವಿನ್ಯಾಸಗೊಳಿಸಿದ ಮೊಲ್ಟನ್‌ ಟೇಲರ್‌ ಒಬ್ಬ ವೈಮಾನಿಕ ಇಂಜಿನಿಯರ್‌ ಆಗಿದ್ದ. ಅವರು ಸೆಪ್ಟೆಂಬರ್‌ 29, 1912ರಂದು ಅಮೇರಿಕದ ಪೋರ್ಟ್‌ಲ್ಯಾಂಡ್‌ನ‌ಲ್ಲಿ ಹುಟ್ಟಿದರು. ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಅವರ ವಿದ್ಯಾಭ್ಯಾಸ ನೆರವೇರಿತು.

ಭಾರತಕ್ಕೂ ಕಾಲಿಡುತ್ತಿದೆ
ಎರಡನೇ ವಿಶ್ವ ಮಹಾಯುದ್ಧದಲ್ಲಿ ಅವರು ಅಮೆರಿಕಾದ ನೌಕಾದಳದಲ್ಲಿ ಗೋರ್ಗೆನ್‌ ಕ್ಷಿಪಣಿಯ ಕೆಲಸದಲ್ಲಿ ತೊಡಗಿದ್ದರು. ಯುದ್ಧ ಮುಗಿದ ಸ್ವಲ್ಪ ಸಮಯದ ನಂತರ, ಅಂದರೆ 1949ರಲ್ಲಿ ಟೇಲರ್‌ ಏರೋಕಾರನ್ನು ನಿರ್ಮಾಣ ಮಾಡಿದರು. ಮೊಲ್ಟನ್‌ ಟೇಲರ್‌ 1995 ನವೆಂಬರ್‌ 16ರಂದು ತೀರಿಕೊಂಡರು. ಅದಾದಮೇಲೆ ಟೇಲರ್‌ ಅವರಿಂದ ಸ್ಪೂರ್ತಿಗೊಂಡು ವಿವಿಧ ಕಾರು ತಯಾರಕ ಸಂಸ್ಥೆಯವರು ಬೇರೆ ಬೇರೆ ಮಾದರಿಗಳ ಏರೋಕಾರುಗಳನ್ನು ನಿರ್ಮಿಸತೊಡಗಿದರು. ಭಾರತ 2021ರಲ್ಲಿ ತನ್ನ ಮೊದಲ ಏರೋಕಾರನ್ನು ನೋಡಲಿದೆ. ಭಾರತಕ್ಕೆ ಬರುತ್ತಿರುವ ಆ ಹಾರುವ ಕಾರು PAL - V ಫ್ಲೈಯಿಂಗ್‌ ಕಾರು.

– ವಿಧಾತ ದತ್ತಾತ್ರಿ

Advertisement

Udayavani is now on Telegram. Click here to join our channel and stay updated with the latest news.

Next