ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ, ಹೈಕೋರ್ಟ್ ಹಾಗೂ ಇದಕ್ಕೆ ಹೊಂದಿಕೊಂಡಿರುವ ಸಂರಕ್ಷಿತ ಕಟ್ಟಡಗಳ ಮೇಲೆ ಕೆಲವರು ರಾತ್ರಿ ಮತ್ತು ಹಗಲು ವೇಳೆ ಡ್ರೋಣ್ ಮೂಲಕ ರಹಸ್ಯವಾಗಿ ಚಿತ್ರೀಕರಿಸುವ ಸಂಭವವಿದೆ!
ಇಂತಹದೊಂದು ಆಂತಕವನ್ನು ಸ್ವತಃ ವಿಧಾನಸೌಧ ಭದ್ರತಾ ವಿಭಾಗವೇ ವ್ಯಕ್ತಪಡಿಸಿದೆ. ಈ ಸಂಬಂಧ ಸಂರಕ್ಷಿತ ಕಟ್ಟಡಗಳ ಮೇಲೆ ಹಾರಾಡಬಹುದಾದ ಡ್ರೋಣ್‌ಗಳ ಮೇಲೆ ನಿಗಾವಹಿಸಲು ಪ್ರತ್ಯೇಕ “ನಿಗಾವಣೆ ಘಟಕ’ ಸ್ಥಾಪನೆ ಮಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದಿದೆ.
ಈ ಕುರಿತಂತೆ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಎಸ್.ಸಿದ್ದರಾಜು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಮಾ.20ರಂದೇ ಪತ್ರ ಬರೆದು ಮನವಿ ಮಾಡಿದ್ದಾರೆ. “ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ, ರಾಜಭವನ, ಹೈಕೋರ್ಟ್, ಬಹುಮಹಡಿ ಕಟ್ಟಡ (ಎಂ.ಎಸ್. ಬಿಲ್ಡಿಂಗ್), ಮಾಹಿತಿ ಸೌಧ,
ರಾಜ್ಯ ಮಾನವ ಹಕ್ಕು ಆಯೋಗ, ಕರ್ನಾಟಕ ಲೋಕಸೇವಾ ಆಯೋಗ, ಲೋಕಾಯಕ್ತ ಹಾಗೂ ಈ ಭಾಗದಲ್ಲಿರುವ ಸಂರಕ್ಷಿತ ಕಟ್ಟಡಗಳ ಮೇಲೆ ಛಾಯಾಚಿತ್ರಗಾರರು ರಾತ್ರಿ ಮತ್ತು ಹಗಲು ವೇಳೆ ಡ್ರೋಣ್ ಸಹಾಯದಿಂದ ರಹಸ್ಯವಾಗಿ ಚಿತ್ರೀಕರಣ ಮಾಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಒಂದು ನಿಗಾವಣೆ ಘಟಕ ಸ್ಥಾಪನೆ ಮತ್ತು ಸಿಬ್ಬಂದಿ ನೇಮಿಸುವ ಅಗತ್ಯವಿದೆ’ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
ವಿಧಾನಸೌಧ, ಹೈಕೋರ್ಟ್ ಸುತ್ತಮುತ್ತ ಯಾವುದೇ ಚಿತ್ರೀಕರಣ ನಡೆಸಬಾರದು ಎಂಬ ಆದೇಶವಿದೆ. ಆದರೂ, ಇತ್ತೀಚೆಗೆ ಭದ್ರತಾ ನಿಯಮ ಉಲ್ಲಂ ಸಿ “ಅನಂತು ವರ್ಸ್‌ಸ್ ನಸ್ರುತ್’ ಸಿನಿಮಾದ ಫೋಟೋ ಶೂಟ್ ಹೈಕೋರ್ಟ್ ಆವರಣದಲ್ಲೇ ನಡೆದಿತ್ತು. ಈ ಸಂಬಂಧ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.