ಕುಷ್ಟಗಿ: ಕುಷ್ಟಗಿಯ ಬಸವೇಶ್ವರ ವೃತ್ತದ ಬಳಿ ಇರುವ ಬಸನಗೌಡ ಎನ್ ಪಾಟೀಲ ಅವರ ನಿವಾಸದ ನೆಲ ಮಾಳಿಗೆಯ ಕೊಠಡಿಯಲ್ಲಿ ಕಳೆದ ವರ್ಷದಿಂದ ನೀರು ಜಿನಗುತ್ತಿದ್ದು, ಪ್ರತಿ ದಿನ ನೀರು ಹೊರ ಹಾಕುವುದೇ ದಿನಚರಿಯಾಗಿದೆ.
ಕಳೆದ ವರ್ಷದಿಂದ ನೆಲ ಮಾಳಿಗೆಯ ಜಿನುಗುವ ನೀರನ್ನು ಹೊರ ಹಾಕಿ ಸುಸ್ತಾಗಿರುವ ಬಸನಗೌಡ ಪಾಟೀಲರು, ನೀರು ಜಿನುಗುವುದನ್ನು ನಿಯಂತ್ರಿಸಲು ತಜ್ಞರ ಮೊರೆ ಹೋಗಿದ್ದಾರೆ. ಕೃಷ್ಣ ಭಾಗ್ಯ ಜಲ ನಿಗಮದ ಪರಿಣಿತ ತಜ್ಞರು ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನೆಲ ಮಾಳಿಗೆಯ ಸುತ್ತಲೂ ರಂಧ್ರ ಕೊರೆದು ಪರೀಕ್ಷಿಸುವ ವೇಳೆ, ರಂಧ್ರದ ಮೂಲಕ ನೀರು ಮತ್ತಷ್ಟು ಜಿನುಗಲಾರಂಭಿಸಿದೆ. ಅಲ್ಪ ಪ್ರಮಾಣದಲ್ಲಿ ಜಿನಗುತ್ತಿದ್ದ ನೀರಿನ ಪ್ರಮಾಣ ಹೆಚ್ಚಿದೆ. ಕೊರೆದ ರಂಧ್ರಗಳ ಮೂಲಕ ರಾಸಾಯನಿಕ ಬಳಸಿ ನಿಯಂತ್ರಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ವರ್ಷದಿಂದ ದಿನವೂ ಎರಡು ಹೊತ್ತು ನೀರನ್ನು 2 ಎಚ್ ಪಿ (ಅಶ್ವಶಕ್ತಿ) ಮೋಟಾರು ಮೂಲಕ ನೀರು ಚರಂಡಿಗೆ ನೀರು ಹರಿಬಿಡುತ್ತಿದ್ದಾರೆ. ಕೆಲವು ದಿನಗಳಿಂದ ಜಿನುಗುವ ನೀರಿನಿಂದ ಫ್ಲೋರೈಡ್ ಅಂಶವಿರುವ ವಿಚಿತ್ರವಾದ ಬೇರಿನಂತಹ ವಸ್ತುಗಳು ಸೃಷ್ಟಿಯಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಬಸನಗೌಡರ ಮನೆಯ ನೆಲ ಮಾಳಿಗೆಯ ನೀರು ಜಿನುಗದಂತೆ ಎಲ್ಲಾ ಪ್ರಯತ್ನ ಮಾಡಿ ವಿಫಲರಾಗಿದ್ದು, ನೀರು ಶತ್ರುವಾಗಿ ಕಾಡುತ್ತಿದೆ. ಈ ಕುರಿತು ಉದಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಮ್ಮ ನೆಲ ಮಾಳಿಗೆಯಲ್ಲಿ ಜಿನಗುವ ನೀರಿನ ಮೂಲ ಎಲ್ಲಿಯದು ತಿಳಿಯುತ್ತಿಲ್ಲ. ನೀರು ಪ್ಲೋರೈಡ್‍ಯುಕ್ತವಾಗಿದೆ ಎಂದರು.