Advertisement
ಜಿಲ್ಲೆಯಲ್ಲಿ ಮೊದಲು 2013-14ರಲ್ಲಿ 378 ಗ್ರಾಮಗಳು ಹಾಗೂ 455 ಜನವಸತಿ ಪ್ರದೇಶಗಳಲ್ಲಿನ ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಅಂಶ ಕಂಡು ಬಂದಿತ್ತು. ನಂತರ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಿದ ಬಳಿಕ ಆ ಸಂಖ್ಯೆ ಇಳಿಕೆಯಾಗಿದೆ.
Related Articles
Advertisement
ನಿರ್ವಹಣೆಯಿಲ್ಲದ ಶುದ್ಧ ನೀರು ಘಟಕಗಳಲ್ಲೂ ಪತ್ತೆ: ಜಿಲ್ಲೆಯಲ್ಲಿ ಜಿಪಂನ ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಇವುಗಳ ನಿರ್ವಹಣೆಯನ್ನು ಗ್ರಾಪಂಗಳಿಗೆ ವಹಿಸಲಾಗಿದೆ. ಆದರೆ, ಕೆಲವು ಕಡೆ ಸರಿಯಾಗಿ ನಿರ್ವಹಣೆ, ಸ್ವತ್ಛತೆ ಕಾಪಾಡದೆ ಇರುವುದರಿಂದ ಫ್ಲೋರೈಡ್ ಅಂಶ ಸೇರುತ್ತಿದೆ. ಕೆಲವು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ. ಇದರಿಂದ ಶುದ್ಧ ಕುಡಿಯುವ ನೀರು ಸಮರ್ಪ ಕವಾಗಿ ಸರಬರಾಜು ಆಗುತ್ತಿಲ್ಲ ಎಂದು ತಿಳಿದು ಬಂದಿದೆ.
ಕೊಳವೆ ಬಾವಿ ಅವಲಂಬನೆ: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್‌ನಡಿ ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಸರಬರಾಜು ಮಾಡಲು ಮುಂದಾಗಿದೆ. ಆದರೆ, ಕೆಲವು ಕಡೆ ಕೊಳವೆ ಬಾವಿಗಳ ನೀರನ್ನೇ ಸರಬರಾಜು ಮಾಡಲು ಅವಲಂಬಿಸಲಾಗುತ್ತಿದೆ. ಇದರಿಂದ ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಅಂಶ ಬೆರೆಯುವ ಸಾಧ್ಯತೆ ಇದೆ. ಆದ್ದರಿಂದ ಕೊಳವೆ ಬಾವಿ ನೀರು ಸರಬರಾಜು ಮಾಡದೆ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಲು ಮುಂದಾಗಬೇಕಿದೆ.
ಶುದ್ಧ ನೀರು ಸೇವಿಸುವಂತೆ ಜಾಗೃತಿ: ಜಿಲ್ಲಾ ಆರೋಗ್ಯ ಇಲಾಖೆಯ ರಾಷ್ಟ್ರೀಯ ಫ್ಲೋರೋಸಿಸ್ ತಡೆ ನಿಯಂತ್ರಣ ತಂಡದಿಂದ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ನೀರು ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗ ಕಳುಹಿಸಲಾಗುತ್ತಿದೆ. ಫ್ಲೋರೈಡ್ ಅಂಶ ಕಂಡು ಬರುವ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸೇವಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಶುದ್ಧ ನೀರು ಘಟಕಗಳಲ್ಲಿನ ನೀರನ್ನೇ ಬಳಸುವಂತೆ ಸೂಚಿಸಲಾಗುತ್ತಿದೆ. ಅಲ್ಲದೆ, ಫ್ಲೋರೈಡ್ ಅಂಶದಿಂದ ದೇಹದ ಆರೋಗ್ಯದಲ್ಲಾಗುವ ದುಷ್ಪರಿಣಾಮ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ.
ವರ್ಷ ಪೂರ್ತಿ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗಕ್ಕೆ ಕಳುಹಿಸಲಾಗುತ್ತಿದೆ. ಅಲ್ಲಿ ಪರೀಕ್ಷೆ ನಡೆಸಿ ಫ್ಲೋರೈಡ್ ಅಂಶ ಕಂಡು ಬರುವ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಗ್ರಾಮೀಣ ಕುಡಿವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಗೂ ಶುದ್ಧ ನೀರು ಸರಬರಾಜು ಮಾಡಲು ಕ್ರಮ ವಹಿಸುವಂತೆ ಮಾಹಿತಿ ನೀಡಲಾಗುತ್ತಿದೆ. ● ಡಾ.ಅನಿಲ್‌ಕುಮಾರ್, ಜಿಲ್ಲಾ ನೋಡೆಲ್ ಅಧಿಕಾರಿ, ಎನ್‌ಪಿಪಿಸಿಎಫ್ ಸಮಿತಿ
ಜಿಲ್ಲೆಯಲ್ಲಿ 2013-14ರಲ್ಲಿ 378 ಗ್ರಾಮಗಳು ಹಾಗೂ 455 ಜನವಸತಿ ಪ್ರದೇಶಗಳಲ್ಲಿನ ನೀರಿನಲ್ಲಿ ಫ್ಲೋರೈಡ್ ಅಂಶ ಪತ್ತೆಯಾಗಿತ್ತು. ಇದೀಗ 89 ಗ್ರಾಮಗಳಿಗೆ ಇಳಿಕೆಯಾಗಿದೆ. ಫ್ಲೋರೈಡ್ ಅಂಶ ಕಂಡು ಬರುವ ಗ್ರಾಮಗಳಿಗೆ ಶುದ್ಧ ನೀರು ಸರಬರಾಜು ಮಾಡುವಂತೆ ಕುಡಿಯುವ ನೀರು ಸರಬರಾಜು ಇಲಾಖೆಗೆ ಮಾಹಿತಿ ನೀಡಿ ಕಡಿಮೆ ಮಾಡಲಾಗಿದೆ. ಗ್ರಾಮಗಳು, ಶಾಲೆಗಳು ಸೇರಿದಂತೆ ವಿವಿಧೆಡೆ ಜಾಗೃತಿ ಮೂಡಿಸಲಾಗುತ್ತಿದೆ. ● ಡಾ.ದಿವಾಕರ್, ಜಿಲ್ಲಾ ಸಲಹೆಗಾರರು, ಎನ್‌ಪಿಪಿಸಿಎಫ್ ಸಮಿತಿ
ನನಗೆ ಇತ್ತೀಚೆಗೆ ಹಲ್ಲು ನೋವು ಕಾಣಿಸಿಕೊಂಡಿತ್ತು. ನಾನು ಯಾವುದೇ ಮದ್ಯಪಾನ, ಧೂಮಪಾನ ಮಾಡಲ್ಲ. ಆದರೂ ಹಲ್ಲು ನೋವು ಬಂದಿತ್ತು. ಆಗ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಾಗ ಫ್ಲೋರೈಡ್ ಅಂಶದ ನೀರು ಸೇವನೆಯಿಂದ ಹಲ್ಲು ನೋವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿತು. ಕೂಡಲೇ ಗ್ರಾಪಂ ಗಮನಕ್ಕೆ ತಂದಿದ್ದೇನೆ. ಬಸರಾಳು ಗ್ರಾಪಂನ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಈಗಲೂ ಕೊಳವೆ ಬಾವಿ ನೀರು ಬಳಸಲಾಗುತ್ತಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಶುದ್ಧ ನೀರು ಸರಬರಾಜಿಗೆ ಕ್ರಮ ವಹಿಸಬೇಕು. ● ಸತೀಶ್, ಕೆಂಚನಹಳ್ಳಿ
-ಎಚ್.ಶಿವರಾಜು