ನರೇಗಲ್ಲ: ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ರಾಜ್ಯದ ಮಹತ್ವದ ಯೋಜನೆಯಾಗಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹೆಸರಿಗಷ್ಟೇ ಸೀಮಿತವಾಗಿದೆ. ವಾರದ ಏಳು ದಿನಗಳು ಕೂಡ ಬಹುಗ್ರಾಮ ಕುಡಿಯುವ ನೀರು ಸರಬರಾಜು ಮಾಡಬೇಕಾದ ಯೋಜನೆ ವಾರದಲ್ಲಿ ಮೂರು ದಿನ ಮಾತ್ರ ಬರುತ್ತಿದೆ. ಇದರಿಂದ ಗ್ರಾಪಂ ಅಧಿಕಾರಿಗಳು ಅನಿವಾರ್ಯವಾಗಿ ಕೊಳವೆ ಬಾವಿ ನೀರು ಸರಬರಾಜು ಮಾಡುತ್ತಿದ್ದಾರೆ.
ಕೋವಿಡ್ ವೈರಸ್ ಭೀತಿಯ ನಡುವೆ ಸಮೀಪದ ಅಬ್ಬಿಗೇರಿ ಗ್ರಾಮಕ್ಕೆ ಮತ್ತೂಂದು ಕಂಟಕ ಪ್ರಾರಂಭವಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪದೇ ಪದೇ ಕೈ ಕೊಡುತ್ತಿರುವುದರಿಂದ ಅನಿವಾರ್ಯವಾಗಿ ಸ್ಥಳೀಯ ಆಡಳಿತ ಕೊಳವಿ ಬಾವಿಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಪೂರೈಕೆ ಮಾಡುತ್ತಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಸಿದೆ.
ಫ್ಲೋರೈಡ್‌ಯುಕ್ತ ನೀರು ಕುಡಿದರೆ ಸಾಕು, ನಿಶಕ್ತರಾದಂತಾಗಿ ಕೈ ಕಾಲುಗಳು ಹಿಡಿದುಕೊಂಡು ಸರಿಯಾಗಿ ನಡೆಯೊಕ್ಕಾಗಲ್ಲ.ಕೆಲಸ ಮಾಡಕ್ಕಾಗಲ್ಲ. ಅಲ್ಲದೇ ಚಿಕ್ಕ ಮಕ್ಕಳೂ ಸೇರಿ ಪ್ರತಿಯೊಬ್ಬರ ಕೈ ಕಾಲು, ನರ-ನಾಡಿಗಳು ಹಿಡಿದುಕೊಳ್ಳುತ್ತದೆ. ಆದರೆ, ಈ ಮಹಾಮಾರಿ ಕೊರೊನಾ ವೈರಸ್ ನಡುವೆ ಸದ್ದಿಲ್ಲದೇ ನಾಗರಿಕರ ದೇಹ ಸೇರಿ ಆರೋಗ್ಯವನ್ನು ಹದಗೆಡಿಸುತ್ತಿರುವುದು ಫ್ಲೋರೈಡ್‌ಯುಕ್ತ ನೀರು ಕುಡಿದು ಜನರು ಆಸ್ಪತ್ರೆಗಳತ್ತ ದಾಪುಗಾಲು ಹಾಕುತ್ತಿದ್ದಾರೆ.
ಕಳೆದ ನಾಲ್ಕೈದು ತಿಂಗಳಿನಿಂದ ಬಹುಗ್ರಾಮ ಕುಡಿಯುವ ನೀರು ಅಬ್ಬಿಗೇರಿ ಗ್ರಾಮಕ್ಕೆ ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಅಲ್ಲದೇ ಸುತ್ತಮುತ್ತಲಿನ ಜಲಮೂಲಗಳು ಬೇಸಿಗೆಯಲ್ಲಿ ಬತ್ತುವುದರಿಂದ ಗ್ರಾಮ ಮತ್ತು ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಕೊಳವೆಬಾವಿಗಳು ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿಯುತ್ತಿವೆ. ಹನಿ ನೀರಿಗೂ ಬರ. ಇದ್ದ ನೀರು ಫ್ಲೋರೈಡ್ ಯುಕ್ತ ಅಂಶಗಳಿಂದ ಸೇವಿಸಲು ಅಷ್ಟೇ ಅಲ್ಲ ಸ್ನಾನ ಮಾಡಲು, ಬಟ್ಟೆ ತೊಳೆಯಲು ಕೂಡಾ ಯೋಗ್ಯವಲ್ಲದ ನೀರನ್ನು ಸೇವಿಸುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ: ನೀರು ಸಬರಾಜು ಬಗ್ಗೆ ಗ್ರಾಪಂ ಸದಸ್ಯರ ಪ್ರಶ್ನೆಗೆ ಅಧಿಕಾರಿಗಳು ಉಡಾಫೇ ಉತ್ತಾರ ಹೇಳುತ್ತಿದ್ದಾರೆ. ಗ್ರಾಮಸ್ಥರ ನೋವುಗಳನ್ನು ಆಲಿಸಿದ ಪಿಡಿಒ ಹಾಗೂ ಸದಸ್ಯರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಧಿಕಾರಿಗಳಿಗೆ ಲಿಖೀತ ಹಾಗೂ ಮೌಖೀಕವಾಗಿ ಅರ್ಜಿಗಳನ್ನು ಸಲ್ಲಿಸಿದರೂ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಅಲ್ಲದೇ ಈ ಕುಡಿಯುವ ನೀರಿನ ಯೋಜನೆ ಕೇವಲ ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿದ್ದರು ಅಧಿಕಾರಿಗಳ ವರ್ತನೆಯಿಂದ ಪಟ್ಟಣ, ನಗರಳಿಗೆ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಗ್ರಾಮಕ್ಕೆ ನೀರು ಕಡಿಮೆಯಾಗುತ್ತಿದೆ.
ಅಬ್ಬಿಗೇರಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಹೊಳೆ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಅಲ್ಲದೇ ಗ್ರಾಮಸ್ಥರಲ್ಲಿ ಕಾಲು, ಮೈ, ಕೈ ನೋವಿನಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಗದಗ ನಗರ ಜರ್ಮನ್ ಆಸ್ಪತ್ರೆಯಲ್ಲಿ ನಾಲ್ಕೈದು ಜನ ಚಿಕಿತ್ಸೆ ಕೂಡಾ ಪಡೆದುಕೊಂಡಿದ್ದಾರೆ. ಕೂಡಲೇ ಬಹುಗ್ರಾಮ ಕುಡಿಯುವ ನೀರನ್ನು ಗ್ರಾಮಕ್ಕೆ ಸಮರ್ಪಕವಾಗಿ ಪೂರೈಸಬೇಕು. –
ಸುರೇಶ ನಾಯ್ಕರ, ಗ್ರಾಪಂ ಸದಸ್ಯರು.
ಬಹುಗ್ರಾಮ ಕುಡಿಯುವ ನೀರು ಸರಬರಾಜು ಮಾಡಬೇಕಾದರೆ ವಿದ್ಯುತ್ ನಿರಂತರವಾಗಿರಬೇಕು. ಅಲ್ಲದೇ ಕೆಲವೊಂದು ನಗರಗಳಲ್ಲಿ ಮಳೆ, ಗಾಳಿಯಿಂದ ವಿದ್ಯುತ್ ಸ್ಥಗಿತಗೊಳ್ಳುತ್ತಿರುವುದರಿಂದ ನೀರು ಸರಬರಾಜು ಮಾಡಲು ಕಷ್ಟವಾಗುತ್ತಿದೆ. –
ರಾಜ್ ದೇಸಾಯಿ,ಪ್ರೊಜೆಕ್ಟ್ ಮ್ಯಾನೇಜರ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪದೇ ಪದೇ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಇದರಿಂದಾಗಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದಕ್ಕೆ ತೊಂದರೆಯಾಗುತ್ತಿದೆ. ಅಲ್ಲದೇ ಗ್ರಾಮದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಸದ್ಯ ಕೊಳವೆ ಬಾವಿ ನೀರು ಬಿಡಲಾಗುತ್ತಿದೆ. ಆದರೆ, ಜನರು ನೀರನ್ನು ಬಳಸುವಾಗ ಬಿಸಿ ಮಾಡಿಕೊಂಡು ಕುಡಿಯಬೇಕು.
-ಶಿವನಗೌಡ ಮೆಣಸಗಿ, ಅಬ್ಬಿಗೇರಿ ಪಿಡಿಒ.
–ಸಿಕಂದರ್ ಎಂ. ಆರಿ