Advertisement

ಜ್ವರ ಪರೀಕ್ಷಾ ಕೇಂದ್ರ-ಕ್ಯಾಂಟಿನ್‌ ಅಕ್ಕ-ಪಕ್ಕ!

09:37 AM Jul 04, 2020 | Suhan S |

ಹರಪನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕೋವಿಡ್ ಜ್ವರ ತಪಾಸಣಾ ಕೇಂದ್ರ ಮತ್ತು ಸಾರ್ವಜನಿಕರು ಆಹಾರ ಸೇವಿಸುವ ಕ್ಯಾಂಟಿನ್‌ ಅಕ್ಕ-ಪಕ್ಕದಲ್ಲಿಯೇ ಇವೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಬಂಧಿಕರಿಗೆ ಆತಂಕ ಶುರುವಾಗಿದೆ.

Advertisement

ಆಸ್ಪತ್ರೆಯ ನಾಗರಿಕ ಸೌಲಭ್ಯಗಳ ಸಂಕೀರ್ಣ ಕಟ್ಟಡದಲ್ಲಿ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ತಿಂಡಿ, ಊಟ, ಟೀ ಸೇವಿಸುವ ಉದ್ದೇಶದಿಂದ ಉಪಾಹಾರ ಕೇಂದ್ರ ತೆರೆಯಲಾಗಿದೆ. ಆದರೆ ಇದೀಗ ಕ್ಯಾಂಟಿನ್‌ ಪಕ್ಕದಲ್ಲಿಯೇ ಕೊರೊನಾ ಜ್ವರ ತಪಾಸಣಾ ಕೇಂದ್ರ ತೆರೆಯಲಾಗಿದ್ದು, ಇಲ್ಲಿಂದಲೇ ಸೋಂಕಿತರ ಸಂಪರ್ಕದಲ್ಲಿದ್ದವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಈಚೆಗೆ ಕೋವಿಡ್ ಪಾಸಿಟಿವ್‌ ವರದಿ ಬಂದಿರುವ ಅರಸೀಕೆರೆ ಪೊಲೀಸ್‌ ಠಾಣೆ ಪೆದೆಗಳ ಗಂಟಲು ದ್ರವ ಇಲ್ಲಿಂದಲೇ ಸಂಗ್ರಹಿಸಿ ಕಳಿಸಲಾಗಿತ್ತು. ಅಕ್ಕ-ಪಕ್ಕದಲ್ಲಿಯೇ ಕ್ಯಾಂಟಿನ್‌ ಮತ್ತು ತಪಾಸಣಾ ಕೇಂದ್ರ ತೆರೆದಿರುವುದರಿಂದ ಸೋಂಕು ಹರಡಬಹುದು ಎಂಬ ಭಯದಿಂದ ಕ್ಯಾಂಟಿನ್‌ಗೆ ಹೋಗಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ರೋಗಿಗಳ ಸಂಬಂಧಿಕರು ತಿಂಡಿ, ಊಟಕ್ಕಾಗಿ ಪರದಾಟ ನಡೆಸುವಂತಾಗಿದೆ.  ಸುಮಾರು 1 ಕಿಮೀ ದೂರವಿರುವ ಪ್ರವಾಸಿ ಮಂದಿರ ವೃತ್ತಕ್ಕೆ ಊಟ ಹುಡುಕಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. 100 ಹಾಸಿಗೆಗಳ ದೊಡ್ಡ ಆಸ್ಪತ್ರೆಯಲ್ಲಿ ಜ್ವರ ತಪಾಸಣಾ ಕೇಂದ್ರ ತೆರೆಯಲು ಸ್ಥಳವಿಲ್ಲದಿರುವುದು ದುರಂತ ಎನ್ನುವಂತಾಗಿದೆ.

ಕ್ಯಾಂಟಿನ್‌ ಪಕ್ಕದಲ್ಲಿಯೇ ಜ್ವರ ತಪಾಸಣಾ ಕೇಂದ್ರವಿರುವುದರಿಂದ ಅಲ್ಲಿಗೇ ಹೋಗಲು ಭಯವಾಗುತ್ತಿದೆ. ಆದ್ದರಿಂದ ದೂರದಲ್ಲಿ ಹೋಗಿ ಊಟ, ತಿಂಡಿ ಮುಗಿಸಿಕೊಂಡು ಬರುತ್ತಿದ್ದೇವೆ. ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರಿಗೂ ಭಯವಾಗುತ್ತಿದೆ ಎನ್ನುತ್ತಾರೆ ರೋಗಿಯ ಸಂಬಂದಿ ದುರುಗಪ್ಪ. ಈ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿ, ಪ್ರಭಾರಿ ತಾಲೂಕು ಆರೋಗ್ಯಾಧಿಕಾರಿ ಆಗಿರುವ ಡಾ|ಶಿವಕುಮಾರ ಅವರು, ಆಸ್ಪತ್ರೆಯಲ್ಲಿ ಕೋಣೆಗಳು ಖಾಲಿ ಇವೆಯಾ ಎಂದು ಪರಿಶೀಲನೆ ನಡೆಸುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಕೂಡಲೇ ಜ್ವರ ತಪಾಸಣಾ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next