Advertisement

ಮಕ್ಕಳಿಗೆ ಫ್ಲೂ ಆತಂಕ

11:02 PM Sep 19, 2021 | Team Udayavani |

ಬೆಂಗಳೂರು: ಹವಾಮಾನ ಬದಲಾಗುತ್ತಿರುವುದರಿಂದ ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮಿನಂಥ ಅನಾರೋಗ್ಯ ಕಾಣಿಸಿಕೊಳ್ಳುತ್ತಿದ್ದು, ಹೆತ್ತವರಲ್ಲಿ ಆತಂಕ ಉಂಟುಮಾಡಿದೆ. ಸರಕಾರವೂ 1ರಿಂದ 5ನೇ ತರಗತಿ ಪುನರಾರಂಭದ ಯೋಚನೆಯಿಂದ ಹಿಂದೆ ಸರಿದಿದೆ.

Advertisement

ಕೊರೊನಾ ನಡುವೆ ಈ ಸಮಸ್ಯೆ ಕಾಣಿಸಿಕೊಂಡಿದೆ.  ಈ ನಡುವೆ ಕೇಂದ್ರ ಸರಕಾರವು ಕರ್ನಾಟಕ ಸಹಿತ 11 ರಾಜ್ಯಗಳಿಗೆ ಹೊಸ ಮಾದರಿಯ ಡೆಂಗ್ಯೂ ಜ್ವರದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.

ಈ ನಡುವೆ ಜನರು ಮಕ್ಕಳಿಗೆ ಫ್ಲೂ ಲಸಿಕೆ ಹಾಕಿಸಲು ಮುಂದಾಗಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗದೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದ್ದಾರೆ. ಮಕ್ಕಳಿಗೆ ಜ್ವರ, ಕೆಮ್ಮು ಬಂದ ಕೂಡಲೇ ಆಸ್ಪತ್ರೆಗೆ ದೌಡಾಯಿಸಿ ಎಲ್ಲ  ಬಗೆಯ ವೈದ್ಯಕೀಯ ಪರೀಕ್ಷೆ ಮಾಡಿಸುತ್ತಿದ್ದಾರೆ.

ಒಂದೂವರೆ ವರ್ಷದ ಬಳಿಕ ತರಗತಿಗಳು ಆರಂಭವಾಗಿವೆ. ಇದುವರೆಗೆ ಮನೆಯಲ್ಲಿ ಸುರಕ್ಷಿತವಾಗಿದ್ದ ಮಕ್ಕಳು ಹೊರ ಜಗತ್ತಿಗೆ ತೆರೆದುಕೊಂಡಿದ್ದಾರೆ. ಹೀಗಾಗಿ ಜ್ವರ, ಕೆಮ್ಮು, ನೆಗಡಿ ಸಮಸ್ಯೆ ಹೆಚ್ಚಿದೆ. ಗಾಬರಿಯಾಗಬೇಕಿಲ್ಲ , ಎಚ್ಚರಿಕೆ ಇರಲಿ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.

ಎರಡು ತಿಂಗಳು ಇರುತ್ತದೆ:ಮಳೆಗಾಲ ಮುಗಿದು ಚಳಿಗಾಲಕ್ಕೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ತಾಪಮಾನ ಹಠಾತ್‌ ಏರುತ್ತದೆ. ಆ ಸಂದರ್ಭದಲ್ಲಿ ಮಕ್ಕಳಿಗೆ  ಫ್ಲೂ ಕಾಣಿಸಿಕೊಳ್ಳಬಹುದು. ಅನಗತ್ಯ ಗಾಬರಿ ಬೇಡ, ಆದರೆ ಎಚ್ಚರಿಕೆ ಇರಲಿ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Advertisement

ಆರೋಗ್ಯ ಇಲಾಖೆಯಿಂದಲೇ ಲಸಿಕೆ :

ರಾಜ್ಯ ಆರೋಗ್ಯ ಇಲಾಖೆ ವತಿಯಿಂದಲೇ 0-5 ವರ್ಷ ವಯೋಮಿತಿಯ ಮಕ್ಕಳಿಗೆ ಲಸಿಕೆ ನೀಡಲು ಮುಂದಾಗಿದೆ. ಅದಕ್ಕೆ ಪೂರಕವಾಗಿ ಫ್ಲೂ ಲಸಿಕೆ ವಿತರಣೆಯನ್ನು ಲಸಿಕೆ ಅಭಿಯಾನದ ವ್ಯಾಪ್ತಿಗೆ ತರಲಾಗಿದೆ. 15 ದಿನಗಳ ಅಂತರದಲ್ಲಿ ಎರಡು ಡೋಸ್‌ ಮತ್ತು 40ನೇ ದಿನಕ್ಕೆ ಬೂಸ್ಟರ್‌ ಡೋಸ್‌ ಸೇರಿ ಒಟ್ಟು ಮೂರು ಡೋಸ್‌ಗಳ ಫ್ಲೂ ಲಸಿಕೆ ಮುಂದಿನ ವಾರದಿಂದ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್‌ ಚಂದ್ರ ತಿಳಿಸಿದ್ದಾರೆ.

ಕೇಂದ್ರದಿಂದ ಡೆಂಗ್ಯೂ ಎಚ್ಚರಿಕೆ :

ಹೊಸದಿಲ್ಲಿ: ಹೊಸದಾಗಿ ಕಾಣಿಸಿಕೊಂಡಿರುವ ಸೀರೋಟೈಪ್‌-2 ಎಂಬ ಡೆಂಗ್ಯೂ ಆತಂಕ ಮೂಡಿಸಿದೆ. ಹೀಗಾಗಿ ಕೇಂದ್ರ ಸರಕಾರ ಕರ್ನಾಟಕ ಸೇರಿ 11 ರಾಜ್ಯಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ. ಸಹಾಯವಾಣಿ ರೂಪಿಸಿ, ಪರೀಕ್ಷಾ ಕಿಟ್‌, ಔಷಧಗಳನ್ನು ಸಂಗ್ರಹಿಸಿ ಇರಿಸಬೇಕು ಎಂದು ಸಲಹೆ ನೀಡಿದೆ.

ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಮತ್ತು ತೆಲಂಗಾಣಗಳಿಗೆ ಈ ಎಚ್ಚರಿಕೆ ನೀಡಲಾಗಿದೆ.

ಮಕ್ಕಳ ವೈದ್ಯರ ಸಲಹೆಗಳೇನು? :

  • ಎರಡಕ್ಕಿಂತ ಹೆಚ್ಚು ದಿನ ಜ್ವರದ ಲಕ್ಷಣ ಇದ್ದರೆ ಕೊರೊನಾ, ಡೆಂಗ್ಯೂ ಪರೀಕ್ಷೆ ಮಾಡಿಸಿ.
  • ಜ್ವರ, ಕೆಮ್ಮು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆ/ ಐಸಿಯು ದಾಖಲಾತಿಗೆ ಮುಂದಾಗಬೇಡಿ.
  • ಆರೋಗ್ಯವಂತ ಮಕ್ಕಳಿಗೂ ಸಾವಿರಾರು ರೂ. ನೀಡಿ ಫ್ಲೂ ಲಸಿಕೆ ಕೊಡಿಸುವ ಬದಲು ಕೊರೊನಾ ಮುಂಜಾಗ್ರತೆ ಪಾಲಿಸಿದರೆ ಫ್ಲೂ ತಗಲುವುದಿಲ್ಲ.
  • ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಯೋಗ, ವ್ಯಾಯಾಮ, ಆಹಾರ ಕ್ರಮ ಪಾಲಿಸಿ.

ಇದು ಋತುಮಾನ ಬದಲಾದಾಗ ಬರುವ ಫ್ಲೂ. ಅನಗತ್ಯ ಗಾಬರಿ ಬೇಡ. ಮುಂದಿನ ವಾರದಿಂದ ಐದು ವರ್ಷದೊಳಗಿನ ಮಕ್ಕಳಿಗೆ ನ್ಯೂಮೋಕೋಕಲ್‌ ಕಾಂಜುಗೈಟ್‌ ಲಸಿಕೆ ನೀಡಿ ಫ್ಲೂ ಹಾನಿಯನ್ನು ತಪ್ಪಿಸಲಾಗುವುದು. – ಡಾ| ತ್ರಿಲೋಕ್‌ ಚಂದ್ರ,  ಆರೋಗ್ಯ ಇಲಾಖೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next