Advertisement

ನಾಳೆಯಿಂದ ನಗರದಲ್ಲಿ ಫಲ ಪುಷ್ಪ ಪ್ರದರ್ಶನ

03:49 PM Jan 25, 2020 | Suhan S |

ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ 26ರಿಂದ ಫೆ.2 ರವರೆಗೆ 2020ನೇ ಸಾಲಿನ ಫಲಪುಷ್ಪ ಪ್ರದರ್ಶನ ಮಾಘ ಸಂಭ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌ ತಿಳಿಸಿದರು.

Advertisement

ತೋಟಗಾರಿಕೆ ಇಲಾಖೆ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಟಗಾರಿಕೆ ಕಚೇರಿ ಆವರಣ ಹಾಗೂ ಕಾವೇರಿ ವನದಲ್ಲಿ ಮನಸೂರೆಗೊಳ್ಳುವ ವಿವಿಧ ರಂಗಿನ ಹೂಗಳು, ವಿವಿಧ ತರಕಾರಿಗಳು ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಸಮಗ್ರ ಮಾಹಿತಿ ಫಲಪುಷ್ಪ ಪ್ರದರ್ಶನದಲ್ಲಿ ಇರುತ್ತದೆ ಎಂದು ತಿಳಿಸಿದರು.

ತರಕಾರಿ ಬಳಸಿ ವಿವಿಧ ಕಲಾಕೃತಿಗಳ ಕೆತ್ತನೆಗಳು, ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಮೇಳ ಹಾಗೂ ಸಮಗ್ರ ಕೃಷಿ ಪದ್ಧತಿ ಕುರಿತು ಪ್ರಾತ್ಯಕ್ಷತೆ, ಮೀನುಗಾರಿಕೆ ಇಲಾಖೆಯಿಂದ ವಿವಿಧ ಅಲಂಕಾರಿಕ ಮೀನುಗಳ ಪ್ರದರ್ಶನ, ಪಶುಪಾಲನಾ ಇಲಾಖೆಯಿಂದ ಬನ್ನೂರು ಕುರಿಗಳ ಪ್ರದರ್ಶನ. ಜಿಲ್ಲಾ ವ್ಯಾಪ್ತಿಯ ತಾಲೂಕುಗಳಲ್ಲಿ ರೈತರು ಬೆಳೆದಿರುವ ವಿವಿಧ ಹಣ್ಣು, ತರಕಾರಿ ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಪ್ರದರ್ಶಿಕೆಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.

ಪ್ರಾಯೋಗಿಕ ಪ್ರದರ್ಶನ: ನಗರವಾಸಿ ಹಾಗೂ ಗ್ರಾಮೀಣ ಭಾಗದ  ಜನಸಾಮಾನ್ಯರು ತಮ್ಮ ಮನೆಯಂಗಳ ಅಥವಾ ಕೈತೋಟದ ಕಡಿಮೆ ಸ್ಥಳದಲ್ಲಿ ಕೆಲವು ಆಯ್ದ ತರಕಾರಿ ಗಿಡಗಳನ್ನು ಬೆಳೆದು ಉಪಯೋಗಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವ್ಯವಸ್ಥಿತವಾದ ಮಾದರಿ ತರಕಾರಿ ಪೌಷ್ಟಿಕಾಂಶ ಕೈ ತೋಟವನ್ನು ಅಭಿವೃದ್ಧಿಪಡಿಸಿ ಪ್ರದರ್ಶನಕ್ಕೆ ಬರುವ ಸಾರ್ವಜನಿಕರಿಗೆ ಪೂರಕ ಜ್ಞಾನ ನೀಡುವ ಪ್ರಾಯೋಗಿಕ ಪ್ರದರ್ಶನ ಇದೆ ಎಂದು ವಿವರಿಸಿದರು.

ಹೆಚ್ಚು ಪೌಷ್ಟಿಕಾಂಶವುಳ್ಳ ಸಿರಿಧಾನ್ಯಗಳ ಕೃಷಿ ಹಾಗೂ ಸಾವಯವ ಕೃಷಿಯ ಬಗ್ಗೆ ರೈತರಿಗೆ ಮತ್ತು ಸಾವಯವ ಉತ್ಪ$ನ್ನ ಹಾಗೂ ಸಿರಿಧಾನ್ಯಗಳ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲು ಸಾವಯವ ಮತ್ತು ಸಿರಿಧಾನ್ಯಗಳ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

Advertisement

ತೋಟಗಾರಿಕೆ ಮತ್ತ ಕೃಷಿ ಆಧಾರಿತ ಚಟುವಟಿಕೆಗಳಿಗೆ ಸಂಬಂಧಿಸಿದ ಹಾಗೂ 30ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು. ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳಿಂದ ತಯಾರು ಮಾಡುವ ಆಹಾರ ಮತ್ತು ತಿನಿಸುಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.

ಜ.26ರ ಮಧ್ಯಾಹ್ನ 12.30ಕ್ಕೆ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ನಡೆಯುವ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಉದ್ಘಾಟಿಸುವರು. ವಸತಿ ಹಾಗೂ ತೋಟಗಾರಿಕೆ ಸಚಿವ ವಿ. ಸೋಮಣ್ಣ, ಶಾಸಕ ಎಂ.ಶ್ರೀನಿವಾಸ್‌, ಜಿಪಂ ಅಧ್ಯಕ್ಷೆ ನಾಗರತ್ನ, ಸಂಸದೆ ಸುಮಲತಾ ಅಂಬರೀಶ್‌, ಜಿಲ್ಲಾಧಿಕಾರಿ ಡಾ. ವೆಂಕಟೇಶ್‌, ಜಿಪಂ ಸಿಇಒ ಕೆ.ಯಾಲಕ್ಕಿಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ಭಾಗವಹಿಸುವರು. ಪ್ರತಿದಿನ ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ ಪ್ರದರ್ಶನ ವೀಕ್ಷಿಸಬಹುದು ಹಾಗೂ ಪ್ರತಿದಿನ ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಗೋಷ್ಠಿಯಲ್ಲಿ ಜಿಪಂ ಸಿಇಒ ಕೆ.ಯಾಲಕ್ಕಿಗೌಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್‌.ರಾಜು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಕೆ.ಎಂ. ರೇಖಾ, ತೋಟಗಾರಿಕೆ ಸಂಘದ ಉಪಾಧ್ಯಕ್ಷ ಡಾ. ಉಮೇಶ್‌ಚಂದ್ರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next