ಹಲವಾರು ಆಸೆ ಕನಸುಗಳನ್ನು ಹೊತ್ತು ಬೆಂಗಳೂರಿಗೆ ಪ್ರಯಾಣ ಬೆಳೆಸುವವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚುತ್ತಿದೆ. ಅದರಲ್ಲೂ ಅಧ್ಯಯನಕ್ಕೆಂದು ಬರುವ ಎಳೆ ಮನಸ್ಸುಗಳಿಗೆ ಬೆಂಗಳೂರು ಅವಕಾಶಗಳ ಬಾಗಿಲಿದ್ದ ಹಾಗೆ. ಮಸ್ತಿ ಮಾಡಲೆಂದೇ ಬರುವವರೂ ಇದ್ದಾರೆ. ಇಲ್ಲಿನ ಪಾರ್ಕ್, ಮಾಲ್‌ಗಳು, ಗಗನಚುಂಬಿ ಕಟ್ಟಡಗಳು ನಮ್ಮಂಥ ಹಳ್ಳಿ ಜನರಿಗೆ ವಿದೇಶ ಪ್ರವಾಸದಂತೆ ಭಾಸವಾಗುತ್ತದೆ.
ಶಾಪಿಂಗ್ ಮಾಡುವವರ ಸ್ವರ್ಗವೆಂದೇ ಪರಿಗಣಿತವಾದ ಎಂ.ಜಿ ರೋಡ್‌ನಲ್ಲಿ ನನಗೊಂದು ವಿಚಿತ್ರ ಅನುಭವವಾಯಿತು. ರವಿವಾರ ಕಾಲೇಜಿಗೆ ರಜೆ ಇದ್ದಿದ್ದರಿಂದ ನನ್ನ ಸ್ನೇಹಿತೆಯರೆಲ್ಲ ಎಂ.ಜಿ ರೋಡ್‌ಗೆ ಹೋಗುವುದೆಂದು ತೀರ್ಮಾನಿಸಿದರು. ಮೆಟ್ರೊ ರೈಲಿನಲ್ಲಿ ಹೊರಟೆವು. ನನಗೆ ಅದೇ ಮೊದಲ ಮೆಟ್ರೊ ರೈಲು ಪ್ರಯಾಣ. ಸೆಲ್ಫಿ ಕ್ಲಿಕ್ಕಿಸಲು ಇದಕ್ಕಿಂತ ಒಳ್ಳೆಯ ಕಾರಣ ಬೇಕೆ? ಅರ್ಧ ಗಂಟೆಯೊಳಗೆ ಎಂ.ಜಿ ರೋಡ್ ತಲುಪಿದೆವು.
ಅಲ್ಲಿನ ಜನರ ಗಮ್ಮತ್ತೇ ಬೇರೆ ಬಿಡಿ. ಯಾರೊಬ್ಬರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಓಡಾಡುತ್ತಿರುತ್ತಾರೆ. ಅವರ ಬಟ್ಟೆ, ಹಾವಭಾವಗಳನ್ನು ದಿಟ್ಟಿಸುತ್ತಾ, ಕಣ್ಣು ಕುಕ್ಕುವ ಅಂಗಡಿ ಮಳಿಗೆಗಳನ್ನು ಬಾಯಿ ಬಿಟ್ಟುಕೊಂಡು ನೋಡುತ್ತಾ ಹೋಗುತ್ತಿರುವಾಗ ಪುಟ್ಟ ಹುಡುಗಿಯೊಬ್ಬಳು ನಮ್ಮನ್ನು ತಡೆದಳು. ತಲೆ ತಗ್ಗಿಸಿ ನೋಡಿದೆ. “ಅಕ್ಕ ಹೂ ತಗೋ, ಬರೀ 20 ರೂಪಾಯಿ, ಊಟ ಮಾಡಿಲ್ಲ ತಗೋಟ ಎಂದು ಗಂಟು ಬಿದ್ದಳು.
“ನನಗೆ ಹೂವು ಬೇಡಮ್ಮ, ಅದನ್ನು ತಗೊಂಡು ನಾನೇನು ಮಾಡಲಿ?’ ಎಂದು ಮುಂದೆ ಹೋದೆ. ಆದರೆ ಅವಳ ಹಸಿವು ನಮ್ಮ ಹೆಜ್ಜೆಗೆ ಅಡ್ಡಗಾಲಿಕ್ಕಿತ್ತು. ನಮ್ಮಿಬ್ಬರ ಮಾತಿನ ಚಕಮಕಿಯಲ್ಲಿ ಜಯ ಅವಳದಾಯಿತು.
ನನಗೆ ಹೂವಿನ ಅವಶ್ಯಕತೆ ಇಲ್ಲದಿದ್ದರಿಂದ ಆ ಪುಟ್ಟ ಹುಡುಗಿಗೆ “ಈ 20 ರೂಪಾಯಿ ತಗೋ. ನನಗೆ ಹೂವು ಬೇಡ ಎಂದು 20 ರೂಪಾಯಿಯನ್ನು ಅವಳ ಕೈಲಿಟ್ಟು ಮುಂದೆ ಹೋದೆ. ಅಷ್ಟರೊಳಗೆ ಆ ಪುಟ್ಟ ಹುಡುಗಿ ಹಿಂದಿನಿಂದ ಓಡಿ ಬಂದು ಹೂವನ್ನು ಕೈಲಿಟ್ಟು ಹೋದಳು. ಮುಖದಲ್ಲೊಂದು ನಿಸ್ವಾರ್ಥ ಪ್ರಾಮಾಣಿಕತೆಯ ನಗುವೊಂದಿತ್ತು. ನಾನು ಹಿಂದೆ ತಿರುಗಿ ನೋಡುತ್ತಲೇ ಇದ್ದೆ. ಆ ಪುಟ್ಟ ಹುಡುಗಿ, ಮಹಾತ್ಮ ಗಾಂಧಿ ರಸ್ತೆಯಲ್ಲಿ ಪ್ರಾಮಾಣಿಕತೆಯ ಪಾಠವನ್ನು ಸದ್ದಿಲ್ಲದೆ ಹೇಳಿಕೊಟ್ಟು ಹೋಗಿದ್ದಳು.
ಅಕ್ಷತ ಕುಲಕರ್ಣಿ, ಹೊಸಪೇಟೆ