ಚಿಕ್ಕಮಗಳೂರು : ಕಾಂಗ್ರೆಸ್ ನವರಿಗೆ ಚೆಂಡುಹೂವು ಇನ್ನು ಪರ್ಮನೆಂಟ್ ಎಂದು ವಿಭಿನ್ನ ಪ್ರತಿಭಟನೆಯ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಶುಕ್ರವಾರ ವ್ಯಂಗ್ಯವಾಡಿದ್ದಾರೆ.
ಬಜೆಟ್ ಮಂಡನೆಯ ವೇಳೆ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರಿಂದ ಚೆಂಡುಹೂವು ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ, ಕಮಲವೇ ಮತ್ತೆ ಅರಳುವುದು. ಕಾಂಗ್ರೆಸ್ ನವರು ಕಿವಿಗೆ ಚೆಂಡುಹೂವು ಇಟ್ಟುಕೊಂಡೇ ಓಡಾಡಬೇಕು. ಜನರು ಚೆಂಡುಹೂವು ಇಡಿಸುವ ಬದಲು, ನಾವೇ ಇಟ್ಟುಕೊಳ್ಳೋಣ ಎಂದು ಕಿವಿಗೆ ಇಟ್ಟುಕೊಂಡಿದ್ದಾರೆ. ಬಿಜೆಪಿಯೇ ಗೆಲ್ಲುವುದು ಎಂದು ಕಾಂಗ್ರೆಸ್ ಪರೋಕ್ಷವಾಗಿ ಒಪ್ಪಿಕೊಂಡಿದೆ. ಚೆಂಡುಹೂವನ್ನು ಇಟ್ಟುಕೊಂಡು ರಾಜ್ಯದ ಜನತೆಯ ಹಿತವನ್ನು ಬಯಸಿದ್ದಾರೆ ಎಂದರು.
ರಾಜ್ಯದ ಹಿತ ಬಿಜೆಪಿಯ ಗೆಲುವಿನ ಜೊತೆಗೆಯಿದೆ. ರಾಜ್ಯದ ಹಿತವನ್ನ ಕಾಂಗ್ರೆಸ್ ಬಯಸಿದ್ದಕ್ಕೆ, ಬಿಜೆಪಿಯ ಗೆಲುವನ್ನು ಬಯಸಿದ್ದಕ್ಕೆ ಕಾಂಗ್ರೆಸ್ ಗೆ ಧನ್ಯವಾದ ಹೇಳುತ್ತೇನೆ ಎಂದರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬಜೆಟ್ ಆಶಯ ಬಿಂಬಿಸುವ ಬಜೆಟ್. ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಿರುವ ಬಜೆಟ್. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಗೃಹಿಣಿ ಶಕ್ತಿ ಯೋಜನೆ, ಮೂಲಸೌಲಭ್ಯ, ನೀರಾವರಿಗೆ ಕೊಟ್ಟಿರುವ ವಿಶೇಷ ಯೋಜನೆ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಇದು ಅಭಿವೃದ್ಧಿ ಕರ್ನಾಟಕದ ಆಶಯದ ಬಜೆಟ್ ಎಂದರು.
ದತ್ತಪೀಠ ಅಭಿವೃದ್ಧಿ ಪ್ರಾಧಿಕಾರ ಮಾಡಿ ಅಂತ ಕೇಳಿದ್ದೆ, ಅದರಲ್ಲಿರುವ ತಾಂತ್ರಿಕ ತೊಡಕಿನ ಬಗ್ಗೆ ನನಗೆ ತಿಳಿಸಿದ್ದಾರೆ. ತಾಂತ್ರಿಕ ತೊಡಕು ನಿವಾರಿಸಿ ದತ್ತಪೀಠ ಅಭಿವೃದ್ಧಿ ಪ್ರಾಧಿಕಾರ ಮಾಡಿಸುತ್ತೇವೆ ಎಂದರು.