Advertisement

ಹೂವಿನ ಫೇಸ್‌ಪ್ಯಾಕ್‌

10:38 AM Feb 08, 2017 | Harsha Rao |

ಮೊದಲೆಲ್ಲ ಹೂವು ಅಂದ್ರೆ ಹೂವಿನಂಥ ಹುಡುಗಿಯ ಕಣ್ಣರಳುತ್ತಿತ್ತು. ಅರಿವಿಲ್ಲದಂತೇ ಕೈ ಹೂವನ್ನು ಕಿತ್ತು ಮುಡಿಗಿಟ್ಟುಕೊಳ್ಳುತ್ತಿತ್ತು. ಈಗ ಹೂ ಮುಡಿಯೋ ಹುಡುಗಿಯರು ಬಹಳ ಕಡಿಮೆ. ಆದರೂ ಹೂ ಕಂಡರೆ ಮುಖ ತಿರುಗಿಸಲ್ಲ ನಮ್ಮ ಹುಡುಗಿಯರು. ಅವರಿಗೆ ಹೂವು ಕಣ್ಣೆದುರಿಗಿದ್ದರೆ ಖುಷಿ, ತನಗೆ ಕಾಣದಂತೆ ತಲೆಗೆ ಮುಡಿಯಲು ಬೇಜಾರು. ಈಗ ಹುಡುಗಿಯರಿಗೆ. ಹೆಂಗಸರಿಗೆ, ವಯಸ್ಸಾದವರಿಗೆ, ಟೋಟಲ್ಲಾಗಿ ಎಲ್ಲ ವಯೋಮಾನದ ಹೆಣ್ಣುಜಾತಿಗೆ ಇಷ್ಟವಾಗುವಂತ ಹೂಗಳ ಫೇಸ್‌ಪ್ಯಾಕ್‌ಗಳು ಬಂದಿವೆ. ಹೂವಿನ ಕಂಪು ಸವಿಯುತ್ತ ನೀವು ಫೇಶಿಯಲ್‌ ಮಾಡಿಸಿಕೊಳ್ಳಬಹುದು. 

Advertisement

1. ಗುಲಾಬಿ ಫೇಸ್‌ ಪ್ಯಾಕ್‌
ಎರಡು ತಾಜಾ ಗುಲಾಬಿಯ ಪಕಳೆಗಳನ್ನು 15 ಚಮಚ ನೀರಿನಲ್ಲಿ ಅರ್ಧ ಗಂಟೆ ನೆನೆಸಬೇಕು. ಬಳಿಕ ಅದನ್ನು ರುಬ್ಬಿ 2 ಚಮಚ ಜೇನು ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ತುದಿಬೆರಳುಗಳಿಂದ ಮುಖಕ್ಕೆ ಲೇಪಿಸಿ
ಫೇಸ್‌ಪ್ಯಾಕ್‌ ಮಾಡಬೇಕು. ತದನಂತರ ಈ ಫೇಸ್‌ಪ್ಯಾಕ್‌ ಮೇಲೆ ಹಾಲಿನಲ್ಲಿ ಅದ್ದಿದ ಗುಲಾಬಿಯ ಪಕಳೆಗಳನ್ನು ಹಚ್ಚಬೇಕು.

20 ನಿಮಿಷಗಳ ಬಳಿಕ ತೊಳೆದರೆ ಮುಖ ಶುಭ್ರ ಮೃದು ಕಾಂತಿಯುತವಾಗುತ್ತದೆ. ವಾರಕ್ಕೆ ಮೂರು ಸಾರಿಯಂತೆ 6-8 ವಾರ ಬಳಸಿದರೆ ಮುಖದ ಚರ್ಮ ಬೆಳ್ಳಗಾಗುತ್ತದೆ.

2. ಮೊಡವೆ ನಿವಾರಕ ಮಲ್ಲಿಗೆಯ ಫೇಸ್‌ಪ್ಯಾಕ್‌
 ಎರಡು ಹಿಡಿ ಮಲ್ಲಿಗೆಯನ್ನು 1/4 ಕಪ್‌ ಹಾಲಿನಲ್ಲಿ ನೆನೆಸಿ ಅದರಲ್ಲಿಯೇ 8 ಬಾದಾಮಿಯನ್ನು ನೆನೆಸಿಡಬೇಕು.ಅರ್ಧ ಗಂಟೆಯ ಬಳಿಕ ಎಲ್ಲವನ್ನು ಚೆನ್ನಾಗಿ ರುಬ್ಬಿ ಲೇಪ ತಯಾರಿಸಬೇಕು. ಮುಖಕ್ಕೆ ಚೆನ್ನಾಗಿ ಲೇಪಿಸಿ ಮೃದುವಾಗಿ ಮಾಲೀಶು ಮಾಡಬೇಕು. 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆದು ತೆಗೆಯಬೇಕು. ಹೀಗೆ ವಾರಕ್ಕೆ ಎರಡರಿಂದ ಮೂರು ಬಾರಿ ಮಲ್ಲಿಗೆಯ ಫೇಸ್‌ಪ್ಯಾಕ್‌ ಮಾಡಿದರೆ 1-2 ತಿಂಗಳಲ್ಲಿ ಮೊಡವೆ ಕಲೆ ಮೊದಲಾದವು ನಿವಾರಣೆಯಾಗಿ ಮುಖ ಶುಭ್ರವಾಗಿ ಹೊಳೆಯುತ್ತದೆ.

3. ಚೆಂಡು ಹೂವು
ಮುಖ ಬೆಳ್ಳಗಾಗಲು ಬ್ಲೀಚಿಂಗ್‌ ಮಾಡುವುದು ಸಾಮಾನ್ಯ. ಆದರೆ ಕೆಮಿಕಲ್‌ ಬ್ಲೀಚಿಂಗ್‌ಗೆ ಬದಲಾಗಿ ಚೆಂಡು ಹೂವನ್ನೇ ಬಳಸಿ ನೈಸರ್ಗಿಕವಾಗಿ ಬ್ಲೀಚಿಂಗ್‌ ಪರಿಣಾಮ ಪಡೆಯಬಹುದು!

Advertisement

ಒಂದು ದೊಡ್ಡ ತಾಜಾ ಚೆಂಡು ಹೂವಿನ ಎಸಳುಗಳನ್ನು ನಾಲ್ಕು ಚಮಚ ದಪ್ಪ ಮೊಸರಲ್ಲಿ 15 ನಿಮಿಷ ನೆನೆಸಿಡಬೇಕು. ತದನಂತರ ಅದನ್ನು ಅರೆಯಬೇಕು. ಈ ಮಿಶ್ರಣಕ್ಕೆ ಕತ್ತರಿಸಿ ಅರೆದ ಹಸಿ ಆಲೂಗಡ್ಡೆಯ ಪೇಸ್ಟ್‌ ಮೂರು ಚಮಚ ಬೆರೆಸಬೇಕು. ಎರಡನ್ನೂ ಚೆನ್ನಾಗಿ ಬೆರೆಸಿ, ಮುಖಕ್ಕೆ ಲೇಪಿಸಿ ತುದಿ ಬೆರಳುಗಳಿಂದ ಮಾಲೀಶು ಮಾಡಬೇಕು. ಒಂದು ಗಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆದರೆ ನೈಸರ್ಗಿಕ ಬ್ಲೀಚಿಂಗ್‌ ಪರಿಣಾಮ ಉಂಟಾಗುತ್ತದೆ. ಇದನ್ನು ಎರಡು ದಿನಕ್ಕೊಮ್ಮೆಯಂತೆ 1-2 ತಿಂಗಳು ಬಳಸಬಹುದು. 

4. ಪಾರಿಜಾತ ಹೂವಿನ ಫೇಸ್‌ಪ್ಯಾಕ್‌ 
15 ಪಾರಿಜಾತ ಹೂವುಗಳನ್ನು 5 ಚಮಚ ಕಿತ್ತಳೆ ರಸದಲ್ಲಿ ಅರೆದು ಅದಕ್ಕೆ ಎರಡು ಚಮಚ ಶುದ್ಧ ಜೇನುತುಪ್ಪ ಬೆರೆಸಿ, ಎರಡು ಚಿಟಿಕೆ ಅರಸಿನ ಹುಡಿ ಸೇರಿಸಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ಬಳಿಕ ತೊಳೆದರೆ ಮೊಗದ ಚರ್ಮ ಶುಭ್ರ ಕಾಂತಿಯುತವಾಗುವುದರ ಜೊತೆಗೆ ತುರಿಕೆ ಗುಳ್ಳೆಗಳಿದ್ದರೂ ನಿವಾರಣೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next