ಸೋಮವಾರಪೇಟೆ: ಇಲ್ಲಿನ ಪುಷ್ಪಗಿರಿ ತೋಟಗಾರಿಕಾ ರೈತ ಉತ್ಪಾದಕರ ಸಂಸ್ಥೆಯ ಉದ್ಘಾಟನೆ ಮತ್ತು ಮಹಾಸಭೆ ಸ್ಥಳೀಯ ಒಕ್ಕಲಿಗರ ಸಮುದಾಯಭವನದಲ್ಲಿ ನಡೆಯಿತು.
ಮಡಿಕೇರಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ವಿಜಯ ಅಂಗಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಅನಂತರ ಮಾತನಾಡಿದ ಅವರು, ರೈತರ ಆಶೋತ್ತರಗಳನ್ನು ಈಡೇರಿಸಲು ರೈತ ಉತ್ಪಾದಕ ಸಂಸ್ಥೆಗಳು ಶ್ರಮವಹಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಬಾರ್ಡ್‌ನ ಸಹಾಯಕ ಮಹಾಪ್ರಬಂಧಕ ಎಂ.ಸಿ. ನಾಣಯ್ಯ ಮಾತನಾಡಿ, ನಬಾರ್ಡ್ ವತಿಯಿಂದ ರೈತರಿಗೆ ಲಭ್ಯವಿರುವ ಹಲವು ಸವಲತ್ತುಗಳ ಬಗ್ಗೆ ವಿವರಿಸಿದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರಭಾಕರ್ ಮಾತನಾಡಿ, ಕೃಷಿಕರು ತಮ್ಮ ಕೃಷಿ ಜಮೀನಿನಲ್ಲಿ ವೈಜ್ಞಾನಿಕವಾಗಿ ನೀರಾವರಿ ವ್ಯವಸ್ಥೆ ಮತ್ತು ಮಣ್ಣು ಪರೀಕ್ಷೆಗಳನ್ನು ಮಾಡಿಸುವ ಮೂಲಕ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯುವಂತಾಗಬೇಕು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಷ್ಪಗಿರಿ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ದೇವಯ್ಯ ವಹಿಸಿದ್ದರು. ಸಂಸ್ಥೆಯ ಪ್ರಸಕ್ತ ಸಾಲಿನ ಕಾರ್ಯಚಟುವಟಿಕೆಗಳು, ಉದ್ದೇಶಗಳ ಬಗ್ಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಅವರು ಸಭೆಯಲ್ಲಿ ಮಂಡಿಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬನ್ನಳ್ಳಿ ಸತೀಶ್ ಸೇರಿದಂತೆ ನಿರ್ದೇಶಕರು, ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.