ಬೆಂಗಳೂರು: ಕಟ್ಟಡ ನಕ್ಷೆ ಮಂಜೂರಾತಿಯಲ್ಲಿನ ವಿಳಂಬ ಹಾಗೂ ನಕ್ಷೆ ಉಲ್ಲಂಘನೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ, ಕಟ್ಟಡ ಮಾಲೀಕರ ಜತೆ ಒಪ್ಪಂದ ಮಾಡಿಕೊಳ್ಳುವ ನಿಯಮಾವಳಿ ಜಾರಿಗೊಳಿಸಲು ತೀರ್ಮಾನಿಸಿದೆ. ಅದರಂತೆ ಮಾಲೀಕರು ನಿಯಮ ಉಲ್ಲಂ ಸಿದರೆ, ಕಟ್ಟಡದ ನೆಲ ಮಹಡಿಯನ್ನು ಪಾಲಿಕೆಗೆ ಬಿಟ್ಟುಕೊಡಬೇಕು.
ಪಾಲಿಕೆಯ ವ್ಯಾಪ್ತಿಯಲ್ಲಿ ನಕ್ಷೆ ಉಲ್ಲಂ ಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಪತ್ತೆ ಅಧಿಕಾರಿಗಳಿಗೆ ಸವಾಲಾಗಿದ್ದು, ಕಟ್ಟಡ ಮಾಲೀಕರು ಸಹ ಹೆಚ್ಚುವರಿ ನಿರ್ಮಾಣದ ಕುರಿತು ಘೋಷಿಸಿಕೊಳ್ಳದ ಹಿನ್ನೆಲೆಯಲ್ಲಿ ಪಾಲಿಕೆಗೆ ತೆರಿಗೆ ಸೋರಿಕೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳ ತಡೆಗೆ ಕಟ್ಟಡ ನಕ್ಷೆ ನಿರ್ಮಾಣ ಉಪವಿಧಿಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ಪಾಲಿಕೆ, ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳುವ ನಿಯಮ ಜಾರಿಗೆ ತರಲು ಬಗ್ಗೆ ಚಿಂತನೆ ನಡೆಸಿದೆ.
ಆನ್‌ಲೈನ್ ಮೂಲಕ ಕಟ್ಟಡ ನಕ್ಷೆ ಮಂಜೂರಾತಿ ವ್ಯವಸ್ಥೆಯನ್ನು ಪಾಲಿಕೆ ಈವರೆಗೆ ಜಾರಿಗೊಳಿಸಿಲ್ಲ. ಪರಿಣಾಮ ಕಟ್ಟಡ ನಕ್ಷೆಗಾಗಿ ಸಾರ್ವಜನಿಕರು ಹತ್ತಾರು ದಿನಗಳು ಪಾಲಿಕೆ ಕಚೇರಿಗಳಿಗೆ ಅಲೆಯಬೇಕಿದ್ದು, ಪಾಲಿಕೆಯ ಅಧಿಕಾರಿಗಳು ಕಿರುಕುಳ ನೀಡುತ್ತಾರೆ ಎಂಬ ಆರೋಪಗಳಿವೆ. ಮತ್ತೂಂದಡೆ ಮಾಲೀಕರು ಪಾಲಿಕೆಯಿಂದ ಪಡೆದ ನಕ್ಷೆ ಉಲ್ಲಂ ಸಿ ಕಟ್ಟಡ ನಿರ್ಮಿಸುತ್ತಿರುವುದರಿಂದ ನಗರದಲ್ಲಿ ಅಕ್ರಮ ಕಟ್ಟಡ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಪಾಲಿಕೆ ಈ ನಿಯಮ ಜಾರಿಗೊಳಿಸಲು ಮುಂದಾಗಿದೆ.
ಒಪ್ಪಂದಲ್ಲಿ ಏನಿರುತ್ತದೆ?: ನೂತನವಾಗಿ ಜಾರಿಗೊಳಿಸುವ ನಿಯಮಾವಳಿಗಳಲ್ಲಿ ಮಾಲೀಕರು ಪಾಲಿಕೆಯೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕು. ಒಪ್ಪಂದದಲ್ಲಿ ಮಾಲೀಕರು ಕಾನೂನು ಪಾಲಿಸಿ ಕಟ್ಟಡ ನಿರ್ಮಿಸಲಾಗುವುದು. ಒಂದೊಮ್ಮೆ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಿಸಿದರೆ, ಕಟ್ಟಡದ ನೆಲಮಹಡಿಯನ್ನು ಪಾಲಿಕೆ ತನ್ನ ವಶಕ್ಕೆ ಪಡೆಯಬಹುದು ಎಂಬ ಕರಾರಿಗೆ ಮಾಲೀಕರು ಸಹಿ ಹಾಕಬೇಕು. ಪಾಲಿಕೆಯೊಂದಿಗೆ ಇಂತಹ ಕರಾರು ಮಾಡಿಕೊಂಡವರಿಗೆ ಮಾತ್ರ ನಕ್ಷೆ ನೀಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನಿಯಮ ಉಲ್ಲಂ ಸಿದರೆ ಕ್ರಮವೇನು?: ಮಾಲೀಕರು ನಿರ್ಮಿಸುವ ಕಟ್ಟಡಗಳನ್ನು ಪರಿಶೀಲನೆ ನಡೆಸಲಿರುವ ಪಾಲಿಕೆಯ ಅಧಿಕಾರಿಗಳು ನಿಯಮಾನುಸಾರ ನಿರ್ಮಿಸಿದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಲಿದ್ದಾರೆ. ಇನ್ನು ಕಟ್ಟಡ ನಕ್ಷೆಯನುಸಾರ ನಿರ್ಮಾಣವಾಗದಿರುವುದು ಕಂಡುಬಂದರೆ, ಕರಾರಿನಂತೆ ಅಂತಹ ಕಟ್ಟಡಗಳನ್ನು ಪಾಲಿಕೆ ತನ್ನ ವಶಕ್ಕೆ ಪಡೆಯುತ್ತದೆ.
ಸಾಮಾನ್ಯ ಸಭೆಯಲ್ಲಿ ಚರ್ಚೆ: ಕಟ್ಟಡ ನಕ್ಷೆ ಉಲ್ಲಂಘನೆ ಪ್ರಕರಣಗಳ ನಿಯಂತ್ರಿಸಲು ತರಲು ಉದ್ದೇಶಿಸಿರುವ ಹೊಸ ನಿಯಮಾವಳಿಗಳ ಕುರಿತು ಮುಂದಿನ (ಜ.9) ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ, ಕೌನ್ಸಿಲ್ ನಿರ್ಣಯ ಪಡೆದ ನಂತರ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲು ಪಾಲಿಕೆ ನಿರ್ಧರಿಸಿದೆ.
ನಗರದಲ್ಲಿ ಹೆಚ್ಚುತ್ತಿರುವ ನಕ್ಷೆ ಉಲ್ಲಂಘನೆಗಳ ತಡೆಯಲು ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿಯಮಾವಳಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ನಿಯಮದಂತೆ ಮಾಲೀಕರು ನಿಯಮ ಉಲ್ಲಂ ಸಿದರೆ ಕರಾರಿನಂತೆ ಕಟ್ಟಡದ ನೆಲ ಮಹಡಿಯನ್ನು ಪಾಲಿಕೆಗೆ ನೀಡಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಮಾಲೀಕರು ನಿಯಮಾನುಸಾರ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಾರೆ.
-ಆರ್.ಸಂಪತ್‌ರಾಜ್, ಮೇಯರ್
* ವೆಂ. ಸುನೀಲ್ ಕುಮಾರ್