ಹೊಳೆನರಸೀಪುರ: ತಾಲೂಕು ವ್ಯಾಪ್ತಿಯಲ್ಲಿ ಪ್ರವಾಹ ಕಂಡು ಬಂದ ಸಂದರ್ಭದಲ್ಲಿ 248 ಮನೆಗಳು ಭಾಗಶಃ ಹಾಗೂ 91 ಮನೆಗಳು ಸಂಪೂರ್ಣ ಹಾನಿಯಾಗಿರುವುದಾಗಿ ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ತಿಳಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಹೇಮಾವತಿ ನದಿ ತೀರದ ಆಸು ಪಾಸಿನಲ್ಲಿ ವಾಸವಿದ್ದ ಕೆಲವು ಕುಟುಂಬದವರ ಮನೆಗಳು ಹಾನಿಗೊಳಗಾಗಿದ್ದು, ಪಟ್ಟಣದಲ್ಲಿ ಈಗಾಗಲೇ ಪ್ರವಾಹ ಸಂತ್ರಸ್ತರ 3 ಪುನರ್ವಸತಿ ಕೇಂದ್ರಗಳನ್ನು ತೆರೆದು ಸುಮಾರು 937 ಜನರಿಗೆ ಆಹಾರ ಸಾಮಗ್ರಿ, ಹೊದಿಕೆ, ಬಟ್ಟೆ ಹಾಗೂ ಪಾತ್ರೆ ಸಾಮಗ್ರಿಗಳನ್ನು ಒದಗಿಸುತ್ತಿದ್ದೇವೆ ಎಂದರು.
ಮನೆ ಹಾನಿಗೊಳಗಾದವರಿಗೆ ಪರಿಹಾರ: ಪ್ರವಾಹ ಸಂದರ್ಭದಲ್ಲಿ 9 ಕುಟುಂಬದ ಮನೆಯಲ್ಲಿದ್ದ ಪಾತ್ರೆ ಇನ್ನಿತರ ವಸ್ತುಗಳು ಹಾನಿಗೀಡಾಗಿದ್ದು, ಅವರಿಗೆ ತಲಾ 3,800 ರೂ. ನಂತೆ ಪಾತ್ರೆ ಖರೀದಿ ಸಲು ಚೆಕ್ ವಿತರಿಸಲಾಗಿದೆ. ಮನೆ ಸಂಪೂರ್ಣ ಹಾನಿಯಾದ ಕುಟುಂಬಕ್ಕೆ ತಲಾ 95,100 ರೂ. ಹಾಗೂ ಭಾಗಶಃ ಹಾನಿಯಾದ ಮನೆಗಳಿಗೆ ಕನಿಷ್ಠ 5,200 ರೂ. ಹಾಗೂ ಶೇ.75ರಷ್ಟು ಮನೆ ಹಾನಿಯಾಗಿದ್ದರೆ ಸಂಪೂರ್ಣವಾಗಿ ಹಾನಿ ಎಂದು ಪರಿಗಣಿಸಿ 95,100 ರೂ ಪರಿಹಾರದ ಚೆಕ್ ನೀಡಲು ಅವಕಾಶವಿದೆ. ಈ ಕುರಿತು ಮಾಹಿತಿ ಸಂಗ್ರಹಿಸಿ ನಿಯಮಾನುಸಾರ ಕ್ರಮ ವಹಿಸಲು ಮುಂದಾಗಿರುವುದಾಗಿ ತಿಳಿಸಿದರು.
ಪುರಸಭೆ, ಕಂದಾಯ ಇಲಾಖೆ ಪರಿಶೀಲನೆ: ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಬಹುತೇಕ ಬಡಾವಣೆ ಹಾಗೂ ಗ್ರಾಮಗಳಲ್ಲಿ ಮನೆಗಳು ಹಾಗೂ ಬೆಳೆಗಳು ಹಾನಿಯಾಗಿರುವ ಬಗ್ಗೆ ಮಾಹಿತಿ ಇದ್ದು ಈ ಕುರಿತು ಪ್ರತಿ ಬಡಾವಣೆ ಮತ್ತು ಗ್ರಾಮ ಗಳಿಗೆ ಕಂದಾಯ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾನಿಯಾದ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಸಂತ್ರಸ್ತರರಿಂದ ದಾಖಲಾತಿ ಸಂಗ್ರಹಿಸಿ ಕಚೇರಿಗೆ ನೀಡುವಂತೆ ತಿಳಿಸಲಾಗಿದೆ.
ಸಂಘ ಸಂಸ್ಥೆಗಳ ನೆರವು: ಈಗಾಗಲೇ ಶ್ರವಣಬೆಳ ಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕರು, ಖಾಸಗಿ ಸುದ್ದಿ ವಾಹಿನಿ ತಂಡ, ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದವರು, ಸ್ಥಳೀಯ ಜೈನ್ ಮತ್ತು ಲಯನ್ಸ್ ಸಂಸ್ಥೆ ಸೇರಿದಂತೆ ಹಲವರು ಸಂತ್ರಸ್ತರರಿಗೆ ಅಗತ್ಯ ವಸ್ತುಗಳನ್ನು ನೀಡಿದ್ದು, ಈ ಸಾಮಗ್ರಿಗಳನ್ನು ಸಂತ್ರಸ್ತರರಿಗೆ ವಿತರಿಸುವ ಕಾರ್ಯ ನಿರಂತರವಾಗಿ ಸಾಗಿದೆ ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶದ ಹೇಮಾವತಿ ನದಿ ತೀರದಲ್ಲಿರುವ ಕೆಲವು ಗ್ರಾಮದ ಮನೆಗಳು ಪ್ರವಾಹಕ್ಕೆ ತುತ್ತಾಗಿದ್ದು. ಅವರಿಗೂ ಸಹ ಪರಿಹಾರ ಹಾಗೂ ಸರ್ಕಾರ ಮತ್ತು ದಾನಿಗಳಿಂದ ಸಂಗ್ರಹಿಸಿದ ಸಾಮಗ್ರಿಗಳನ್ನು ವಿತರಸಲಾಗುತ್ತಿದೆ ಎಂದು ತಹಶೀಲ್ದಾರ್ ವಿವರಿಸಿದರು.
ತಾಪಂ ಇಒ ಕೆ.ಯೋಗೇಶ್, ಬಿಇಒ ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ಬಿ.ಸಿ. ಬಸವರಾಜು, ಡಿವೈಎಸ್ಪಿ ಲಕ್ಷ್ಮೇಗೌಡ, ಪಿಎಸ್‌ಐ ಗಳಾದ ಕುಮಾರ್, ಮೋಹನ್ ಕೃಷ್ಣ, ಪ್ರಕೃತಿ ವಿಕೋಪ ಶಾಖೆಯ ಕೆ.ವಿ.ರಂಜಿತಾ, ಆಹಾರ ಶಾಖೆಯ ಬಿ.ಟಿ. ರಾಮಚಂದ್ರ, ತಹಶೀಲ್ದಾರ್ ಜೊತೆಗಿದ್ದರು.