Advertisement

ಪ್ರವಾಹ: 8 ಸಾವಿರ ಕೋ.ರೂ. ನಷ್ಟ? ; ಮಾಹಿತಿ ಸಂಗ್ರಹಕ್ಕೆ ಪಿಡಬ್ಲ್ಯೂಡಿಗೆ ಸೂಚನೆ

12:08 AM Aug 13, 2020 | mahesh |

ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ಬೆಳೆ ಹಾಗೂ ಮೂಲ ಸೌಕರ್ಯ ಹಾನಿ ಸೇರಿ ನಷ್ಟದ ಮೊತ್ತ ಎಂಟು ಸಾವಿರ ಕೋಟಿ ರೂ. ತಲುಪುವ ಸಾಧ್ಯತೆಯಿದೆ. ಸದ್ಯದಲ್ಲೇ ಕೇಂದ್ರಕ್ಕೆ ಪೂರ್ಣ ಪ್ರಮಾಣದ ವರದಿ ಸಲ್ಲಿಸಲು ಸಿದ್ಧತೆ ನಡೆದಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ 80 ಸಾವಿರ ಹೆಕ್ಟೇರ್‌ ಕೃಷಿ ಹಾಗೂ ತೋಟ ಗಾರಿಕೆ ಬೆಳೆ ಹಾನಿಯ ಅಂದಾಜು ಮಾಡಲಾಗಿತ್ತಾದರೂ ಅದು 1.25ರಿಂದ 1.50 ಲಕ್ಷ ಹೆಕ್ಟೇರ್‌ಗೆ ಮುಟ್ಟಬಹುದು. ಹಾನಿಗೀಡಾಗಿರುವ ಐದು ಸಾವಿರ ಮನೆಗಳನ್ನು ಹೊಸದಾಗಿಯೇ ನಿರ್ಮಿಸ ಬೇಕಾಗಬಹುದು.

Advertisement

ಪ್ರಾಥಮಿಕ ಅಂದಾಜಿನ ಪ್ರಕಾರ 3 ಸಾವಿರ ಮನೆ, 3,500 ಕಿ.ಮೀ. ರಸ್ತೆ, 104 ಸಣ್ಣ ಕೆರೆಗಳು, 394 ವಿದ್ಯುತ್‌ ಪರಿವರ್ತಕಗಳು ಹಾನಿಗೀಡಾಗಿರುವ ವರದಿ ನೀಡಲಾಗಿತ್ತು. ಅನಂತರದಲ್ಲಿ ಬಂದ ದೂರುಗಳ ಆಧಾರದಲ್ಲಿ ನಷ್ಟದ ಪ್ರಮಾಣ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಎರಡು ಸಾವಿರ ಕೋ.ರೂ. ಅಗತ್ಯ
ಬೆಳಗಾವಿ, ಕೊಡಗು, ಉತ್ತರ ಕನ್ನಡ, ರಾಯಚೂರು, ಹಾಸನ ಭಾಗದಲ್ಲಿ ಹೆಚ್ಚಿನ ನಷ್ಟವಾಗಿದ್ದು ಕೇಂದ್ರ ಸರಕಾರ ಈಗಾಗಲೇ ಬಿಡುಗಡೆ ಮಾಡಿರುವ 310 ಕೋಟಿ ರೂ. ಜತೆಗೆ ರಾಜ್ಯ ಸರಕಾರಕ್ಕೆ 2,000 ಕೋಟಿ ರೂ. ವರೆಗೆ ಪ್ರವಾಹ ಪರಿಹಾರ ಕಾರ್ಯ ಹಾಗೂ ತುರ್ತು ಕಾಮಗಾರಿಗಳಿಗೆ ಅಗತ್ಯ ಬೀಳ ಬಹುದು ಎಂದು ಅಂದಾಜಿಸ ಲಾಗಿದೆ. ಪ್ರವಾಹ ಪರಿಹಾರ ಕಾಮಗಾರಿಗಳಿಗೆ ಇತರ ಬಾಬಿ¤ನಿಂದ ಹೊಂದಾಣಿಕೆ ಮಾಡಲು ಹಣಕಾಸು ಇಲಾಖೆಗೆ ಖುದ್ದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಪ್ರಸ್ತುತ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿರುವ 1,120 ಕೋಟಿ ರೂ. ಬಳಕೆಯಾಗುತ್ತಿದ್ದಂತೆ ಮತ್ತಷ್ಟು ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಶ್ವತ ಆಶ್ರಯ ಕೇಂದ್ರ
ಇದೇ ಮೊದಲ ಬಾರಿಗೆ ಪ್ರವಾಹದಿಂದ ಸಂತ್ರಸ್ತರಾಗುವವರಿಗೆ ಶಾಶ್ವತವಾಗಿ ಆಶ್ರಯ ಕೇಂದ್ರ ಸ್ಥಾಪಿಸಲು ಸರಕಾರ ಮುಂದಾಗಿದ್ದು ಸಕಲ ಮೂಲ ಸೌಕರ್ಯ ಸಹಿತ ಭವನಗಳನ್ನು ನಿರ್ಮಿಸುತ್ತಿದೆ. ಪ್ರತಿ ವರ್ಷ ಮಳೆಯಿಂದ ಪ್ರವಾಹ ಉಂಟಾಗುವ ಸ್ಥಳ ಗುರುತಿಸಿ ಅಲ್ಲಿ ಶಾಶ್ವತ ಆಶ್ರಯ ಭವನ ನಿರ್ಮಿಸಲಾಗುತ್ತಿದೆ. ಪ್ರವಾಹ ಸಂದರ್ಭದಲ್ಲಿ ಆಶ್ರಯ ನೀಡಿ ಉಳಿದ ಸಮಯದಲ್ಲಿ ಶಾಲೆ, ಅಂಗನವಾಡಿ, ಗ್ರಂಥಾಲಯ ಇತ್ಯಾದಿ ಸಾಮುದಾಯಿಕ ಚಟುವಟಿಕೆಗಳಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ.

ಪ್ರವಾಹದಿಂದಾಗಿರುವ ಹಾನಿ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಜತೆಗೆ ಕೆಲವು ಪ್ರದೇಶಗಳಲ್ಲಿ ಇನ್ನೂ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮತ್ತೆ ಪ್ರವಾಹದ ಸಾಧ್ಯತೆಯೂ ಇದೆ. ಪರಿಸ್ಥಿತಿ ನಿಭಾಯಿಸಲು ಸರಕಾರ ಸನ್ನದ್ಧವಾಗಿದೆ.
– ಆರ್‌. ಅಶೋಕ್‌, ಕಂದಾಯ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next