Advertisement
ಆ. 16ರಂದು ಸುರಿದ ಭಾರೀ ಮಳೆಯಿಂದಾಗಿ ಕೊಟ್ಯಾಡಿ ಪರಪ್ಪೆಯಲ್ಲಿ ಪಯಸ್ವಿನಿ ಹೊಳೆ ಉಕ್ಕಿ ಹರಿದ ಪರಿಣಾಮವಾಗಿ ಸುಳ್ಯ-ಮುಳ್ಳೇರಿಯ ಅಂತಾರಾಜ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಹೊಳೆಯಲ್ಲಿ ಮಳೆ ನೀರು ಉಕ್ಕಿ ಹರಿದು ರಸ್ತೆಯ ಮೇಲೂ ಹರಿಯತೊಡಗಿತು. ಇದರಿಂದ ಬಸ್ ಸಹಿತ ಘನ ವಾಹನಗಳಿಗೆ ಸಂಚರಿಸಲು ಮಾತ್ರವೇ ಸಾಧ್ಯವಾಯಿತು. ಅಪಾಯ ಸಾಧ್ಯತೆಯನ್ನು ಮನಗಂಡು ಇತರ ವಾಹನಗಳಿಗೆ ಸ್ಥಳೀಯರು ಹೋಗದಂತೆ ತಡೆದರು. ಸಂಜೆಯಾಗುತ್ತಿದ್ದಂತೆ ನೀರಿನ ಪ್ರಮಾಣ ಕಡಿಮೆಯಾಯಿತು. ಆ ಬಳಿಕವಷ್ಟೇ ವಾಹನ ಸಂಚಾರ ಪುನರಾರಂಭಗೊಂಡಿತು. ಆದರೆ ಶುಕ್ರವಾರ ಬೆಳಗ್ಗಿನಿಂದ ಮತ್ತೆ ಧಾರಾಕಾರ ಮಳೆ ಸುರಿದ ಪರಿಣಾಮವಾಗಿ ಅತ್ತನಾಡಿ ಪರಿಸರದಲ್ಲಿ ಅಡಿಕೆ ತೋಟಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ. ಇದರ ಪರಿಣಾಮವಾಗಿ ಚಂದ್ರಗಿರಿ ನದಿಗೆ ಸಂಪರ್ಕ ಕಲ್ಪಿಸುವ ಪಯಸ್ವಿನಿ ಹೊಳೆ ಉಕ್ಕಿ ಹರಿಯುತ್ತಿದೆ.
Related Articles
ನಗರದ ಅಡ್ಕತ್ತಬೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರದ ರೆಂಬೆಯೊಂದು ಮುರಿದು ಬಿದ್ದು ರಸ್ತೆ ಬದಿ ನಿಲ್ಲಿಸಿದ್ದ ಸೂರ್ಲು ನಿವಾಸಿಯ ಬೈಕ್ ಹಾನಿಗೀಡಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ರೆಂಬೆ ಕಡಿದು ತೆಗೆದು ಸಾರಿಗೆ ಸಂಚಾರ ಸುಗಮಗೊಳಿಸಿದರು. ಮೊಗ್ರಾಲ್ ಕೊಪ್ಪರ ಬಜಾರ್ ರಾ.ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಮರವೊಂದು ರಸ್ತೆಗೆ ಅಡ್ಡ ಬಿದ್ದಿದೆ.
Advertisement
ನೀರು ಪಾಲಾದ ವ್ಯಕ್ತಿಯ ರಕ್ಷಣೆ ಕರಿಚ್ಚೇರಿ ಹೊಳೆಯಲ್ಲಿ ನೀರು ಪಾಲಾದ ಬೇಡಗ ಬಿಂಬುಂಗಲ್ ಚಂದ್ರನ್(40) ಅವರನ್ನು ಸ್ಥಳೀಯರು ರಕ್ಷಿಸಿದರು. ಹೊಳೆಯಲ್ಲಿ ತೇಲಿ ಹೋಗುತ್ತಿದ್ದ ಚಂದ್ರನ್ ಅವರ ಬೊಬ್ಬೆ ಕೇಳಿ ಸ್ಥಳೀಯರು ಒಗ್ಗೂಡಿ ಹೊಳೆಗೆ ಹಗ್ಗ ಎಸೆದರು. ಹಗ್ಗವನ್ನು ಹಿಡಿದುಕೊಂಡ ಅವರನ್ನು ರಕ್ಷಿಸಿ ದಡಕ್ಕೆ ತರಲಾಯಿತು. ಆ ಬಳಿಕ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಾಯಿತು. ತೃಕ್ಕನ್ನಾಡ್‌ನಲ್ಲಿ ಮುಂದುವರಿದ ಕಡಲ್ಕೊರೆತ
ಬೇಕಲ ತೃಕ್ಕನ್ನಾಡ್‌ನಲ್ಲಿ ಕಡಲ್ಕೊರೆತ ಮುಂದುವರಿದಿದ್ದು, ಈ ಪರಿಸರದ 30 ರಷ್ಟು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕೋಟಿಕುಳಂ ಫಿಶರೀಸ್ ಹೈಸ್ಕೂಲ್‌ನಲ್ಲಿ ಸಂತ್ರಸ್ತರ ಶಿಬಿರವನ್ನು ಆರಂಭಿಸಲಾಗಿದೆ. ಮಳೆಯಿಂದ ತೊಂದರೆಗೀಡಾದ ಕುಟುಂಬಗಳನ್ನು ಇಲ್ಲಿ ಸಂರಕ್ಷಿಸಲಾಗುತ್ತಿದೆ.