ಹೊನ್ನಾವರ: ದಿನಾಂಕ 15ಕ್ಕೆ ಮಳೆ ಕಡಿಮೆಯಾದ ಕಾರಣ ಬಂದ್ ಮಾಡಲಾದ ಲಿಂಗನಮಕ್ಕಿ ಅಣೆಕಟ್ಟಿನ ಮತ್ತು ಶರಾವತಿ ಟೇಲರೀಸ್ ಅಣೆಕಟ್ಟಿನ ಗೇಟ್‌ಗಳನ್ನು ಮುಚ್ಚಲಾಗಿತ್ತು. ಜಲಾನಯನ ಪ್ರದೇಶಗಳಾದ ಸಾಗರ, ಕುಂಬ್ರಿ, ರಿಪ್ಪನಪೇಟೆ ಮೊದಲಾದ ಪ್ರದೇಶದಲ್ಲಿ ಮಳೆ ಜೋರಾದ ಕಾರಣ ನಿನ್ನೆ ಲಿಂಗನಮಕ್ಕಿಯ ಗೇಟ್‌ಗಳನ್ನು ತೆರೆದು 15ಸಾವಿರ ಕ್ಯೂಸೆಕ್ ನೀರು ಬಿಡಲು ಆರಂಭಿಸಲಾಯಿತು. ಸಂಜೆ ಹೊತ್ತಿಗೆ ಮಳೆ ಜೋರಾಗಿ 35ಸಾವಿರ ಕ್ಯೂಸೆಕ್‌ಗೆ ಏರಿಸಿ ಇಂದು ಮುಂಜಾನೆ 61ಸಾವಿರ ಕ್ಯೂಸೆಕ್ ಟೇಲರೀಸ್‌ನಿಂದ ಬಿಟ್ಟ ಕಾರಣ ಶರಾವತಿ ಪಾತಳಿಗಿಂತ 3ಅಡಿ ನೀರು ಏರಿದ್ದು ಗೇರುಸೊಪ್ಪೆಯಿಂದ ಹೊನ್ನಾವರವರೆಗಿನ 35ಕಿಮೀ ಎಡಬಲದಂಡೆ ತೋಟಗಳು ನೀರಿನಿಂದ ಆವೃತವಾಗಿದೆ.
ಗೇರುಸೊಪ್ಪಾ ನಗರಬಸ್ತಿಕೇರಿ, ತೆಂಗಾರ, ಸಂಶಿ, ಉಪ್ಪೋಣಿ ಗ್ರಾಮದ ಶಾಲೆ, ಮಾಗೋಡ ದಾಸ ಪೈ ಅಂಗಡಿಗಳಿಗೆ ನೀರು ಹೊಕ್ಕಿವೆ. ಅಳ್ಳಂಕಿ ಗಾಬಿತಕೇರಿಯಲ್ಲಿ ಶರಾವತಿ ಪ್ರವಾಹದಿಂದ ಅಕ್ಷರಶಃ ದ್ವೀಪವಾಗಿ ಪರಿವರ್ತನೆಗೊಂಡಿರುವ ನಾರಾಯಣ ಗೊಯ್ದು ನಾಯ್ಕ ಮನೆಗೆ ನೀರು ನುಗ್ಗಿದ್ದು ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ. ಹೈಗುಂದ ಸೇತುವೆಯ ಎತ್ತರಕ್ಕೆ ನೀರು ಹರಿಯುತ್ತಿದೆ. ಟೇಲರೀಸ್ ಸೇತುವೆಯ ತಳಭಾಗದವರೆಗೆ ನೀರು ಏರಿದೆ.
ಲಿಂಗನಮಕ್ಕಿಯಿಂದ ವಿದ್ಯುತ್ ಉತ್ಪಾದಿಸಿ, ಗೇಟು ತೆಗೆದು ಹೊರಬಿಡುವ ನೀರಿನ ಜೊತೆ, ಜೋಗ ಜಲಪಾತದಿಂದ ಟೇಲರೀಸ್ ಆಣೆಕಟ್ಟಿನವರೆಗಿನ 30ಕಿಮೀ ವ್ಯಾಪ್ತಿಯ ಕೊಳ್ಳದಲ್ಲಿ ಬೀಳುವ ಮಳೆನೀರು ಸೇರಿ ಟೇಲರೀಸ್‌ಗೆ ಭಾರೀ ನೀರು ಬರುತ್ತಿರುವುದರಿಂದ 60ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿ ಆಗಬಹುದಾದ ತೊಂದರೆ ತಪ್ಪಿಸಲು ಕೆಪಿಸಿ ಹರಸಾಹಸ ಪಡುತ್ತಿದೆ. ಶಾಸಕ ಸುನಿಲ್ ನಾಯ್ಕ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಜಿಲ್ಲೆಯ ಜಲಾಶಯ ಮಟ್ಟ
ಕದ್ರಾ: 34.50ಮೀ (ಗರಿಷ್ಠ), 33 ಮೀ (ಇಂದಿನ ಮಟ್ಟ). ಕೊಡಸಳ್ಳಿ: 75.50 ಮೀ (ಗರಿಷ್ಠ), 73.85 ಮೀ. (ಇಂದಿನ ಮಟ್ಟ), ಸೂಪಾ: 564ಮೀ (ಗ), 558.50 ಮೀ (ಇ.ಮಟ್ಟ), ತಟ್ಟಿಹಳ್ಳ: 468.38ಮೀ (ಗ), 459.88 ಮೀ (ಇ.ಮಟ್ಟ), ಬೊಮ್ಮನಹಳ್ಳಿ: 438.46ಮೀ (ಗ), 434.70 ಮೀ (ಇ.ಮಟ್ಟ), ಗೇರುಸೊಪ್ಪ: 55ಮೀ (ಗ), 50.31 ಮೀ (ಇ.ಮಟ್ಟ), ಲಿಂಗನಮಕ್ಕಿ: 1819 ಅಡಿ (ಗ), 1817.70 ಅಡಿ (ಇಂದಿನ ಮಟ್ಟ).