ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನದಿಗಳಿಗೆ ಅಪಾರ ಪ್ರಮಾಣ ನೀರು ಬರುತ್ತಿದೆ. ಹಿಪ್ಪರಗಿ ಬ್ಯಾರೇಜ್ ಮೂಲಕ ಹೆಚ್ಚಿನ ನೀರನ್ನು ಆಲಮಟ್ಟಿಗೆ ಹರಿಬಿಡಲಾಗುತ್ತಿದೆ ಇದರಿಂದ ಪ್ರವಾಹ ಎದುರಾಗುವುದಿಲ್ಲ. ನದಿ ತೀರದ ಜನರು ಧೈರ್ಯವಾಗಿ ಇರಬೇಕು ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ಹೇಳಿದರು. ಶುಕ್ರವಾರ ಕೃಷ್ಣಾ ಮತ್ತು ಉಪನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿರುವ ಹಿನ್ನೆಲೆಯಲ್ಲಿ ಕೃಷ್ಣಾ ತೀರದ ಮಾಂಜರಿ, ಯಡೂರ ಮತ್ತು ಇಂಗಳಿ ಗ್ರಾಮಗಳಿಗೆ ಭೇಟಿ ನದಿ ನೀರಿನ ಹರಿವು ಅವಲೋಕಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಮುಂಗಾರಿನ ಹಂಗಾಮಿನಲ್ಲಿ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬರುವುದರಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಸಂಭವನೀಯ ಪ್ರವಾಹ ಎದುರಾಗುತ್ತದೆ. ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದರು.
ಕೃಷ್ಣಾ ಮತ್ತು ಉಪನದಿಗಳಿಗೆ ಈಗಾಗಲೇ 1.81 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಬ್ಯಾರೇಜ ಮೂಲಕ 2.2 ಲಕ್ಷ ಕ್ಯುಸೆಕ್ ನೀರನ್ನು ಆಲಮಟ್ಟಿಗೆ ಹರಿಬಿಡುವುದರಿಂದ ಪ್ರವಾಹ ಎದುರಾಗುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ನದಿಗಳಿಗೆ ನೀರಿನ ಪ್ರಮಾಣ ಹೆಚ್ಚಾದರೆ ಜನರಿಗೆ ಸುರಕ್ಷಿತ ಸ್ಥಳಗಳನ್ನು ಗುರ್ತಿಸಲಾಗಿದೆ. ಮತ್ತು ತಗ್ಗು ಪ್ರದೇಶದಲ್ಲಿ ವಾಸ ಮಾಡುವ ಕಟುಂಬಗಳು ಸುರಕ್ಷಿತ ಸ್ಥಳಗಳಿಗೆ ಬರಬೇಕೆನ್ನುವ ಸೂಚನೆಯನ್ನು ತಾಲೂಕಾಡಳಿತ ನೀಡಿದೆ. ಸೇತುವೆ ಹತ್ತಿರ ಇರುವ ರಸ್ತೆಗಳಲ್ಲಿ ಜನರು ನದಿಗಳ ಹತ್ತಿರ ಬರದಂತೆ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ ಎಂದರು.
ಚಿಕ್ಕೋಡಿ ತಾಲೂಕಿನ ಯಡೂರ, ಮಾಂಜರಿ ಮತ್ತು ಇಂಗಳಿ ಪ್ರದೇಶಗಳಲ್ಲಿ ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ದೋಣಿ ಇದೆಯೆಂದು ಅನಾವಶ್ಯಕವಾಗಿ ಯಾರೂ ದೋಣಿಯಲ್ಲಿ ಓಡಾಟ ಮಾಡಬಾರದು. ನದಿಗಳಲ್ಲಿ ನೀರಿನಲ್ಲಿ ಮತ್ತಷ್ಟು ಏರಿಕೆ ಕಂಡು ಬಂದರೆ ಜನರನ್ನು ಸ್ಥಳಾಂತರ ಮಾಡುವುದಾದರೆ ಅವರಿಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸುವಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ರಾಮಚಂದ್ರನ್, ಎಸ್‌ಪಿ ಸುಧೀರಕುಮಾರ ರೆಡ್ಡಿ, ಉಪವಿಭಾಗಾಧಿ ಕಾರಿ ಗೀತಾ ಕೌಲಗಿ, ತಹಶೀಲ್ದಾರ ಸಿ.ಎಸ್.ಕುಲಕರ್ಣಿ ಇದ್ದರು.