Advertisement

ನೆರೆಗೆ ಊರೇ ಸರ್ವನಾಶ, ಸ್ಥಳಾಂತರವೇ ಪರಿಹಾರ

09:46 PM Aug 16, 2019 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನವನದಿಂದ ಲಕ್ಷ್ಮಣತೀರ್ಥ ನದಿ ಹಾದು ಬರುವ ನದಿ ತಟದಲ್ಲೇ ಇರುವ ಕೋಣನಹೊಸಹಳ್ಳಿಯಲ್ಲಿ ನೆರೆಗೆ ತತ್ತರಿಸಿದ್ದು, ಈ ಹಳ್ಳಿಯನ್ನು ಸಂಪೂರ್ಣ ಸ್ಥಳಾಂತರಿಸುವ ಅನಿವಾರ್ಯತೆ ಇದೆ. ತಾಲೂಕಿನ ಗಡಿಯಂಚಿನ ದೊಡ್ಡಹೆಜ್ಜೂರು ಗ್ರಾಪಂ ವ್ಯಾಪ್ತಿಯ ನಾಗರಹೊಳೆ ಉದ್ಯಾನಕ್ಕೆ ಹೊಂದಿಕೊಂಡಿರುವ ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿನ ಕೋಣನಹೊಸಳ್ಳಿ ಸಂಕಷ್ಟಕ್ಕೆ ಸಿಲುಕಿರುವ ಕುಗ್ರಾಮ.

Advertisement

ಬದುಕು ಮೂರಾಬಟ್ಟೆ: ಇದು ಹನಗೋಡು ಜಿಪಂ ಸದಸ್ಯ ಕಟ್ಟನಾಯ್ಕ ಅವರ ಗ್ರಾಮವಾಗಿದ್ದು, ಈ ಹಳ್ಳಿಯಲ್ಲಿ 52 ಕುಟುಂಬಗಳಿವೆ. ಬಹುತೇಕ ಅವರವರ ಜಮೀನುಗಳಲ್ಲಿ ನಿರ್ಮಿಸಿಕೊಂಡಿರುವ ಮನೆಗಳಿಗೆ ನದಿಯ ಪ್ರವಾಹದ ನೀರು ನುಗ್ಗಿ ಆರು ಮನೆಗಳು ಕುಸಿದು ಬದ್ದಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ, ಇದೀಗ ಇಡೀ ಗ್ರಾಮಸ್ಥರ ಬದುಕು ಮೂರಾಬಟ್ಟೆಯಾಗಿದೆ.

ಪರಿಹಾರ ನಿರೀಕ್ಷೆ: ಮೂರ್‍ನಾಲ್ಕು ಮನೆಗಳ ಹೊರತುಪಡಿಸಿದರೆ ಜಿಪಂ ಸದಸ್ಯ ಕಟ್ಟನಾಯ್ಕರ ಮನೆಯೂ ಸೇರಿದಂತೆ ಎಲ್ಲರ ಮನೆಗಳ ಗೋಡೆಗಳು ಅಲ್ಲಲ್ಲಿ ಬಿದ್ದು ಹೋಗಿವೆ. ಮನೆಗಳಲ್ಲಿ ನೀರು ನಿಂತು ಇಂದೋ-ನಾಳೆಯೋ ಬೀಳುವಂತಿವೆ. ಎಲ್ಲಾ ಕುಟುಂಬಗಳು ನಿರಾಶ್ರಿತರಾಗಿದ್ದು, ಸರ್ಕಾರದ ಪರಿಹಾರಕ್ಕೆ ಕಾದು ನಿಂತಿದ್ದಾರೆ.

ಆಶ್ರಯ: ಈ ಹಳ್ಳಿಯ ದೇವನಾಯ್ಕ, ಪುಟ್ಟರಾಜನಾಯ್ಕ, ಪುಟ್ಟಮ್ಮ, ಪುಟ್ಟಜಯಮ್ಮ, ಜಗದಾಂಬ, ಪುಟ್ಟನಾಯ್ಕ, ವೇಲಾಯುಧನ್‌ ಮತ್ತಿತರ‌ ಮನೆಗಳು ನೆಲಕಚ್ಚಿವೆ. ಉಳಿದಂತೆ ಪ್ರತಿಯೊಬ್ಬರ ಮನೆಗಳೂ ಶಿಥಿಲಾವಸ್ಥೆ ತಲುಪಿದ್ದು, ವಾಸಿಸಲಾಗದ ಸ್ಥಿತಿಯಲ್ಲಿವೆ. ಕೆಲ ಕುಟುಂಬಗಳು ಗ್ರಾಮದ ಶಾಲೆಯಲ್ಲಿ ಹಾಗೂ ಹಲವರು ನೆಂಟರಿಷ್ಟರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಇಡೀ ಗ್ರಾಮವನ್ನು ಸ್ಥಳಾಂತರಿಸದೆ ಬೇರೆ ದಾರಿ ಇಲ್ಲ.

ಕೊಚ್ಚಿ ಹೋಗಿರುವ ರಸ್ತೆಗಳು: ಕೊಳವಿಗೆಯಿಂದ ಕೋಣನಹೊಸಹಳ್ಳಿವರೆಗೆ 2 ಕಿ.ಮೀ. ರಸ್ತೆಯಲ್ಲಿ ಪ್ರವಾಹದ ನೀರು ಹರಿದು ರಸ್ತೆಯ ಡಾಂಬರ್‌, ಜಲ್ಲಿಯನ್ನು ಹೊತ್ತೂಯ್ದಿದ್ದು, ಅಲ್ಲಲ್ಲಿ ದೊಡ್ಡ ಹೊಂಡಗಳು ಸೃಷ್ಟಿಯಾಗಿ, ಓಡಾಡಲಾಗದ ಸ್ಥಿತಿಗೆ ತಲುಪಿದೆ.

Advertisement

ಬೆಳೆಗಳು ನೀರುಪಾಲು: ರೈತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಹತ್ತಿ, ಜೋಳ, ತಂಬಾಕು, ಬಾಳೆ, ಶುಂಠಿ, ಮರಗೆಣಸು, ಚಂಡು ಹೂ ಸೇರಿದಂತೆ ಎಲ್ಲಾ ಬೆಳೆಗಳು ನೀರುಪಾಲಾಗಿವೆ. ಬಾಳೆ ತೋಟವೊಂದು ಮಣ್ಣಿನ ಸಮೇತ ಕೊಚ್ಚಿಹೋಗಿದ್ದು, ಮೈದಾನದ ರೀತಿ ಗೋಚರಿಸುತ್ತಿದೆ. ಕಾಫಿ ಹಾಗೂ ಮೆಣಸಿನ ಗಿಡಗಳಿಗೆ ಹಾನಿಯಾಗಿದೆ. ಈ ಹಳ್ಳಿಯು ನಾಗರಹೊಳೆ ಉದ್ಯಾನ ಪಕ್ಕದಲ್ಲಿದ್ದು, ವರ್ಷವಿಡೀ ವನ್ಯಜೀವಿಗಳ ಹಾವಳಿ ನಡುವೆಯೇ ಉತ್ತಮ ಬೆಳೆ ಬೆಳೆಯುತ್ತಾರೆ. ಆದರೆ, ಈ ಮಹಾಮಳೆಯಿಂದ ಗ್ರಾಮಸ್ಥರು ಬೀದಿಗೆ ಬಿದ್ದಿದ್ದು, ಮತ್ತೆ ನೆಲೆ ಕಲ್ಪಿಸಿಕೊಳ್ಳಲು ಸರ್ಕಾರದ ನೆರವು ಕಾಯುತ್ತಿದ್ದಾರೆ.

ಗ್ರಾಮ ಸ್ಥಳಾಂತರಕ್ಕೆ ಕ್ರಮ – ತಹಶೀಲ್ದಾರ್‌: ಕೋಣನಹೊಸಹಳ್ಳಿ ಗ್ರಾಮ ಸಂಕಷ್ಟಕ್ಕೆ ಸಿಲುಕಿದ್ದು, ಬಹುತೇಕ ಮನೆಗಳಲ್ಲಿ ವಾಸಿಸಲು ಆಗದಂತ ಸ್ಥಿತಿ ಇದೆ. ಇದಕ್ಕಾಗಿ ಹತ್ತಿರದ ಕೊಳುವಿಗೆಯಲ್ಲಿ ನಾಲ್ಕು ಎಕರೆ ಗ್ರಾಮಠಾಣಾವಿದ್ದು, ಇಡೀ ಊರನ್ನು ಅಲ್ಲಿಗೆ ಸ್ಥಳಾಂತರಿಸುವ ಚಿಂತನೆ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹುಣಸೂರು ತಹಶೀಲ್ದಾರ್‌ ಬಸವರಾಜು ಭರವಸೆ ನೀಡಿದ್ದಾರೆ.

ಇಲ್ಲಿ ನಿತ್ಯ ಕಾಡು ಪ್ರಾಣಿಗಳ ಕಾಟ, ಮತ್ತೂಂದೆಡೆ ಪ್ರವಾಹದಿಂದ ಗ್ರಾಮಸ್ಥರು ನಲುಗಿ ಹೋಗಿದ್ದೇವೆ. ಇಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಈ ಬಾರಿಯ ಪ್ರವಾಹವಂತೂ ನಮ್ಮ ಬದುಕನ್ನೇ ಸರ್ವನಾಶ ಮಾಡಿದೆ. ನಮಗೀಗ ಉಳಿದಿರುವುದು ಇಡೀ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಬೇಕಿದೆ.
-ಕಟ್ಟನಾಯಕ, ಜಿಪಂ ಸದಸ್ಯ, ಕೋಣನಹೊಸಹಳ್ಳಿ

ಗ್ರಾಮದ ಎಲ್ಲಾ ಕುಟುಂಬಗಳು ಪ್ರವಾಹದ ಸಂಕಷ್ಟಕ್ಕೆ ಸಿಲುಕಿವೆ. ನಮ್ಮ ಮನೆ ಕಣ್ಣೆದುರೇ ಬಿದ್ದು ಹೋಯಿತು. ಮುಂದಿನ ಬದುಕು ಹೇಗೆಂಬುದು ದಾರಿ ಕಾಣದಾಗಿದೆ. ಸರ್ಕಾರ ನಮ್ಮೂರಿನ ಕಷ್ಟವನ್ನರಿತು ಸೂಕ್ತ ಪರಿಹಾರದೊಂದಿಗೆ ಹೊಸ ಮನೆಗಳನ್ನು ನಿರ್ಮಿಸಿಕೊಟ್ಟು, ಬದುಕು ಕಟ್ಟಿಕೊಡಲಿ.
-ಪುಟ್ಟಮ್ಮ, ಕೋಣನಹೊಸಹಳ್ಳಿ

* ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next