Advertisement

ಪ್ರವಾಹ ಪ್ರಹಾರ

12:41 PM Aug 06, 2019 | Team Udayavani |
ಬೆಳಗಾವಿ: ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಮಳೆಯ ರಭಸದ ಆಟ ಮುಂದುವರಿದಿದೆ. ನದಿಗಳ ಅಬ್ಬರ ಹೆಚ್ಚುತ್ತಲೇ ಇದೆ. ಇದೆಲ್ಲದರ ಪರಿಣಾಮ ಚಿಕ್ಕೋಡಿ, ಅಥಣಿ, ರಾಯಬಾಗ, ಗೋಕಾಕ, ಖಾನಾಪುರ ತಾಲೂಕುಗಳಲ್ಲಿ ನದಿಗಳ ಪ್ರವಾಹದ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಭಾರೀ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ರಾಮದುರ್ಗ ತಾಲೂಕು ಹೊರತುಪಡಿಸಿ ಜಿಲ್ಲೆಯ ಉಳಿದ ಎಲ್ಲ ತಾಲೂಕುಗಳ ಶಾಲೆಗಳಿಗೆ ಆ.6 ಹಾಗೂ 7 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿ ಅದೇಶ ಹೊರಡಿಸಿದ್ದಾರೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ದೂದಗಂಗಾ ಹಾಗೂ ವೇದಗಂಗಾ ನದಿಗಳ ಪ್ರವಾಹದಿಂದ ಚಿಕ್ಕೋಡಿ, ಅಥಣಿ, ರಾಯಬಾಗ, ಖಾನಾಪುರ, ಮೂಡಲಗಿ, ಕಾಗವಾಡ ಹಾಗೂ ಗೋಕಾಕ ತಾಲೂಕುಗಳಲ್ಲಿ 30 ಸೇತುವೆಗಳು ನೀರಿನಲ್ಲಿ ಮುಳುಗಿ ಸಂಪರ್ಕ ಕಡಿತಗೊಂಡಿದೆ. ಯುವಕ ನೀರುಪಾಲು: ಈ ಮಧ್ಯೆ ಕುಂಭದ್ರೋಣ ಮಳೆಗೆ ಕೃಷ್ಣೆಯ ಪ್ರವಾಹ ಪ್ರಹಾರಕ್ಕೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಕೃಷ್ಣಾ ನದಿ ದಡದ ಅಥಣಿ ತಾಲೂಕಿನ ಗ್ರಾಮದಲ್ಲಿ ಜಾನುವಾರುಗಳಿಗೆ ಮೇವು ನೀಡಲು ಹೋಗಿದ್ದ ಯುವಕನೊಬ್ಬ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಮಾರುತಿ ಜಾಧವ್‌ (34) ಮೃತ ವ್ಯಕ್ತಿ. ಹುಲಗಬಾಳಿ ಗ್ರಾಮದ ಮಾಂಗ ತೋಟದ ಮನೆಯ ಬಳಿ ಈ ಘಟನೆ ನಡೆದಿದೆ. ರವಿವಾರ ಜಾನುವಾರುಗಳನ್ನು ತೋಟದ ಮನೆಯಲ್ಲೇ ಬಿಟ್ಟು ಕೇವಲ ಮಾರುತಿ ಕುಟುಂಬದ ಸದಸ್ಯರನ್ನು ಮಾತ್ರ ಸ್ಥಳಾಂತರಿಸಲಾಗಿತ್ತು. ಆದರೆ ತಮ್ಮ ಜಾನುವಾರುಗಳು ತೋಟದ ಮನೆಯಲ್ಲೇ ಇದ್ದದ್ದರಿಂದ ಬೆಳಿಗ್ಗೆ ಅವುಗಳಿಗೆ ಮೇವು ಹಾಕಲು ಬಂದಿದ್ದ ಮಾರುತಿ ನೀರಿನ ರಭಸಕ್ಕೆ ಸಿಲುಕಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಕೊಯ್ನಾ ಜಲಾಶಯ ವ್ಯಾಪ್ತಿಯ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಲೇ ಇದ್ದು ಕೃಷ್ಣಾ ನದಿಯ ಹರಿವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಇದರಿಂದ ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕಿನ ನದಿ ತೀರದಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. 2005ರಲ್ಲಿ ಬೆಳಗಾವಿ ಜಿಲ್ಲೆಗೆ ಸಾಕಷ್ಟು ಆತಂಕ ಹಾಗೂ ಹಾನಿ ಉಂಟುಮಾಡಿದ್ದ ಮಹಾರಾಷ್ಟ್ರದ ಕೊಯ್ನಾ ಹಾಗೂ ವಾರಣಾ ಜಲಾಶಯ ಭರ್ತಿಯಾಗಿವೆ. ಸದ್ಯದ ಮಾಹಿತಿ ಪ್ರಕಾರ ಕೊಯ್ನಾ ಜಲಾಶಯದಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ಹಾಗೂ ವಾರಣಾ ಜಲಾಶಯದಿಂದ 34 ಸಾವಿರ ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ವಾರಣಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದರೆ ಒಟ್ಟು 105 ಟಿಎಂಸಿ ಸಾಮರ್ಥ್ಯದ ಕೊಯ್ನಾ ಜಲಾಶಯದಲ್ಲಿ ಈಗ 100 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಿಂದ ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್‌ ಮೂಲಕ 2,27,068 ಹಾಗೂ ದೂಧಗಂಗಾ ನದಿಯಿಂದ 37,312 ಸೇರಿ ಒಟ್ಟು 2,64,380 ಕ್ಯೂಸೆಕ್‌ ನೀರು ಬರುತ್ತಿದೆ.
ಮಳೆ ಆರ್ಭಟದಿಂದ ಮುಳುಗಿದ ಸೇತುವೆಗಳು:

ಚಿಕ್ಕೋಡಿ ತಾಲೂಕು ಕಲ್ಲೋಳ-ಯಡೂರ, ಸದಲಗಾ-ಬೋರಗಾಂವ, ಕಾರದಗಾ-ಭೋಜ, ಬೋಜವಾಡಿ-ಕುನ್ನೂರ. ಯಕ್ಸಂಬಾ-ದಾನವಾಡ, ಸಿದ್ನಾಳ-ಅಕ್ಕೋಳ, ಜತ್ರಾಟ-ಭೀವಶಿ ಹಾಗೂ ಮಲಿಕವಾಡ- ದತ್ತವಾಡ ಸೇತುವೆಗಳು. ಅಥಣಿ: ನದಿ ಇಂಗಳಗಾವ-ತೀರ್ಥ, ಸಪ್ತಸಾಗರ-ಬಾವನಸವದತ್ತಿ, ಕೊಕಟನೂರ-ಶಿರಹಟ್ಟಿ. ಜುಂಜರವಾಡ-ತುಬಚಿ, ಖವಟಕೊಪ್ಪ-ಶೇಗುಣಸಿ, ಕಾಗವಾಡ ತಾಲೂಕು: ಉಗಾರ ಕೆ ಎಚ್-ಉಗಾರ ಬಿ ಕೆ ರಸ್ತೆ. ರಾಯಬಾಗ ತಾಲೂಕು: ಕುಡಚಿ ಸೇತುವೆ, ರಾಯಬಾಗ-ಚಿಂಚಲಿ.ಗೋಕಾಕ: ಶಿಂಗಳಾಪುರ-ಗೋಕಾಕ, ಚಿಗಡೊಳ್ಳಿ-ನಲ್ಲಾನಟ್ಟಿ. ಉದಗಟ್ಟಿ-ವಡೇರಹಟ್ಟಿ. ಮೂಡಲಗಿ: ಸುಣಧೋಳಿ-ಮೂಡಲಗಿ. ಢವಳೇಶ್ವರ-ಮಹಾಲಿಂಗಪುರ. ಹುಣಶ್ಯಾಳ ಪಿ. ಖಾನಾಪುರ: ಮಂತುರ್ಗಾ, ತಿವೋಲಿ, ನಿಲವಡೆ, ಹಾಲತ್ರಿ, ಹಬ್ಟಾನಟ್ಟಿ, ಪಾರಿಶ್ವಾಡ ಹಾಗೂ ಡುಕ್ಕರವಾಡಿ.
ಪಾಲಿಕೆ ಸಹಾಯವಾಣಿ ಕೇಂದ್ರ:

ಕಳೆದ 10 ದಿನಗಳಿಂದ ಬೆಳಗಾವಿ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಅತಿಯಾದ ಮಳೆಯಿಂದ ತೊಂದರೆಗೆ ಒಳಗಾಗುವ ನಗರ ವ್ಯಾಪ್ತಿಯ ತಗ್ಗು ಪ್ರದೇಶದ ವಾಸಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮಹಾನಗರಪಾಲಿಕೆಯ ವತಿಯಿಂದ ರಕ್ಷಣಾ ಕಾರ್ಯಾಚರಣೆಯ ತಂಡಗಳನ್ನು ರಚಿಸಲಾಗಿದೆ. ಮಳೆಯಿಂದ ತೊಂದರೆಗೆ ಒಳಗಾಗುವ ನಗರ ವಾಸಿಗಳ ಅನುಕೂಲಕ್ಕಾಗಿ ದೂರು ಸ್ವೀಕರಿಸಲು 24ಗಂಟೆಗಳ ಕಾಲ ಕಾರ್ಯನಿರತವಿರುವ ಸಹಾಯವಾಣಿ ಕೇಂದ್ರವನ್ನು ಪಾಲಿಕೆಯ ಮುಖ್ಯ ಕಚೇರಿಯಲ್ಲಿ ನಿರ್ವಹಿಸಲಾಗುತ್ತಿದೆ. ಪಾಲಿಕೆಯ ವತಿಯಿಂದ ರಚಿಸಲಾದ ರಕ್ಷಣಾ ಕಾರ್ಯಾಚರಣೆಯ ತಂಡಗಳ ಸಹಾಯ ಪಡೆಯಲು ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 0831-2405316 ಅಥವಾ 2405337ನ್ನು ಸಂಪರ್ಕಿಸಬಹುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತ ಇನ್ನು ಬೆಳಗಾವಿ ನಗರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸೋಮವಾರ ಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ತೊಂದರೆ ಉಂಟುಮಾಡಿದೆ. ಇನ್ನೊಂದು ಕಡೆ ಬಳ್ಳಾರಿ ನಾಲಾ ಸಹ ಸಂಪೂರ್ಣ ತುಂಬಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಭತ್ತದ ಗದ್ದೆಗಳಿಗೆ ನುಗ್ಗಿ ರೈತ ಸಮುದಾಯದಲ್ಲಿ ಸಾಕಷ್ಟು ಆತಂಕ ಉಂಟುಮಾಡಿದೆ.
• ಕೇಶವ ಆದಿ 
Advertisement

Udayavani is now on Telegram. Click here to join our channel and stay updated with the latest news.

Next