Advertisement

ಕುಕ್ಕೆ: ಸ್ನಾನಘಟ್ಟ , ಕೃಷಿಭೂಮಿ ಜಲಾವೃತ ; ಸೇತುವೆಯೂ ಮುಳುಗಡೆ

01:45 AM Aug 10, 2018 | Team Udayavani |

ಸುಬ್ರಹ್ಮಣ್ಯ: ಮಂಗಳವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪುಣ್ಯ ನದಿ ಕುಮಾರಧಾರಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸ್ನಾನಘಟ್ಟವೂ ಸಂಪೂರ್ಣ ಜಲಾವೃತ ಸ್ಥಿತಿಯಲ್ಲಿದ್ದು, ಪಕ್ಕದ ಮಂಜೇಶ್ವರ-ಸುಬ್ರಹ್ಮಣ್ಯ ಸೇತುವೆ ಗುರುವಾರ ಮುಳುಗಡೆಗೊಂಡಿತ್ತು. ಗ್ರಾಮೀಣ ಪ್ರದೇಶದಲ್ಲೂ ನದಿ ತೊರೆ, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ಎಲ್ಲೆಡೆ ಪ್ರವಾಹವೇ ಕಂಡುಬರುತ್ತಿದೆ.

Advertisement

ಸ್ನಾನಘಟ್ಟ ಜಲಾವೃತ
ಘಟ್ಟ ಪ್ರದೇಶ ಮತ್ತು ಸ್ಥಳೀಯವಾಗಿ ಸುರಿದ ಮಳೆಯ ಪರಿಣಾಮ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದೆ. ಕುಮಾರ ಧಾರಾ ಸ್ನಾನಘಟ್ಟ ಮಂಗಳವಾರದಿಂದ ಮುಳುಗಡೆ ಸ್ಥಿತಿಯಲ್ಲೇ ಇದೆ. ಗುರುವಾರ ಅತ್ಯಧಿಕ ಪ್ರಮಾಣದಲ್ಲಿ ನೆರೆ ಕಂಡು ಬಂದಿದೆ. ಭಕ್ತರ ಅನುಕೂಲಕ್ಕಾಗಿ ಸ್ನಾನ ಘಟ್ಟದಲ್ಲಿ ನಿರ್ಮಿಸಿದ ಶೌಚಾಲಯ, ಬಟ್ಟೆ ಬದಲಿಸುವ ಕೊಠಡಿ ಸಂಪೂರ್ಣ ಮುಳುಗಡೆಗೊಂಡಿತ್ತು.

ರಸ್ತೆ ಬಂದ್‌
ಕ್ಷೇತ್ರದಲ್ಲಿ ಹರಿಯುವ ಉಪನದಿ ದರ್ಪಣ ತೀರ್ಥ ನದಿ ಕೂಡ ನೆರೆಯಿಂದ ತುಂಬಿ ಹರಿಯುತ್ತಿದೆ. ಇದೇ ನದಿ ಕುಮಾರಧಾರ ನದಿಗೆ ಸಂಗಮವಾಗುವ ಕುಮಾರಧಾರ ಬಳಿ ಇರುವ ಸುಬ್ರಹ್ಮಣ್ಯ-ಮಂಜೇಶ್ವರ ನಡುವಿನ ಸಂಪರ್ಕ ರಸ್ತೆ ಮೇಲಿನ ಸೇತುವೆ ಕೂಡ ಗುರುವಾರ ಬೆಳಗ್ಗೆ 9ರ ವೇಳೆಗೆ ಮುಳುಗಡೆಗೊಂಡಿತ್ತು. ಹೀಗಾಗಿ ಪುತ್ತೂರು, ಕಾಣಿಯೂರು, ಬೆಳ್ಳಾರೆ, ಪಂಜ, ಯೇನೆಕಲ್ಲು ಭಾಗಕ್ಕೆ ಸಂಪರ್ಕ ಕಡಿತಗೊಂಡಿತ್ತು. ದಿನದ ಬಹುತೇಕ ಅವಧಿ ಈ ಸೇತುವೆ ಮುಳುಗಿದ್ದ ಕಾರಣ ವಾಹನ ಸವಾರರು, ಪ್ರಯಾಣಿಕರು ತೊಂದರೆಗೆ ಒಳಗಾದರು. ಇಲ್ಲಿನ ಪರ್ವತಮುಖೀ ಸರಕಾರಿ ಆಸ್ಪತ್ರೆಗೆ ತೆರಳುವವರಿಗೂ ಸಮಸ್ಯೆಯಾಯಿತು.

ಎಲ್ಲೆಲ್ಲೂ ನೀರೇ ನೀರು
ಕುಮಾರಧಾರಾ ಸಹಿತ ಗ್ರಾಮೀಣ ಭಾಗದಲ್ಲಿ ಹರಿಯುತ್ತಿರುವ ನದಿಗಳು ಉಕ್ಕಿ ಹರಿದಿದ್ದರಿಂದ ಹಲವು ಕೃಷಿ ತೋಟಗಳು ಜಲಾವೃತವಾಗಿವೆ. ಕೃಷಿಕರ ತೋಟದ ಅನೇಕ ಫಲವಸ್ತುಗಳು ಹಾಗೂ ತೋಟಕ್ಕೆ ಹಾಕಿದ ಗೊಬ್ಬರ ನೀರು ಪಾಲಾಗಿದೆ. ಸುಬ್ರಹ್ಮಣ್ಯ- ಉಪ್ಪಿನಂಗಡಿ- ಮಂಗಳೂರು, ಸುಬ್ರಹ್ಮಣ್ಯ- ಮರ್ದಾಳ- ಧರ್ಮಸ್ಥಳಕ್ಕೆ ಸಂಚಾರ ವ್ಯವಸ್ಥೆ ಒದಗಿಸುವ ಬಿಳಿನೆಲೆ ಸಮೀಪದ ನೆಟ್ಟಣ ಸೇತುವೆ, ಬಿಳಿನೆಲೆ ಸೇತುವೆ ಗುರುವಾರ ಮುಳುಗಡೆಗೊಂಡಿತು. ಧರ್ಮಸ್ಥಳ, ಮಂಗಳೂರು ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾದರು.

ಗ್ರಾಮಾಂತರದಲ್ಲೂ ಮಳೆ ಅಟ್ಟಹಾಸ
ಮಳೆಗೆ ಬಾಳುಗೋಡು ಸಮೀಪದ ಪದಕ, ಐನಕಿದುವಿನ ಗುಂಡಡ್ಕ, ಕೊಪ್ಪಡ್ಕ ಸೇತುವೆಗಳು ಮುಳುಗಡೆ ಭೀತಿಯಲ್ಲಿದ್ದವು. ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಗುತ್ತಿಗಾರು, ಪಂಜ, ಬಳ್ಪ, ಏನೆಕಲ್‌, ನಿಂತಿಕಲ್‌, ಬಿಳಿನೆಲೆ, ನೆಟ್ಟಣ ಮೊದಲಾದೆಡೆ ನಿರಂತರ ಮಳೆಯಾಗಿ ಈ ಪರಿಸರದ ನದಿ ತೊರೆಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿವೆ.

Advertisement

ಶಿಕ್ಷಣ ಸಂಸ್ಥೆಗಳಿಗೆ ರಜೆ
ಮಳೆ ಪ್ರಮಾಣ ತೀವ್ರಗೊಂಡ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಹಾಗೂ ಗ್ರಾಮೀಣ ಭಾಗದ ಅಂಗನವಾಡಿ ಸಹಿತ ಶಾಲಾ ಕಾಲೇಜುಗಳಿಗೆ ಶಾಲಾ ಮುಖ್ಯಸ್ಥರು ಗುರುವಾರ ರಜೆ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next