ಮಡಿಕೇರಿ: ಅತಿವೃಷ್ಟಿಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ತೋಟ, ಗದ್ದೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಕನಿಷ್ಟ 15 ಸೆಂಟ್ಸ್ ಜಾಗವನ್ನು ಒಳಗೊಂಡಂತೆ ಮನೆಯನ್ನು ಮಂಜೂರು ಮಾಡಬೇಕೆಂದು ಮಕ್ಕಂದೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಹಾಗೂ ಮಳೆಹಾನಿ ಸಂತ್ರಸ್ತ ಕೆ.ಟಿ.ಅನುಕೂಲ್, ಮಹಾಮಳೆಯಿಂದ ಮಕ್ಕಂದೂರು, ಹೆಮ್ಮೆತ್ತಾಳು ಹಾಗೂ ಮೇಘತ್ತಾಳು ಗ್ರಾಮ ವ್ಯಾಪ್ತಿಯಲ್ಲಿ ಸಾಕಷ್ಟು ಜಮೀನು ಕೊಚ್ಚಿಹೋಗಿದ್ದು, ಈಗಲೂ ಆ ಪ್ರದೇಶ ಅಪಾಯದ ಸ್ಥಿತಿ ಯಲ್ಲಿದೆ. ಅಳಿದು ಉಳಿದಿರುವ ಕಾಫಿ ತೋಟದ ಕಾಫಿ ಫಸಲನ್ನು ಒಣಗಿಸಲು ಮತ್ತು ದಾಸ್ತಾನು ಮಾಡಲು ಜಾಗದ ಕೊರತೆ ಎದುರಾಗಿದ್ದು, ಸಂತ್ರಸ್ತರಿಗೆ ಮನೆಯೊಂದಿಗೆ ಕಣ, ಗೋದಾಮು, ದನದ ಕೊಟ್ಟಿಗೆಗಳ ನಿರ್ಮಾಣಕ್ಕೆ ಪೂರಕವಾಗಿ 15 ಸೆಂಟ್ಸ್ ಜಾಗವನ್ನು ಮೀಸಲಿಡಬೇಕೆಂದು ತಿಳಿಸಿದರು. ಬೆಳೆಗಾರರಿಗೆ ಅಗತ್ಯವಾಗಿ ಗೋದಾಮು, ಕಣ ಹಾಗೂ ವಾಹನ ನಿಲ್ಲಿಸಲು ಜಾಗದ ಅಗತ್ಯವಿದ್ದು, ಎರಡು ಮುಕ್ಕಾಲು ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಿಸಿ ಕೊಟ್ಟರೆ ಯಾವುದೇ ಉಪಯೋಗವಿಲ್ಲವೆಂದರು. ಜಿಲ್ಲಾಡಳಿತ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಲ್ಲದೆ, ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಅನುಕೂಲ್ ಎಚ್ಚರಿಕೆ ನೀಡಿದರು.
ಹೋರಾಟ ಸಮಿತಿಗಳಲ್ಲಿ ರಾಜಕೀಯ ಬೆರೆತಿರುವುದರಿಂದ ಮತ್ತು ರಾಜಕೀಯ ಮುಖಂಡರುಗಳು ತಮಗೆ ಬೇಕಾದವರ ಹೆಸರನ್ನು ಮಾತ್ರ ಸಂತ್ರಸ್ತರ ಪಟ್ಟಿಯಲ್ಲಿ ಸೇರಿಸಿರುವುದರಿಂದ ಗ್ರಾಮಸ್ಥರೆ ಪ್ರತ್ಯೇಕವಾಗಿ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು. ಅತಿವೃಷ್ಟಿಯಿಂದ ಯಾವುದೇ ಹಾನಿಯಾಗದವರು ಕೂಡ ಸರಕಾರದ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ, ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿ ಸಿದವರಿಗೆ ಇಲ್ಲಿಯವರೆಗೆ ಸೌಲಭ್ಯ ದೊರೆತಿಲ್ಲವೆಂದು ಅನುಕೂಲ್ ಬೇಸರ ವ್ಯಕ್ತಪಡಿಸಿದರು. ತಾಲ್ಲೂಕು ಕಚೇರಿಯಲ್ಲಿ ಅರ್ಹ ಪಲಾನುಭವಿಗಳಿಗೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ, ಪರಿಹಾರ ನೀಡಬೇಕಾದರೆ ಶೇಕಡವಾರು ಕಮಿಷನ್ ಕೇಳುತ್ತಿರುವುದಲ್ಲದೆ, ಎಂದು ಆರೋಪಿಸಿದರು.
ಗ್ರಾಮಸ್ಥ ಟಿ.ಕೆ.ಕುಶಾಲಪ್ಪ ಮಾತನಾಡಿ, ರೈತರು ಕಷ್ಟಪಟ್ಟು ಬೆಳೆದ ಕೃಷಿ ಫಸಲು ಸೇರಿದಂತೆ ಇಡೀ ಜಮೀನು ನಾಶವಾಗಿದ್ದು, ಹಾನಿ ಸಂಭವಿಸಿ ಇಷ್ಟು ದಿನಗಳು ಕಳೆದಿದ್ದರು ವಿಕೋಪಕ್ಕೆ ಒಳಗಾದ ಸಾಕಷ್ಟು ಪ್ರದೇಶಕ್ಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದರು. ಪ್ರಾಕೃತಿಕ ವಿಕೋಪ ಸಂದರ್ಭ ಹಾನಿಗೊಳಗಾಗಿರುವ ವಾಹನಗಳಿಗೆ ಕೂಡ ಸರಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಕುಶಾಲಪ್ಪ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ದೇವಿಪ್ರಸಾದ್ ಹಾಗೂ ಎ.ಪಿ. ತೀರ್ಥಕುಮಾರ್ ಉಪಸ್ಥಿತರಿದ್ದರು.
ಇನ್ನೂ ಸಿಗದ ಪರಿಹಾರ
ತನ್ನ ವಾಸದ ಮನೆಗೂ ಕೂಡ ಸಾಕಷ್ಟು ಹಾನಿಯಾಗಿದ್ದು, ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಗ್ರಾಮ ಲೆಕ್ಕಿಗರು ಸ್ಥಳ ಪರಿಶೀಲನೆ ನಡೆಸಿ ಮನೆ ಇರುವ ಪ್ರದೇಶ ವಾಸಕ್ಕೆ ಯೋಗ್ಯವಿಲ್ಲವೆಂದು ತಿಳಿಸಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರೂ, ನಿಮಗೆ ನಿವೃತ್ತಿ ವೇತನ ಬರುತ್ತದೆ ಮತ್ತು ನಿಮ್ಮ ಪತ್ನಿಗೆ ಉದ್ಯೋಗವಿದೆ ಎಂದು ಹೇಳಿ ಪರಿಹಾರದ ಪಟ್ಟಿಯಿಂದ ನಮ್ಮನ್ನು ಕೈ ಬಿಡಲಾಗಿದೆ. ಇಪ್ಪತ್ತು ವರ್ಷಗಳ ಕಾಲ ಸೈನಿಕನಾಗಿ ದುಡಿದ ನಾನು ಇಂದು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ನನಗೆ ಸರಕಾರದ ಪರಿಹಾರ ದೊರೆಯದಂತೆ ಮಾಡಿದ್ದಾರೆ ಎಂದು ಮಾಜಿ ಸೈನಿಕ ಬಿ.ಎಸ್.ವಿಜಯ ಬೇಸರ ವ್ಯಕ್ತಪಡಿಸಿದರು.