ಕರಾಚಿ:ಪ್ರವಾಹ ಸಂತ್ರಸ್ತರನ್ನು ಕರೆದೊಯ್ಯುತ್ತಿದ್ದ ಹವಾನಿಯಂತ್ರಿತ ಖಾಸಗಿ ಬಸ್ ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ 20 ಮಂದಿ ಸಜೀವ ದಹನವಾಗಿದ್ದು, ಹಲವು ಜನರು ಗಾಯಗೊಂಡಿರುವ ಘಟನೆ ಬುಧವಾರ (ಅಕ್ಟೋಬರ್ 13) ಪಾಕಿಸ್ತಾನದ ನೂರಿಯಾಬಾದ್ ಸಮೀಪದ ಎಂ 9 ಹೆದ್ದಾರಿ ಪ್ರದೇಶದಲ್ಲಿ ಸಂಭವಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಲ್ಪೆ : ಕಡಲಿಗಿಂತ ಅಪಾಯಕಾರಿ ಈ ಬಂದರು, 5 ವರ್ಷಗಳಲ್ಲಿ 100ಕ್ಕೂ ಅಧಿಕ ಜೀವಬಲಿ
ಮಾಧ್ಯಮದ ವರದಿ ಪ್ರಕಾರ, ಪಾಕ್ ನ ಹೈದರಾಬಾದ್ ನಿಂದ ಪ್ರವಾಹ ಸಂತ್ರಸ್ತರನ್ನು ಕರಾಚಿಗೆ ಹವಾನಿಯಂತ್ರಿತ ಖಾಸಗಿ ಬಸ್ ನಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿರುವುದಾಗಿ ವಿವರಿಸಿದೆ.
ಘಟನೆಯಲ್ಲಿ 20 ಮಂದಿ ಸಾವನ್ನಪ್ಪಿದ್ದು, ಹಲವು ಜನರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ಶವಗಳನ್ನು ಹೊರತೆಗೆದು, ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನೂರಿಯಾಬಾದ್ ಪೊಲೀಸ್ ಠಾಣಾಧಿಕಾರಿ ಹಶೀಂ ಬರೋಹಿ ತಿಳಿಸಿರುವುದಾಗಿ ವರದಿಯಾಗಿದೆ.
ಅವಘಡದಲ್ಲಿ ಸಜೀವವಾಗಿ ದಹನಗೊಂಡ ಕುಟುಂಬದ ಸದಸ್ಯರಿಗೆ ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಸಂತಾಪ ವ್ಯಕ್ತಪಡಿಸಿದ್ದು, ಗಾಯಗೊಂಡವರಿಗೆ ಎಲ್ಲಾ ರೀತಿಯ ವೈದ್ಯಕೀಯ ನೆರವು ನೀಡುವಂತೆ ಜಾಮ್ ಶೋರೋ ಡೆಪ್ಯುಟಿ ಕಮಿಷನರ್ ಗೆ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.